ಬೆಂಗಳೂರಿನ ಪೀಣ್ಯದಲ್ಲಿರುವ ಬ್ಯಾಂಕ್ ಶಾಖೆಯ ಉದ್ಯೋಗಿ ಎಸಗಿದ ವಂಚನೆಯಲ್ಲಿ ಸಿಲುಕಿಕೊಂಡ ಉದ್ಯಮಿಯೊಬ್ಬರು 1.5 ಕೋಟಿ ರೂ. ಕಳೆದುಕೊಂಡಿದ್ದಾರೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕ್‌ನಲ್ಲಿ ಅಪ್ರೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ನಾಗೇಶ್ ವಂಚನೆಯ ಆರೋಪಿ. ಆತ ಸ್ನೇಹಿತರ ಮೂಲಕ ನಕಲಿ ಖಾತೆಗಳನ್ನು ಸೃಷ್ಟಿಸಿ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿದ್ದ. 15 ಖಾತೆಗಳ ಮೂಲಕ ನಕಲಿ ಚಿನ್ನವನ್ನು ಅಡ ಇಟ್ಟು 1.53 ಲಕ್ಷ ರೂ. ಸಾಲ ಪಡೆದಿದ್ದ. ನಕಲಿ ಚಿನ್ನದ ಸರಗಳಿಗೆ ಅಸಲಿ ಚಿನ್ನದ ಕೊಂಡಿ ಇರುತ್ತಿತ್ತು.
ಬ್ಯಾಂಕ್ ಆಡಿಟಿಂಗ್ ಮಾಡಿದಾಗ ನಾಗೇಶ್‌ನ ಈ ವಂಚನೆ ಬಯಲಾಗಿದೆ. ಬ್ಯಾಂಕ್‌ಗೆ ಹಣ ವಾಪಸ್ ಮಾಡಿದ್ದರೆ ಜೈಲಿಗೆ ಕಳಿಸುವುದಾಗಿ ಬ್ಯಾಂಕ್ ಅಧಿಕಾರಿಗಳು ಬೆದರಿಸಿದ್ದಾರೆ. ಬಚಾವ್ ಆಗಲು ಆರೋಪಿ ನಾಗೇಶ್, ಸ್ನೇಹಿತರ ಮೂಲಕ ಉದ್ಯಮಿ ಜಗದೀಶ್ ಅವರನ್ನು ಪರಿಚಯ ಮಾಡಿಕೊಂಡು ಅವರಿಗೆ ನಾಮ ಹಾಕಿದ್ದಾನೆ.
ಬ್ಯಾಂಕ್‌ನಲ್ಲಿ ಕಡಿಮೆ ಬೆಲೆಗೆ ಚಿನ್ನವಿಟ್ಟಿದ್ದು ಹರಾಜಿಗೆ ಬಂದಿದೆ. ಈಗಿನ ಮಾರುಕಟ್ಟೆ ಬೆಲೆಗೆ ನಿಮಗೆ 40 ಲಕ್ಷ ರೂ. ಲಾಭ ಬರುತ್ತದೆ ಎಂದು ನಂಬಿಸಿದ್ದಾನೆ. ವಂಚಕನ ಮಾತನ್ನು ನಂಬಿದ ಉದ್ಯಮಿ ಜಗದೀಶ್ 1.53 ಕೋಟಿ ರೂ. ನೀಡಿದ್ದಾರೆ. ಉದ್ಯಮಿಯಿಂದ ಹಣ ಪಡೆದ ಆರೋಪಿ ಅದನ್ನು ಬ್ಯಾಂಕ್‌ಗೆ ಕಟ್ಟಿ ನಾಪತ್ತೆಯಾಗಿದ್ದ.
ಮೋಸಹೋಗಿರುವುದನ್ನು ಅರಿತ ಜಗದೀಶ್ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ನಾಗೇಶ್‌ನನ್ನು ಬಂಧಿದ್ದಾರೆ.


