Menu

ಕತಾರ್‌ ಕಾರ್ಖಾನೆ ಸ್ಫೋಟಕ್ಕೆ ಬಲಿಯಾದವರಲ್ಲಿ 12 ಭಾರತೀಯರು

ಕತಾರ್‌ನ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟಿರುವ 13 ಮಂದಿಯಲ್ಲಿ 12 ಮಂದಿ ಭಾರತೀಯರು, ಈ ದುರಂತದಲ್ಲಿ 66ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಅಲ್ಲಿನ
ಇಂಧನ ಸಚಿವ ಸಾದ್ ಅಲ್ ಕಾಬಿ ದೃಢಪಡಿಸಿದ್ದಾರೆ.

ದೋಹದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಸ್ಥಳೀಯ ಕೈಗಾರಿಕೆಗಳಿಗೆ ಅನಿಲ ಪೂರೈಸುವ ಘಟಕದಲ್ಲಿ ನಡೆದ ಸ್ಫೋಟದಲ್ಲಿ 12 ಭಾರತೀಯ ಪ್ರಜೆಗಳು ದುರದೃಷ್ಟವಶಾತ್ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಧಿತರಾದ ಭಾರತೀಯರು ಹಾಗೂ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ನೆರವನ್ನು ಒದಗಿಸಲು ಕತಾರ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಮೃತದೇಹಗಳನ್ನು ಶೀಘ್ರದಲ್ಲೇ ಭಾರತಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದೆ.

ಸ್ಫೋಟಕ್ಕೆ ನಿಖರ ಕಾರಣದ ತನಿಖೆಯನ್ನು ಅಧಿಕಾರಿಗಳು ಕೈಗೊಂಡಿದ್ದು, ಸಚಿವ ಸಾದ್ ಅಲ್-ಕಾಬಿ, ಇದು ಅಪಘಾತ.ಯಾವುದೇ ವಿಧದ ವಿಧ್ವಂಸಕ ಕೃತ್ಯ ಅಥವಾ ಶತ್ರುಗಳ ದಾಳಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗಾಯಗೊಂಡವರಲ್ಲಿ ಕತಾರ್, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಕೀನ್ಯಾ, ಘಾನಾ, ಟಾಂಜಾನಿಯಾ, ನೈಜೀರಿಯಾ ಮತ್ತು ನೇಪಾಳ ದೇಶಗಳ ಪ್ರಜೆಗಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟ ಸಂಭವಿಸಿರುವ ಪ್ರದೇಶವು ವಿಶ್ವದ ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ ಕೇಂದ್ರಗಳಲ್ಲಿ ಒಂದು. ಈ ಹಿಂದೆ ಅಮೆರಿಕ- ಇರಾನ್ ಯುದ್ಧದ ಸಂದರ್ಭದಲ್ಲಿ ಇರಾನ್ ದಾಳಿಗಳಿಂದ ಈ ಪ್ರದೇಶಕ್ಕೆ ಹಾನಿಯಾಗಿದ್ದು, ಕತಾರ್ ಅನಿಲ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

Related Posts

Leave a Reply

Your email address will not be published. Required fields are marked *