Menu

ವರ್ಕ್ ಫ್ರಂ ಹೋಂ ಆಮಿಷವೊಡ್ಡಿ ಕೋಟ್ಯಾಂತರ ರೂ. ವಂಚಿಸಿದ ದಂಪತಿ ಅರೆಸ್ಟ್‌

ವರ್ಕ್ ಫ್ರಂ ಹೋಂ ಉದ್ಯೋಗದ ಆಮಿಷ ಒಡ್ಡಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ವಂಚಿಸಿದ್ದ ದಂಪತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕಿರಣ್‌ ಮತ್ತು ಆತನ ಪತ್ನಿ ಆರತಿ ಬಂಧಿತ ವಂಚಕರು. ಇವರು ‘ಕಾಳಿಕಾ ದೇವಿ ಎಂಟರ್‌ಪ್ರೈಸಸ್’ ಎಂಬ ನಕಲಿ ಸಂಸ್ಥೆ ಸ್ಥಾಪಿಸಿ ಇನ್ಸ್ಟಾ ಗ್ರಾಂ ರೀಲ್ಸ್‌ ಮೂಲಕ ಜನರಿಗೆ ಉದ್ಯೋಗದ ಹೆಸರಿನಲ್ಲಿ ವಂಚಿಸಿರುವುದು ತನಿಖೆಯಲ್ಲಿ ಬಯಲಾಗಿದೆ.

ಯಾವುದೇ ಅನುಬವ ಇಲ್ಲದೆಯೂ ಮನೆಯಲ್ಲೇ ಕುಳಿತು ಉತ್ತಮ ಆದಾಯ ಗಳಿಸಬಹುದು ಎಂದು ಆರೋಪಿ ಕಿರಣ್ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ಗಳನ್ನು ಪ್ರಕಟಿಸುತ್ತಿದ್ದ. ಮೇಣದ ಬತ್ತಿ, ಅಗರಬತ್ತಿ ಹಾಗೂ ಡ್ರೈ ಫ್ರೂಟ್ಸ್ ಪ್ಯಾಕಿಂಗ್ ಕೆಲಸ ನೀಡುವುದಾಗಿ ಹೇಳಿ ನಂಬಿಸುತ್ತಿದ್ದ. ಕಚ್ಚಾ ವಸ್ತುಗಳ ಭದ್ರತಾ ಠೇವಣಿಯಾಗಿ ಒಂದು ಲಕ್ಷ ರೂಪಾಯಿ ಪಾವತಿಸಬೇಕಿದ್ದು, ಪ್ರತಿಯಾಗಿ ತಿಂಗಳಿಗೆ 23 ಸಾವಿರ ರೂಪಾಯಿ ಸಂಬಳ ನೀಡುವುದಾಗಿ ಭರವಸೆ ನೀಡುತ್ತಿದ್ದ.

ಈ ಇನ್‌ಸ್ಟಾಗ್ರಾಂ ಜಾಹೀರಾತುಗಳನ್ನು ನಂಬಿದ ಅನೇಕರು ಉದ್ಯೋಗದ ನಿರೀಕ್ಷೆಯಲ್ಲಿ ಜೀವನದ ಉಳಿತಾಯ ಹಣ ಹೂಡಿಕೆ ಮಾಡಿದ್ದಾರೆ. ಕೆಲವರು ಸಾಲ ಮಾಡಿ ಹಣ, ಕೆಲವರು ಚಿನ್ನ ಅಡವಿಟ್ಟು  ಹಣ ಪಾವತಿಸಿದ್ದಾರೆ. ಒಬ್ಬೊಬ್ಬರಿಂದ 2 ಲಕ್ಷ ರೂಪಾಯಿಯಿಂದ ಆರಂಭವಾಗಿ 20 ಲಕ್ಷ ರೂಪಾಯಿವರೆಗೂ ಠೇವಣಿ ರೂಪದಲ್ಲಿ ಹಣ ಪಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಬೆಂಗಳೂರು ಗ್ರಾಮಾಂತರ, ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಜಾಲ, ಕೋಲಾರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ನೂರಾರು ಮಂದಿ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಕೆಲಸ ನೀಡುವುದಾಗಿ ಭರವಸೆ ನೀಡಿದ  ವಂಚಕ ದಂಪತಿ, ಹಣ ಸಂಗ್ರಹಿಸಿದ ಬಳಿಕ ಯಾವುದೇ ಪ್ಯಾಕಿಂಗ್ ಕೆಲಸ ಒದಗಿಸಿಲ್ಲ. ಠೇವಣಿಯಾಗಿ ಪಡೆದ ಹಣ ವಾಪಸ್‌ ಮಾಡದೆ ನಾಪತ್ತೆಯಾಗಿದ್ದರು.

ಕೆಲವು ತಿಂಗಳಿಂದ ಕೆಲಸವೂ ಸಿಗದೆ, ಕಟ್ಟಿದ ಹಣವೂ ವಾಪಸ್‌ ಬಾರದ ಕಾರಣ ಸಂತ್ರಸ್ತರು ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರು. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡು ವಂಚಕ ದಂಪತಿಯನ್ನು ಬಂಧಿಸಿದ್ದಾರೆ.

ಬಂಧನದ ಬಳಿಕ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ವಂಚನೆಯ ಹಣವನ್ನು ಎಲ್ಲಿಗೆ ವರ್ಗಾಯಿಸಲಾಗಿದೆ, ಎಷ್ಟು ಜನರಿಂದ ಹಣ ಸಂಗ್ರಹಿಸಲಾಗಿದೆ ಹಾಗೂ ಈ ಕೃತ್ಯದಲ್ಲಿ ಮತ್ತಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *