Menu

ಔರಾದ್‌ನಲ್ಲಿ ಮಾವಿನ ಹಣ್ಣು ತಿಂದು ಕುಟುಂಬ ಅಸ್ವಸ್ಥ: ಸೋದರಿಯರಿಬ್ಬರ ಸಾವು

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಶೆಂಬಳ್ಳಿ ಗ್ರಾಮದಲ್ಲಿ ರಾತ್ರಿ ಊಟದ ಬಳಿಕ ಮಾವಿನ ಹಣ್ಣು ತಿಂದ ಒಂದೇ ಕುಟುಂಬದ ಇಬ್ಬರು ಸಹೋದರಿಯರು ಅಸ್ವಸ್ಥಗೊಂಡು ಚಿಕಿತ್ಸೆ ಫಲಿಸದೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ. ಕೃತಕ ರಾಸಾಯನಿಕಗಳಿಂದ ಮಾಗಿಸಲಾದ ಮಾವಿನ ಹಣ್ಣಿನಿಂದ ಈ ದುರಂತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

ಶೆಂಬಳ್ಳಿ ಗ್ರಾಮದ ನಿವಾಸಿಗಳಾದ ಭವಾನಿ ವೈಜಿನಾಥ್ ಮೇತ್ರೆ (17) ಹಾಗೂ ಸಂಧ್ಯಾರಾಣಿ ಮೇತ್ರೆ (14) ಮೃತಪಟಟ್ಟ ಸೋದರಿಯರು. ತಾಯಿ ಇಂದುಮತಿ ಹಾಗೂ ಅವರ ಮೂರು ಹೆಣ್ಣುಮಕ್ಕಳು ಮನೆಯಲ್ಲಿ ರಾತ್ರಿ ಊಟ ಮುಗಿಸಿದ್ದಾರೆ. ಊಟದ ನಂತರ ಎಲ್ಲರೂ ಸೇರಿ ಮಾವಿನ ಹಣ್ಣು ಸೇವಿಸಿದ್ದಾರೆ. ಹಣ್ಣು ತಿಂದ ಕೆಲವೇ ಸಮಯದೊಳಗೆ ಕುಟುಂಬದ ಎಲ್ಲರಿಗೂ ತೀವ್ರ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ.

ಸ್ಥಿತಿ ಗಂಭೀರವಾಗುತ್ತಿದ್ದಂತೆ ಕುಟುಂಬ ಸದಸ್ಯರು ತಕ್ಷಣ ಎಲ್ಲರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ನಾರಾಯಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಭವಾನಿ ಮತ್ತು ಸಂಧ್ಯಾರಾಣಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ತಾಯಿ ಇಂದುಮತಿ ಹಾಗೂ ಮತ್ತೊಬ್ಬ ಪುತ್ರಿ ವಿಜಯಶ್ರೀ ಅವರ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ತೀವ್ರ ನಿಗಾದಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ. ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತ ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದೆ. ನಿಜವಾದ ಕಾರಣ ತಿಳಿಯಲು ಪ್ರಯೋಗಾಲಯದ ವರದಿ ಬರಬೇಕಿದೆ.

Related Posts

Leave a Reply

Your email address will not be published. Required fields are marked *