Menu

ಕುಡಿಯುವ ನೀರು: ಗ್ರಾಮೀಣ ಭಾಗದ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ 1 ಕೋಟಿ ರೂ.

ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ  ಗ್ರಾಮೀಣ ಭಾಗದ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಕೋಟಿ ರೂ. ಅನುದಾನ ನೀಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್  ಹೇಳಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಬೆಳಗಾವಿ ವಿಭಾಗದ ಪ್ರಗತಿ ಪರಿಶೀಲನಾ ಸಭೆ ಬಳಿಕ ಶಿವಕುಮಾರ್  ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಬರಗಾಲ ಪರಿಸ್ಥಿತಿಯಲ್ಲಿ ಕಲಬುರಗಿ ಹಾಗೂ ಬೆಳಗಾವಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೇವೆ.  ಬಿತ್ತನೆ ಬೀಜ, ಗೊಬ್ಬರ ಪೂರೈಕೆಗೆ ಅಗತ್ಯ ತಯಾರಿ ಮಾಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ನಮ್ಮ ಸರ್ಕಾರ ಉಪಆಯುಕ್ತರಿಗೆ ಅನುದಾನ ನೀಡಿದೆ. ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯದೆ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಈ ತೀರ್ಮಾನ ಮಾಡಲಾಗಿದೆ. ಸ್ಥಳೀಯ ಶಾಸಕರು  ಅಧ್ಯಯನ ಮಾಡಿ ಯೋಜನೆ ರೂಪಿಸಬೇಕು. ಮುಂದಿನ ದಿನಗಳಲ್ಲಿ ನೀರಾವರಿಗೆ ನೀರು ಲಭ್ಯವಾಗುತ್ತದೆಯೋ ಇಲ್ಲವೋ, ಕುಡಿಯುವ ನೀರಿನ ಪೂರೈಕೆಗೆ ಅಣೆಕಟ್ಟಿನಲ್ಲಿ ನೀರು ಸಂಗ್ರಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ರಸಗೊಬ್ಬರ ವಿಚಾರವಾಗಿ ಬೆಂಗಳೂರಿನಲ್ಲಿ ಸಭೆ ಮಾಡಲಾಗುವುದು. ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ಮಾಡುತ್ತೇನೆ. ಕೇಂದ್ರ ಸರ್ಕಾರ ಕೇವಲ 50% ಗೊಬ್ಬರ ಪೂರೈಕೆ ಮಾಡಿದ್ದು, ರಸಗೊಬ್ಬರ ದಾಸ್ತಾನಿಗೆ ಸೂಚಿಸಲಾಗಿದೆ. ಕುಡಿಯುವ ನೀರು ಹಾಗೂ ನೀರಾವರಿ ಯೋಜನೆಗಳಿಗೆ ಅರಣ್ಯ ಇಲಾಖೆಯಿಂದ ಅಡ್ಡಿಯಾಗುತ್ತಿದೆ ಎಂಬ ಅಹವಾಲು ಕೇಳಿಬಂದವು. 60 ಕ್ಕೂ ಹೆಚ್ಚು ಜಾಗಗಳಲ್ಲಿ ಪೈಪ್ ಲೈನ್ ಎಳೆಯಲು ಸಮಸ್ಯೆಯಾಗಿದೆ ಎಂದು ತಿಳಿದು ಬಂದಿದ್ದು, ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಪೂರೈಕೆಗೆ ತೊಂದರೆ ನೀಡಬಾರದು ಎಂದು ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದರು.

ಅರಣ್ಯ ಹಕ್ಕು ವಿಚಾರವಾಗಿ ಯಾರನ್ನೂ ಒಕ್ಕಲೆಬ್ಬಿಸಬಾರದು. ಕಾನೂನು ಚೌಕಟ್ಟಿನಲ್ಲಿ, ಅವರಿಗೆ ಸಿಗಬೇಕಾದ ಹಕ್ಕು ನೀಡಬೇಕು. ತಲತಲಾಂತರದಿಂದ ಅರಣ್ಯ ಪ್ರದೇಶದಲ್ಲಿ ವಾಸ ಮಾಡಿರುವವರನ್ನು ರಕ್ಷಣೆ ಮಾಡುವುದು ನಮ್ಮ ಸಂಕಲ್ಪ ಎಂದು ತಿಳಿಸಿದರು.

