ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿಕೆ ಶಿವಕುಮಾರ್ 6 ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಮೊದಲ ಸಚಿವ ಸಂಪುಟ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ 6 ಮಹತ್ವದ ತೀರ್ಮಾನಗಳನ್ನು ಪ್ರಕಟಿಸಿದ್ದಾರೆ.
ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಬಸ್ ಪಾಸ್, ರಾಜ್ಯಾದ್ಯಂತ 10 ಸಾವಿರ ಭಾರತ್ ಜೋಡೋ ಯುವಕ ಸಂಘ ಸ್ಥಾಪನೆ, 56 ಸಾವಿರ ಉದ್ಯೋಗ ಭರ್ತಿ ಪ್ರಕ್ರಿಯೆ ಶೀಘ್ರ ಆರಂಭ, ಬಿ ಖಾತಾದಿಂದ ಎ ಖಾತೆಗೆ ಭೂ ಪರಿವರ್ತನೆ, ಖಾಸಗಿ ಉದ್ಯೋಗಿ ನೋಂದಣಿ ಕೇಂದ್ರ ಸ್ಥಾಪನೆ ಮಾಡುವುದಾಗಿ ಘೋಷಿಸಿದರು.
ರಾಜ್ಯದಲ್ಲಿ ಈ ಮೊದಲು ವಿವಿಧ ಮಾದರಿಯ ವಿದ್ಯಾರ್ಥಿಗಳಿಗೆ 1,300 ರೂ.ದಿಂದ 1,500 ರೂ ವಾರ್ಷಿಕ ಬಸ್ ಪಾಸ್ ದರ ನಿಗದಿಪಡಿಸಲಾಗಿತ್ತು. ಈಗ ಎಲ್ಲಾ ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಪಡೆಯಲಿದ್ದಾರೆ ಎಂದು ಅವರು ಹೇಳಿದರು.
“ಉದ್ಯೋಗ ಹುಡುಕುತ್ತಿರುವ ನಿರುದ್ಯೋಗಿಗಳು ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಬೇಕು. ನಾವು ಕಂಪನಿಗಳೊಂದಿಗೆ ಮಾತನಾಡಿ ಅವರಿಗೆ ಅಗತ್ಯವಿರುವ ಉದ್ಯೋಗ ಒದಗಿಸಲು ವ್ಯವಸ್ಥೆ ಮಾಡುತ್ತೇವೆ. ಉದ್ಯೋಗಕ್ಕಾಗಿ ಯುವ ಸಮುದಾಯಕ್ಕೆ ಸರ್ಕಾರವೇ ತರಬೇತಿ ನೀಡುತ್ತದೆ” ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದರು.
ಗ್ರಾಮಗಳಲ್ಲಿ ಭಾರತ್ ಜೋಡೋ ಯುವಕರ ಸಂಘ ರಚಿಸಲು ನಿರ್ಧರಿಸಲಾಗಿದೆ. ಈ ಯುವ ಸಂಘಗಳಿಗೆ ಸರ್ಕಾರ 10 ಲಕ್ಷ ರೂ.ಗಳನ್ನು ನೀಡಲಿದೆ. ಯುವಕರು ಸಮಾಜ ಕಟ್ಟುವ ಕೆಲಸದಲ್ಲಿ ನಿರತರಾಗಬೇಕು ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. 10 ಸಾವಿರ ಭಾರತ್ ಜೋಡೋ ಯುವಕರ ಸಂಘಗಳನ್ನು ರಚಿಸುವುದು ನಮ್ಮ ಗುರಿಯಾಗಿದೆ ಎಂದು ಸಿಎಂ ಹೇಳಿದರು.
ಜನರು ಕೊಟ್ಟಿರುವ ಅಧಿಕಾರ ಜನರ ಸೇವೆಗೆ ಮುಡಿಪು
ಸಿಎಂ ಕುರ್ಚಿ ಈ ಕೆ ಶಿವಕುಮಾರನದ್ದಲ್ಲ, ಇದು ಜನರ ಕುರ್ಚಿ. ಜನರು ಕೊಟ್ಟಿರುವ ಅಧಿಕಾರವನ್ನು ಜನರ ಸೇವೆಗೆ ಮುಡಿಪಾಗಿಡುತ್ತೇನೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. ನನ್ನ ವೈಯಕ್ತಿಕ ವಿಚಾರ ಬದಿಗೊತ್ತಿ ರಾಜ್ಯದ ಜನರ ಸೇವೆಗೆ ಸಂಕಲ್ಪ ಮಾಡಿ ಈ ಅಧಿಕಾರ ಸ್ವೀಕರಿಸಿದ್ದೇನೆ. ಬಾಕಿ ಇರುವ 2 ವರ್ಷಗಳಲ್ಲಿ ರಾಜ್ಯದ ಜನರ ಸೇವೆ ಮಾಡಲು ಏನೆಲ್ಲಾ ಸೇವೆ ಮಾಡಬಹುದು, ರಾಜ್ಯದ ಕಲ್ಯಾಣಕ್ಕೆ ನಾನು ಹೊಸ ಅವಕಾಶಗಳನ್ನು ಹುಡುಕುತ್ತಿದ್ದೇನೆ ಎಂದು ತಿಳಿಸಿದರು.
