ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟವುಂಟಾಗಿ 32 ಕಾರ್ಮಿಕರು ಮೃತಪಟ್ಟಿದ್ದಾರೆ. ಹಲವು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾ ಹೊರವಲಯದಲ್ಲಿ ಕಾರ್ಯಾಚರಿಸುತ್ತಿದ್ದ ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಅನಿಲ ಶೇಖರಣೆಗೊಂಡಿರುವುದರಿಂದ ಸ್ಫೋಟ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಗಣಿಯೊಳಗೆ ಮೀಥೇನ್ ಅನಿಲ ಸ್ಫೋಟಗೊಂಡು ಆಮ್ಲಜನಕದ ಮಟ್ಟ ಶೂನ್ಯಕ್ಕೆ ಕುಸಿದಿರುವುದರಿಂದ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಬಹಳಷ್ಟು ಕಡಿಮೆ ಎಂದು ಸರ್ಕಾರಿ ಗಣಿ ಇಲಾಖೆಯ ಇನ್ಸ್ಪೆಕ್ಟರ್ ಘನಿ ಬಲೋಚ್ ತಿಳಿಸಿದ್ದಾರೆ.
ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ ೩೨ ಶವಗಳನ್ನು ಹೊರ ತೆಗೆದಿದೆ. 10ಕ್ಕೂ ಹೆಚ್ಚು ಕಾರ್ಮಿಕರು ಗಣಿಯೊಳಗೆ ಸಿಲುಕಿಕೊಂಡಿದ್ದಾರೆಂದು ಅಂದಾಜಿಸಲಾಗಿದೆ. ದುರಂತದ ಕುರಿತಂತೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ಸುರಕ್ಷತಾ ನಿಯಮಗಳ ಮರು ಪರಿಶೀಲನೆಗೆ ಸರ್ಕಾರ ಸೂಚನೆ ನೀಡಿದೆ. ಗಣಿ ಮಾಲೀಕರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಕಾರ್ಮಿಕ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ.


