Menu

ಲಿಂಗೈಕ್ಯ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗೆ ಸಿಎಂ ನಮನ

ಸೋಮವಾರ ಲಿಂಗೈಕ್ಯರಾದ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಯ ಪಾರ್ಥಿವ ಶರೀರಕ್ಕೆ ಸಿಎಂ ಡಿಕೆ ಶಿವಕುಮಾರ್ ದೇಗುಲ ಮಠದ ಆವರಣದಲ್ಲಿ ಶ್ರದ್ಧಾ ನಮನ ಸಲ್ಲಿಸಿದರು. ಸಚಿವ ಈಶ್ವರ ಖಂಡ್ರೆ, ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್, ಎಂಎಲ್ಸಿ ಎಸ್ ರವಿ ಮತ್ತಿತರರು ಜತೆಗಿದ್ದರು.

ಕನಕಪುರ ದೇಗುಲ ಮಠದ ನಿ.ಪ್ರ.ಸ್ವ.ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಯವರು ಲಿಂಗೈಕ್ಯರಾದ‌ ಸುದ್ದಿ ತಿಳಿದು ತೀವ್ರ ದುಃಖಿತನಾಗಿದ್ದೇನೆ ಎಂದು ಸಿಎಂ ಸಂತಾಪ ವ್ಯಕ್ತಪಡಿಸಿದ್ದಾರೆ. ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎನ್ನುವ ಮಾತನ್ನು ನಾವು ಕೇಳಿದ್ದೇವೆ. ಈ ಮಾತಿಗೆ ಅನ್ವರ್ಥದಂತೆ ಶರಣ ತತ್ವದ ಏಳಿಗೆಗೆ ದುಡಿದವರು ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಯವರು. ಪರಮ‌ ಪೂಜ್ಯರ ಅಗಲಿಕೆ ಅತ್ಯಂತ ನೋವಿನ ‌ಸಂಗತಿ ಎಂದು ಕಂಬನಿ ಮಿಡಿದಿದ್ದಾರೆ.

ಜನನ, ಮರಣ ದೇಹಕ್ಕೆ ಹೊರತು ಜಂಗಮಕ್ಕಲ್ಲ. ಶರಣರ ಗುಣವನ್ನು ಮರಣದಲ್ಲಿ ಕಾಣಬೇಕು ಎಂದು ವಚನಕಾರರು ಹೇಳಿದ್ದಾರೆ. ಸ್ವಾಮೀಜಿಯವರು ಕನಕಪುರದ ದೇಗುಲ‌ ಮಠದ ಮೂಲಕ ಬೆಂಗಳೂರು ದಕ್ಷಿಣ ಜಿಲ್ಲೆ ಸೇರಿದಂತೆ ಹಳೇ ಮೈಸೂರು ಭಾಗ ಹಾಗೂ ಕರ್ನಾಟಕದಾದ್ಯಂತ ಶರಣರ, ಬಸವಣ್ಣನವರ ತತ್ವ, ಆದರ್ಶಗಳನ್ನು ಪಸರಿಸಿದವರು. ಆಧ್ಯಾತ್ಮದ ಅರಿವು ಮೂಡಿಸಿದವರು ಎಂದು ಕೊಂಡಾಡಿದ್ದಾರೆ.

700 ವರ್ಷಗಳ ಇತಿಹಾಸವಿರುವ ಶ್ರೀಮಠದ ಪೀಠಾಧ್ಯಕ್ಷರಾಗಿ ಸರ್ವರಿಗೂ ಸಮಪಾಲು, ಸಮಬಾಳು ತತ್ವವನ್ನು ಮಠದ ಭಕ್ತಾಧಿಗಳು ಹಾಗೂ ಜನರಿಗೂ ಮನವರಿಕೆ ಮಾಡಿದವರು. ಮಠದಲ್ಲಿ ತ್ರಿವಿದ ದಾಸೋಹ ಆರಂಭಿಸಿ ಅನ್ನ, ಅಕ್ಷರ,‌‌ ಆಶ್ರಯದ ಮೂಲಕ ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸುವುದರಲ್ಲಿ ಶ್ರೀಗಳ ಪಾತ್ರ ತುಂಬಾ ದೊಡ್ಡದು. ಶ್ರೀಗಳು ದೇಗುಲ ಮಠದ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಸಿಎಂ ಸ್ಮರಿಸಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಬಹುದೊಡ್ಡ ಆಧ್ಯಾತ್ಮಿಕ‌ ಕೊಂಡಿ ಕಳಚಿ ಹೋಗಿದೆ. ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಶ್ರೀಗಳು ನೀಡುತ್ತಿದ್ದ ಅನೇಕ ಸಲಹೆಗಳು ನಮ್ಮ ಅರಿವನ್ನು ಜಾಗೃತಗೊಳಿಸಿದ್ದವು. ಈ ಹಿರಿಯರ ಅಗಲಿಕೆ ದೊಡ್ಡ ನಿರ್ವಾತ ಸೃಷ್ಟಿಸಿದೆ. ಪರಮಪೂಜ್ಯರ ಅಗಲಿಕೆಯಿಂದ ಉಂಟಾದ ದುಃಖವನ್ನು ಭರಿಸುವ ಶಕ್ತಿಯನ್ನು ಮಠದ ಭಕ್ತಾದಿಗಳಿಗೆ ಆ ದೇವರು ನೀಡಲಿ. ಶ್ರೀಗಳ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *