ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ಆರ್ಥಿಕ ಅಕ್ರಮಗಳು ಮತ್ತು ಕಾಣಿಕೆ ಹಣ ಹಗರಣದ ತನಿಖೆ ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ಕೇಂದ್ರೀಯ ತನಿಖಾ ದಳವು ಹೊಸ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ಎಸ್‌ಐಟಿ ತನಿಖೆಯ ಲೋಪದೋಷಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅರ್ಜಿದಾರ ವಕೀಲರಾದ ಅಜಯ್ ಕುಮಾರ್ ರೈ ಮತ್ತು ದಿನೇಶ್ ಕುಮಾರ್ ಯಾದವ್
ಪಾರದರ್ಶಕ ತನಿಖೆ ಅನಿವಾರ್ಯ ಎಂದು ಮನವಿ ಮಾಡಿದ್ದಾರೆ.
ದೇವಸ್ಥಾನದ ದೇಣಿಗೆ ರಿಜಿಸ್ಟರ್‌ಗಳು, ಆಡಿಟ್ ವರದಿಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಬ್ಯಾಂಕ್ ದಾಖಲೆಗಳು ಸೇರಿದಂತೆ ಎಲ್ಲಾ ಡಿಜಿಟಲ್ ಹಾಗೂ ಭೌತಿಕ ಸಾಕ್ಷ್ಯಗಳನ್ನು ರಾಮ ಮಂದಿರ ಟ್ರಸ್ಟ್ ಮತ್ತು ಉತ್ತರ ಪ್ರದೇಶ ಸರ್ಕಾರ ತಕ್ಷಣವೇ ಸುರಕ್ಷಿತವಾಗಿ ಸಂರಕ್ಷಿಸಿಡಬೇಕು. ಸಂಬಂಧಿಸಿದ ಆಸ್ತಿ, ಹಣ ಅಥವಾ ಎಲೆಕ್ಟ್ರಾನಿಕ್ ಡೇಟಾವನ್ನು ಯಾರೂ ನಾಶಪಡಿಸದಂತೆ ಅಥವಾ ತಿರುಚದಂತೆ ಕೋರ್ಟ್ ಕಟ್ಟುನಿಟ್ಟಿನ ತಡೆಯಾಜ್ಞೆ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ರಚಿಸಿರುವ ಎಸ್‌ಐಟಿ ತನಿಖೆಯ ಬಗ್ಗೆ ಅರ್ಜಿದಾರರು ತೀವ್ರ ಅನುಮಾನ ವ್ಯಕ್ತಪಡಿಸಿರುವ ಅರ್ಜಿದಾರರು, ರ್ಕಾರದ ಎಸ್‌ಐಟಿ ತಂಡವು ಪ್ರಥಮ ಮಾಹಿತಿ ವರದಿ ಇಲ್ಲವೇ ಕ್ರಿಮಿನಲ್ ಪ್ರಕರಣ ದಾಖಲಿಸದೆಯೇ ವಿಚಾರಣೆಯನ್ನು ಪ್ರಾರಂಭಿಸಿದೆ. ಎಫ್‌ಐಆರ್ ಇಲ್ಲದೆ ಸಂಗ್ರಹಿಸುವ ಸಾಕ್ಷ್ಯಗಳಿಗೆ ಕೋರ್ಟ್‌ನಲ್ಲಿ ಕಾನೂನು ಮಾನ್ಯತೆ ಸಿಗುವುದಿಲ್ಲ, ಇದು ಆರೋಪಿಗಳು ಸುಲಭವಾಗಿ ಪಾರಾಗಲು ದಾರಿ ಮಾಡಿಕೊಡುತ್ತದೆ. ರಾಜ್ಯ ಮಟ್ಟದ ಎಸ್‌ಐಟಿಯ ಅಧಿಕಾರ ಮತ್ತು ವ್ಯಾಪ್ತಿ ಸ್ಪಷ್ಟವಾಗಿಲ್ಲ, ಹೀಗಾಗಿ ಹಗರಣದ ಸಂಕೀರ್ಣತೆಯನ್ನು ಬಯಲಿಗೆಳೆಯುವುದು ಸವಾಲು ಎಂದು ವಾದಿಸಿದ್ದಾರೆ.
ಸುಪ್ರೀಂ ಕೋರ್ಟ್ ತಕ್ಷಣವೇ ಮಧ್ಯಪ್ರವೇಶಿಸುವುದು ಅನಿವಾರ್ಯ, ತನಿಖೆ ವಿಳಂಬವಾದರೆ ಹಣಕಾಸಿನ ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಅರ್ಜಿದಾರರು ಕೋರಿದ್ದಾರೆ.