“ರಾಜ್ಯದ ಜನತೆಗೆ ನನ್ನ ಮೇಲೆ ಅಪಾರ ವಿಶ್ವಾಸ ಇದೆ. ರಾಜ್ಯದ ಆಡಳಿತದಲ್ಲಿ ಹೊಸ ಬೆಳಕು ಮೂಡಿಸಲು ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಪ್ರಯತ್ನ ಮಾಡುತ್ತೇನೆ. 1985ರಿಂದ ಇಲ್ಲೆಯವರೆಗೂ ಕಷ್ಟ ನೋಡಿದ್ದೇನೆ, ಸುಖ ನೋಡಿದ್ದೇನೆ. ರಾಜಕೀಯ ತಂತ್ರಗಳ ಬಲೆಗೆ ಬಿದ್ದಿದ್ದೇನೆ. ತಿಹಾರ್ ಜೈಲಿಗೆ ಹೋಗುವ ಪರಿಸ್ಥಿತಿ ಬಂತು. ನಾನು ಭರವಸೆಗಳ ಮೇಲೆ ಬದುಕಿದೆ. ಮತ್ತೆ ರಾಜ್ಯದ ಜನರ ಸೇವೆ ಮಾಡಿ, ಸಾಕ್ಷಿಗುಡ್ಡೆ ಬಿಟ್ಟು ಹೋಗಲು ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಈ ತೀರ್ಮಾನ ಮಾಡಿದ್ದಾರೆ. ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದಿದ್ದಾರೆ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಿರುವುದಾಗಿ ಅವರು ಹೇಳುತ್ತಲೇ ಇದ್ದರು. ನಮ್ಮ ವರಿಷ್ಠರು ನಮ್ಮಿಬ್ಬರನ್ನು ಕರೆಸಿ ಈ ತೀರ್ಮಾನ ಮಾಡಿದಾಗ, ಸಿದ್ದರಾಮಯ್ಯ ಸಂತೋಷದಿಂದ ನನಗೆ ಜಾಗ ಮಾಡಿಕೊಟ್ಟಿದ್ದಾರೆ. ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಬೆಂಬಲ ನೀಡಿ ಜವಾಬ್ದಾರಿ ನೀಡಿದ್ದಾರೆ ಎಂದರು.
ನನಗೆ ಜಾತಿ ಮೇಲೆ, ಧರ್ಮದ ಮೇಲೆ ನಂಬಿಕೆ ಇಲ್ಲ. ನನಗೆ ನಮ್ಮದೇ ಆದ ನಂಬಿಕೆ ಇರಬಹುದು. ಆದರೆ ಮಾನವ ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡಿರುವವನು. ಪ್ರಜಾಸತಾತ್ಮಕ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿದ್ದೇನೆ. ಈ ನಾಡು ಸರ್ವಜನಾಂಗದ ಶಾಂತಿಯ ತೋಟ ಎಂಬುದನ್ನು ನಮ್ಮ ಸಚಿವ ಸಂಪುಟ ಪ್ರತಿಬಿಂಬಿಸುತ್ತಿದೆ. ಮಾಧ್ಯಮ ಟೀಕೆ ಮಾಡಲಿ, ನಮ್ಮ ಸರ್ಕಾರದ ತಪ್ಪನ್ನು ತಿದ್ದಿ. ಆದರೆ ಇಲ್ಲಸಲ್ಲದ ರಾಜಕೀಯ ಸುದ್ದಿಗಳನ್ನು ಮಾಡಬೇಡಿ. ನೀವು ನನ್ನನ್ನು ಟೀಕೆ ಮಾಡಿದಾಗ ನಾನು ಪ್ರಶ್ನೆ ಮಾಡಿಲ್ಲ. ನಿಮ್ಮ ಕ್ಯಾಮೆರಾ ಕಣ್ಣಲ್ಲಿ ತೋರಿಸುವುದನ್ನು ಜನ ನೋಡುತ್ತಾರೆ. ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ನೀವು ವರದಿ ಮಾಡಿ ಎಂದು ಮನವಿ ಮಾಡಿದರು.


