ಕೆಪಿಸಿಸಿ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಧ್ವಜಾರೋಹಣ ನೆರವೇರಿಸಿದರು.
ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು ಆದ ಡಿಸಿಎಂ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದರು.
ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.
ಬಳಿಕ ಪೊಲೀಸ್ ಬ್ಯಾಂಡ್ ತಂಡದಿಂದ ರಾಷ್ಟ್ರಗೀತೆ ಮೊಳಗಿತು. ರಾಜ್ಯಪಾಲರು ರಾಜ್ಯವನ್ನು ಉದ್ದೇಶಿಸಿ ಭಾಷಣ ಮಾಡಿದರು. ಪಥ ಸಂಚಲನ ನಡೆಯಿತು. ನಂತರ ನಾಡಗೀತೆ ಮತ್ತು ರೈತಗೀತೆ ಹಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗ ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ರಾಜ್ಯವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರು, ಇಂದು ದೇಶಕ್ಕೆ ಐತಿಹಾಸಿಕ ದಿನವಾಗಿದೆ. ಕಾನೂನಿನ ಮುಂದೆ ಎಲ್ಲರೂ ಒಂದೇ. ನಾವು ಸಂವಿಧಾನವನ್ನು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂದರು.
ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಲಾಗಿದೆ. ಗ್ಯಾರಂಟಿಗಳ ಮೂಲಕ ದೇಶದಲ್ಲಿ ಹೊಸ ಸಂದೇಶ ನೀಡಿದೆ. ಗ್ಯಾರಂಟಿಗಳನ್ನು ಟೀಕೆ ಮಾಡುವವರಿಗೆ ಸಂದೇಶವನ್ನು ನೀಡಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಗೃಹಲಕ್ಷ್ಮೀ ಜಾರಿ ಮಾಡಲಾಗಿದೆ. ಪ್ರತಿ ಮಹಿಳೆಗೆ ತಿಂಗಳಿಗೆ 2 ಸಾವಿರ ಹಣ ನೀಡಲಾಗುತ್ತಿದೆ. ಕೋಟ್ಯಂತರ ಮಹಿಳೆಯರು ಇದರ ಲಾಭ ಪಡೆದಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ 35,180 ಕೋಟಿ ಮೀಸಲಿಟ್ಟಿದ್ದೇವೆ. ಗೃಹಜ್ಯೋತಿ ಯೋಜನೆ ಜಾರಿ ಮಾಡಿದ್ದೇವೆ. ರಾಜ್ಯದ 1.62 ಕೋಟಿ ಜನ ಇದರ ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿದರು.