ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ವಿರುದ್ಧ ಅವಹೇಳನಕಾರಿ ಹಾಗೂ ಬೆದರಿಕೆ ಹೇಳಿಕೆ ನೀಡಿದ ಆರೋಪದಡಿ ವಿಲಾತ್ತಿಕುಳಂ ಡಿಎಂಕೆ ಶಾಸಕ ಜಿ.ವಿ. ಮಾರ್ಕಾಂಡೇಯನ್ ಅವರನ್ನು ತೂತುಕುಡಿ ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕೋವಿಲ್ ಪಟ್ಟಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಶಾಸಕ ಮಾರ್ಕಾಂಡೇಯನ್, ಮುಖ್ಯಮಂತ್ರಿ ವಿಜಯ್ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಟಿವಿಕೆ ಪಕ್ಷದ ಪದಾಧಿಕಾರಿ ಪಿ. ಕಾಶಿರಾಮ್ ನೀಡಿದ ದೂರಿನ ಅನ್ವಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಶಾಸಕರು ಭಾಷಣದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ವೈಯಕ್ತಿಕ ದಾಳಿ ನಡೆಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.ವಿಧಾನಸಭೆಯಲ್ಲಿ ಮುಖ್ಯಮಂತ್ರಿಯವರ ಮೂಳೆ ಮುರಿಯಲಾಗುವುದು ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಲ್ಲದೆ, ಮುಖ್ಯಮಂತ್ರಿಗಳು ಬಂಧನಕ್ಕೆ ಹೆದರಿ ಕರೂರ್‌ಗೆ ಪಲಾಯನ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆಂದು ದೂರಿನಲ್ಲಿ ವಿವರಿಸಲಾಗಿದೆ.
ಶಾಸಕರ ನಿವಾಸಕ್ಕೆ ತೆರಳಿದ ಪೊಲೀಸರು ಬೆಂಬಲಿಗರ ಪ್ರತಿಭಟನೆಯ ನಡುವೆಯೂ ಅವರನ್ನು ಬಂಧಿಸಿದರು. ತೂತುಕುಡಿ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ಮಾಜಿ ಸಚಿವ ಮತ್ತು ತಿರುಚೆಂದೂರ್ ಶಾಸಕ ಅನಿತಾ ಆರ್. ರಾಧಾಕೃಷ್ಣನ್ ಅವರನ್ನು ಇದೇ ರೀತಿಯ ಆರೋಪದಡಿ ಬಂಧಿಸಲಾಗಿತ್ತು.


