ಪತ್ರಿಕೆಯೊಂದರಲ್ಲಿ “ನನ್ನ ಬಳಿ ಮಂತ್ರದಂಡ ಇದೆ, ನಿಮ್ಮನ್ನು ಕೋಟ್ಯಾಧಿಪತಿ ಮಾಡುತ್ತೇನೆ” ಎಂದು ಮೈಸೂರಿನ ಮಹಿಳೆ ನೀಡಿದ್ದ ಜಾಹೀರಾತು ನಂಬಿ ಆಸೆಗೆ ಬಿದ್ದ ಮಂಗಳೂರಿನ ಸುಶಿಕ್ಷಿತ ಉದ್ಯಮಿ 31 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಮಂಗಳೂರಿನ ಕೃಷಿಕ ಹಾಗೂ ಸೆರಾಮಿಕ್ಸ್ ಕಂಪನಿ ಉದ್ಯೋಗಿ ಸೂರಜ್ ಹೆಗ್ಡೆ (61) ಮೈಸೂರಿನ ಮಹಿಳೆಗೆ ಮಾರು ಹೋಗಿ ವಂಚನೆಗೆ ಒಳಗಾದವರು. 2022ರ ಅಕ್ಟೋಬರ್‌ನಲ್ಲಿ ಪತ್ರಿಕೆಯೊಂದರಲ್ಲಿ ಲಕ್ಷ್ಮಿ ಕುಬೇರ ಯಂತ್ರದ ಮೂಲಕ ಆರ್ಥಿಕ ಪ್ರಗತಿ ಎಂಬ ಜಾಹೀರಾತು ಪ್ರಕಟವಾಗಿತ್ತು. ಇದನ್ನು ನಂಬಿ ಕರೆ ಮಾಡಿದ ಸೂರಜ್ ಹೆಗ್ಡೆಗೆ, ಮೈಸೂರಿನ ಸರಸ್ವತಿಪುರಂನ ಎಂ.ಎಂ. ವಿಜಯಲಕ್ಷ್ಮಿ ಎಂಬಾಕೆಯ ಪರಿಚಯವಾಗಿದೆ.
ಮಂಗಳೂರಿನ ಹೋಟೆಲ್‌ನಲ್ಲಿ ಭೇಟಿಯಾದ ಈಕೆ, ನನ್ನ ಬಳಿ ಅಪಾರ ದೈವಿಕ ಶಕ್ತಿ ಮತ್ತು ಮಂತ್ರದಂಡ ಇದೆ. ನೀವೊಂದು ಮಹಾಯಜ್ಞ ಮಾಡಿದರೆ ಸೂಪರ್ ಮಿಲಿಯನೇರ್ ಆಗಬಹುದು ಎಂದು ನಂಬಿಸಿದ್ದಾಳೆ. ಸಣ್ಣ ಪೂಜೆಗೆಂದು 30 ಸಾವಿರ ಪಡೆದ ಆಕೆ ಯಜ್ಞದ ಹೆಸರಲ್ಲಿ 4.50 ಲಕ್ಷ ರೂ. ಲಪಟಾಯಿಸಿದ್ದಾಳೆ.
ಮಹಾಯಜ್ಞದ ಬಳಿಕ ಮಹಿಳೆ ಲಾಟರಿ ಆಮಿಷವೊಡ್ಡಿದ್ದಾಳೆ. ಮಹಾರಾಷ್ಟ್ರ ಸರ್ಕಾರದಿಂದ ಲಾಟರಿ ಬಂದಿದ್ದು, ಅದನ್ನು ನಿಮಗೆ ವರ್ಗಾಯಿಸುತ್ತೇನೆ. ಅದರಿಂದ 2-20 ಕೋಟಿ ರೂ. ಸಿಗಲಿದೆ ಎಂದು ನಂಬಿಸಿದ್ದಾಳೆ. ಲಾಟರಿ ಟ್ಯಾಕ್ಸ್ ಕಟ್ಟಲು ಹಂತ ಹಂತವಾಗಿ 26.80 ಲಕ್ಷ ರೂ. ವಸೂಲಿ ಮಾಡಿದ್ದಾಳೆ. ಸೂರಜ್ ಹೆಂಡತಿಯ ಚಿನ್ನಾಭರಣ, ಬೆಲೆಬಾಳುವ ನಾಣ್ಯಗಳನ್ನು ಮಾರಿದ್ದಲ್ಲದೆ, ಸ್ನೇಹಿತರ ಬಳಿ ಸಾಲ ಮಾಡಿ ಹಣ ತಂದುಕೊಟ್ಟಿದ್ದಾರೆ.
2025ರ ಮೇ ತಿಂಗಳಲ್ಲಿ ಸೂರಜ್ ಅವರನ್ನು ಮುಂಬೈಗೆ ಕರೆಸಿಕೊಂಡ ವಂಚಕಿ, ಲಾಟರಿ ಫಾರ್ಮ್ ಅನುವಾದಿಸುವ ನೆಪದಲ್ಲಿ ಅವರಿಗೆ ಆಲೋಚನಾ ಶಕ್ತಿ ಕುಗ್ಗಿಸುವ ಯಾವುದೋ ಔಷಧಿ ಕುಡಿಸಿ ಖಾಲಿ ಕಾಗದಗಳ ಮೇಲೆ ಸಹಿ ಪಡೆದಿದ್ದಾಳೆ. ಬಳಿಕ ಜುಲೈನಲ್ಲಿ ಒಂದು ಕೋಟಿ ರೂ. ಕೊಡುತ್ತೇನೆಂದು ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾಳೆ.
ಆಕೆಯ ಸಹಚರರು, ನಮ್ಮ ಮನೆ ಮಾರಿ ನಿನಗೆ 31.80 ಲಕ್ಷ ಕೊಟ್ಟಿದ್ದೇವೆ, ಮತ್ತೆ ಯಾಕೆ ಪೀಡಿಸುತ್ತಿದ್ದೀಯಾ ಎಂದು ಸೂರಜ್‌ಗೆ ಕರೆ ಮಾಡಿ ಬೆದರಿಕೆ ಹಾಕುವ ತಂತ್ರ ಮಾಡಿದಾರೆ. ತಾವು ಮೋಸ ಹೋಗಿರುವುದು ಅರಿವಾಗುತ್ತಿದ್ದಂತೆಯೇ ಸೂರಜ್ ಹೆಗ್ಡೆ ಕೋರ್ಟ್ ಮೊರೆ ಹೋಗಿದ್ದಾರೆ.
ಕೋರ್ಟ್ ಆದೇಶದ ಮೇರೆಗೆ ಮೈಸೂರಿನ ಸರಸ್ವತಿಪುರಂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ವಂಚಕಿ ವಿಜಯಲಕ್ಷ್ಮಿ ಹಾಗೂ ಆಕೆಯ ಸಹಚರರಿಗಾಗಿ ಶೋಧ ಕೈಗೊಂಡಿದ್ದಾರೆ.