ರಾಮ ಮಂದಿರ ವಿಚಾರದಲ್ಲಿ ನಡೆದಿರುವ ಅಕ್ರಮ ಭಕ್ತರಿಗೆ ಅಗೌರವ ತಂದಿದೆ.  ನಮ್ಮ ಸರ್ಕಾರ ರಾಜ್ಯದ ಎಲ್ಲಾ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಕಡ್ಡಾಯವಾಗಿ ಹುಂಡಿಯ ಮುಂದೆ ಸಿಸಿಟಿವಿ ಅಳವಡಿಕೆಗೆ ತೀರ್ಮಾನಿಸಿದೆ. ಹುಂಡಿ, ಹಣ ತೆಗೆಯುವ ಹಾಗೂ ಅದನ್ನು ಎಣಿಸುವ ಜಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಎಸ್ ಪಿ ಕಚೇರಿಗೆ, ಉಪ ಆಯುಕ್ತರ ಕಚೇರಿಗೆ ರವಾನೆಯಾಗುವ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

ಎಸ್ ಐಆರ್ ವಿಚಾರವಾಗಿ ಮಾರ್ಗದರ್ಶನ ನೀಡಲಾಗಿದೆ. ಮತದಾನದ ಹಕ್ಕು, ಬದುಕಿನ ಹಕ್ಕು. ಇದನ್ನು ಉಳಿಸಿಕೊಳ್ಳಲು ಅಗತ್ಯ ಇರುವವರಿಗೆ 10 ವರ್ಷ ವಾಸ ಇರುವವರಿಗೆ ನಿವಾಸ ದೃಢೀಕರಣ ಪತ್ರ ನೀಡಲಾಗುವುದು. 4.50 ಕೋಟಿ ಜಾತಿ ಪ್ರಮಾಣ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪ್ರತಿ ಬೂತ್ ನಲ್ಲಿ ಸಹಾಯ ಕೇಂದ್ರ ತೆರೆಯಲಾಗುವುದು. ಎಲ್ಲರ ಮತದಾನದ ಹಕ್ಕು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ರೈತರ ಕೃಷಿ ವಿಮೆ ವಿಚಾರದಲ್ಲಿ ಮೋಸ ನಡೆಯುತ್ತಿದೆ ಎಂದು ಶಾಸಕರು ನಮ್ಮ ಗಮನ ಸೆಳೆದಿದ್ದಾರೆ. ಕಲಬುರ್ಗಿಯಲ್ಲಿ ನಮಗೆ ಮಾಹಿತಿ ಬಂದಿದೆ. ರೈತರಿಗೆ ಹಣ ಸಿಗುತ್ತಿದೆಯೇ ಅಥವಾ ಮಧ್ಯವರ್ತಿಗಳ ಹಾವಳಿ ಇದೆಯೇ ಎಂದು ಪರಿಶೀಲನೆ ಮಾಡಲು ಬೆಂಗಳೂರಿನಲ್ಲಿ ಸಭೆ ಮಾಡುತ್ತೇವೆ ಎಂದು ಹೇಳಿದರು.

ಮೋಡ ಬಿತ್ತನೆ ವಿಚಾರವನ್ನು 10ಕ್ಕೂ ಹೆಚ್ಚು ಶಾಸಕರು ಪ್ರಸ್ತಾಪಿಸಿದ್ದು,  ಈ ಬಗ್ಗೆ ವರದಿ ತರಿಸಿಕೊಂಡು ಬೆಂಗಳೂರಿನಲ್ಲಿ ಸಭೆ ನಡೆಸಿ ತೀರ್ಮಾನಿಸಲಾಗುವುದು. ಕಂದಾಯ ಇಲಾಖೆಯಿಂದ ಭೂ ದಾಖಲೆ ಇ ಖಾತಾ ನೀಡಲು ಸರ್ಕಾರ ತೀರ್ಮಾನಿಸಿದೆ. ಇನ್ನು ಒಸಿ ಸಿಸಿ ವಿಚಾರದಲ್ಲಿ 40×60 ವಸತಿ ಕಟ್ಟಡಗಳಿಗೆ ವಿನಾಯಿತಿ ನೀಡಲಾಗಿದೆ. ಇದಕ್ಕೆ ಅರ್ಜಿ ಹಾಕುವ ದಿನಾಂಕ ಆಗಸ್ಟ್ 15ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ ತುಂಗಭದ್ರಾ ಅಣೆಕಟ್ಟಿನ ಗೇಟ್ ತುಂಡರಿಸಿತ್ತು. ನಾವು ಎಲ್ಲಾ 33 ಗೇಟ್ ಬದಲಾವಣೆ ಮಾಡಿದ್ದೇವೆ.  ಟಿಬಿ ಅಣೆಕಟ್ಟಿನಲ್ಲಿ ಹೂಳು ತುಂಬಿರುವುದರಿಂದ 33 ಟಿಎಂಸಿ ನೀರು ನಷ್ಟವಾಗುತ್ತಿದೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದ್ದೇವೆ. ಕೃಷ್ಣ, ಕಾವೇರಿ ಹಾಗೂ ಗೋದಾವರಿ ನದಿ ಜೋಡಣೆಗೆ ತೀರ್ಮಾನಿಸಲಾಗಿದ್ದು, ಕೇಂದ್ರಕ್ಕೆ ನಮ್ಮ ಸಮ್ಮತಿ ಸೂಚಿಸಿದ್ದೇವೆ. ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ಯೋಜನೆಯಾಗಿ ಮಾಡಿ, 1 ಲಕ್ಷ ಕೋಟಿ ಯೋಜನೆ ಮಾಡಲಿದೆ. ಇದರಲ್ಲಿ 10% ರಾಜ್ಯ ಸರ್ಕಾರದ್ದಾಗಿದ್ದು, 90% ಕೇಂದ್ರ ಸರ್ಕಾರ ಭರಿಸಲಿದೆ ಎಂದರು.

