Menu

ನಿರಂತರ ಮಳೆ: ಯಾತ್ರಿಗಳ ಸುರಕ್ಷತೆಗಾಗಿ ಚಾರ್‌ಧಾಮ್‌ ಯಾತ್ರೆ ಸ್ಥಗಿತ

ಉತ್ತರಾಖಂಡ ಸರ್ಕಾರವು ಚಾರ್‌ಧಾಮ್‌ ಯಾತ್ರೆಯನ್ನು ಸೋಮವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ರಾಜ್ಯದಲ್ಲಿ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿರುವ ಕಾರಣ ಸರ್ಕಾರ ಈ ಕ್ರಮ ಕೈಗೊಂಡಿದೆ.

ಚಾರ್‌ಧಾಮ್‌ ಯಾತ್ರೆ ಸಾಗುವ ರಸ್ತೆಗಳಲ್ಲಿ ಭೂಕುಸಿತದ ಆತಂಕ ಎದುರಾಗಿದೆ. ಈ ಮಾರ್ಗದಲ್ಲಿದ್ದ ಯಾತ್ರಿಗಳನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ. ಯಾತ್ರಾ ಮಾರ್ಗವನ್ನು ಸಮಗ್ರವಾಗಿ ಪರಿಶೀಲಿಸಿ ಸಂಪರೂರ್ಣ ಸುರಕ್ಷಿತ ಎಂಬುದು ದೃಢಪಟ್ಟ ಬಳಿಕವೇ ಯಾತ್ರ ಮತ್ತೆ ಆರಂಭಿಸಲು ಅನುಮತಿಸಲಾಗುವುದು ಎಂದು ಗರ್ವಾಲ್ ವಿಭಾಗದ ಆಯುಕ್ತರು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಳೆ ಅವಾಂತರದ ನಡುವೆ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ 11 ಜಿಲ್ಲೆಗಳಲ್ಲಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ.  ಸಾರ್ವಜನಿಕರು ಮತ್ತು ಯಾತ್ರಾರ್ಥಿಗಳಿಗೆ ನಿಖರ ಹಾಗೂ ಅಧಿಕೃತ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವಂತೆ ಅಧಿಕಾರಿಗಳು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳಿಗೆ ಕಿವಿಗೊಡಬಾರದೆಂದು ಸಲಹೆ ನೀಡಿದ್ದಾರೆ. ಹವಾಮಾನ ಮತ್ತು ಮಾರ್ಗಗಳ ಕುರಿತು ಜಿಲ್ಲಾಡಳಿತ ಹಾಗೂ ಸರ್ಕಾರದಿಂದ ಹೊರಡಿಸಲಾಗುವ ಅಧಿಕೃತ ಸೂಚನೆಗಳನ್ನು ಪಾಲಿಸುವಂತೆ ಕೋರಲಾಗಿದೆ.

ಜುಲೈ 19ರಂದು ಒಂದೇ ದಿನ 9,018 ಯಾತ್ರಿಕರು ಚಾರ್‌ಧಾಮ್ ಹಾಗೂ ಹೇಮಕುಂಡ್ ಸಾಹಿಬ್ ದರ್ಶನ ಪಡೆದಿದ್ದಾರೆ. ಈ ವರ್ಷದ ಯಾತ್ರೆ ಆರಂಭವಾದ ದಿನದಿಂದ ಇದುವರೆಗೆ ಒಟ್ಟು 44,84,429 ಯಾತ್ರಿಕರು ಚಾರ್‌ಧಾಮ್ ಮತ್ತು ಹೇಮಕುಂಡ್ ಸಾಹಿಬ್‌ಗೆ ಭೇಟಿ ನೀಡಿದ್ದಾರೆ. ಬದರಿನಾಥ ಧಾಮಕ್ಕೆ 15,21,381, ಕೇದಾರನಾಥ ಧಾಮಕ್ಕೆ 14,09,668, ಗಂಗೋತ್ರಿ ಧಾಮಕ್ಕೆ 6,99,387, ಯಮುನೋತ್ರಿ ಧಾಮಕ್ಕೆ 6,46,235 ಹಾಗೂ ಹೇಮಕುಂಡ್ ಸಾಹಿಬ್‌ಗೆ 2,07,758 ಭಕ್ತರು ಭೇಟಿ ನೀಡಿದ್ದಾರೆ.

ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಡೆಹ್ರಾಡೂನ್, ಪೌರಿ, ತೆಹ್ರಿ, ರುದ್ರಪ್ರಯಾಗ, ಹರಿದ್ವಾರ, ನೈನಿತಾಲ್, ಉಧಮ್ ಸಿಂಗ್ ನಗರ, ಪಿಥೋರಗಢ, ಚಮೋಲಿ, ಚಂಪಾವತ್ ಹಾಗೂ ಉತ್ತರಕಾಶಿ ಜಿಲ್ಲೆಗಳಲ್ಲಿ ಸೋಮವಾರ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ.

Related Posts

Leave a Reply

Your email address will not be published. Required fields are marked *