ಮುಂಬೈನ ಪೈಧುನಿ ಪ್ರದೇಶದಲ್ಲಿ ರಾತ್ರಿ ಬಿರಿಯಾನಿ ತಿಂದ ನಂತರ ಕಲ್ಲಂಗಡಿ ಹಣ್ಣು ಸೇವಿಸಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಅವರು ತಿಂದಿದ್ದ ಬಿರಿಯಾನಿ ಅಥವಾ ಕಲ್ಲಂಗಡಿ ಹಣ್ಣಿನಲ್ಲಿ ವಿಷವಿತ್ತೇ ಅಥವಾ ಎರಡರ ಮಿಶ್ರಣವು ದೇಹದಲ್ಲಿ ಕೆಟ್ಟ ಪ್ರತಿಕ್ರಿಯೆ ಉಂಟುಮಾಡಿ ಸಾವಿಗೆ ದಾರಿಯಾಯತೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಅಬ್ದುಲ್ಲಾ ದೋಕಾಡಿಯಾ (40), ಪತ್ನಿ ನಸ್ರೀನ್ (35) ಹಾಗೂ ಮಕ್ಕಳಾದ ಆಯೇಷಾ (16) ಮತ್ತು ಜೈನಾಬ್ (13) ಮೃತಪಟ್ಟವರು. ರಾತ್ರಿ ಊಟ ಮುಗಿಸಿ ಮಲಗಿದ್ದ ಅವರಿಗೆ ತಡರಾತ್ರಿ ವಾಂತಿ-ಬೇಧಿ ಶುರುವಾಗಿ ಆರೋಗ್ಯ ಬಿಗಡಾಯಿಸಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಅಸು ನೀಗಿದ್ದಾರೆ.
ಕುಟುಂಬದ ಸದಸ್ಯರೊಬ್ಬರು ಸಾವಿನ ಹಿಂದಿನ ಹಿಂದಿನ ರಾತ್ರಿ ಬಿರಿಯಾನಿ ಮತ್ತು ಕಲ್ಲಂಗಡಿ ತಿಂದಿದ್ದಾಗಿ ಹೇಳಿದ್ದಾರೆ. ಕಟು ಮಸಾಲೆ ಇರುವ ಬಿರಿಯಾನಿ ತಿಂದ ಮೇಲೆ ಅತಿ ನೀರಿನಂಶವಿರುವ ಕಲ್ಲಂಗಡಿ ತಿಂದಿದ್ದರಿಂದ ದೇಹದೊಳಗೆ ಅನಪೇಕ್ಷಿತ ರಾಸಾಯನಿಕ ಪ್ರತಿಕ್ರಿಯೆ ಉಂಟಾಯಿತಾ ಎಂಬ ಬಗ್ಗೆ ವೈದ್ಯರು ಸಂಶೋಧನೆ ನಡೆಸುತ್ತಿದ್ದಾರೆ.
ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಹಾರದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಬಿರಿಯಾನಿ ತಯಾರಿಸಲು ಬಳಸಿದ ಪದಾರ್ಥಗಳಲ್ಲಿ ವಿಷವಿತ್ತೇ ಅಥವಾ ಕಲ್ಲಂಗಡಿ ಹಣ್ಣಿಗೆ ಬಳಸಿದ ರಾಸಾಯನಿಕಗಳು ಸಾವಿಗೆ ಕಾರಣವಾಯಿತೇ ಎಂಬುದು ವರದಿ ಬಂದ ಬಳಿಕ ಖಚಿತವಾಗಲಿದೆ.