ಆಲಮಟ್ಟಿ ಜಲಾಶಯ ಹಿನ್ನೀರಿನ ಭೂ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ ಎಂದು ಕೇಳಿದಾಗ,  ಪರಿಹಾರ ನೀಡಲು ಬೆಳಗಾವಿ ಅಧಿವೇಶನದಲ್ಲಿ ಐತಿಹಾಸಿಕ ತೀರ್ಮಾನ ಮಾಡಲಾಗಿದೆ.  ₹70 ಸಾವಿರ ಕೋಟಿಯಿಂದ 1 ಲಕ್ಷ ಕೋಟಿವರೆಗೆ ಹಣ ಬೇಕಾಗುತ್ತದೆ. ಪುನರ್ ವಸತಿ ವಿಚಾರವಾಗಿ ನಾವು ಚರ್ಚೆ ಮಾಡುತ್ತಿದ್ದೇವೆ. ಕೆಲವರು ಕೋರ್ಟ್ ಮೆಟ್ಟಿಲೇರಿ, 10-12 ಕೋಟಿಗೆ ಆದೇಶ ಪಡೆದಿದ್ದರು. ಇದರ ಮರುಪರಿಶೀಲನೆ ಅರ್ಜಿ ಹಾಕಲಾಗಿದ್ದು, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಲಾಗುವುದು. ಜಮೀನು ಕಳೆದುಕೊಂಡವನಿಗೆ ಸಹಾಯ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಉತ್ತರಿಸಿದರು.

ತುಂಗಭದ್ರಾ ಮಾದರಿಯಲ್ಲೇ ಮಹದಾಯಿ ವಿಚಾರವಾಗಿ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಜೊತೆ ಒಮ್ಮತ ತೀರ್ಮಾನ ಮಾಡಬಹುದಲ್ಲವೇ ಎಂದು ಕೇಳಿದಾಗ,”ಮಹದಾಯಿ ವಿಚಾರವಾಗಿ ನಾನು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಕೇಂದ್ರ ಅರಣ್ಯ ಸಚಿವರನ್ನು ಅವರನ್ನು ಐದು ಭೇಟಿ ಮಾಡಿದ್ದೇನೆ. ಅವರು ಇನ್ನು ಉತ್ತರ ನೀಡಿಲ್ಲ. ನನ್ನ ಪ್ರಯತ್ನ ನಿರಂತರವಾಗಿದೆ ಎಂದು ಪ್ರತಿಕ್ರಿಯಿಸಿದರು.

ಮಹಾರಾಷ್ಟ್ರ ಸರ್ಕಾರ ಸಭೆ ಮಾಡಿರುವ ಬಗ್ಗೆ ಕೇಳಿದಾಗ, ಕರ್ನಾಟಕದ ಗಡಿ ಕಾಪಾಡುವ ವಿಚಾರವಾಗಿ ನಾವು ಬದ್ಧವಾಗಿದ್ದೇವೆ.  ಸಂಪೂರ್ಣ ವರದಿ ಪಡೆದು, ತೀರ್ಮಾನ ಮಾಡುವೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆಯಲಾಗುವುದು. ಅವರು ಸಭೆ ಮಾಡಿದಾಕ್ಷಣ ಅಂತಿಮವಾಗುವುದಿಲ್ಲ. ಈ ಬಗ್ಗೆ ನ್ಯಾಯಾಲಯದ ಅಂಶ ಗಮನಿಸುತ್ತೇವೆ. ರಾಜ್ಯದ ಹಿತ ಕಾಯಲಾಗುವುದು ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *