ಅನಂತನಾಗ್ ಬಹುಮುಖ ಪ್ರತಿಭಾಶಾಲಿ. ಮಧ್ಯಮ ವರ್ಗದ ಕುಟುಂಬಗಳ ಬದುಕು, ಬವಣೆ ಮತ್ತು ಏಳು ಬೀಳುಗಳನ್ನು ಬಿಂಬಿಸುವ ಪಾತ್ರಗಳಿಗೆ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸುವ ಅನಂತನಾಗ್ ಮಹಿಳೆಯರ ಅಚ್ಚುಮೆಚ್ಚಿನ ನಟರೂ ಹೌದು. ಇವರ ಪ್ರೌಢ ನಟನೆಗೆ ಸಿಂಹಾಸನ, ಚಂದನದಗೊಂಬೆ ,ಬೆಂಕಿಯ ಬಲೆ, ಬಯಲುದಾರಿ ಚಿತ್ರಗಳೇ ಸಾಕ್ಷಿ.
ಕನ್ನಡ ಸಿನಿಮಾರಂಗದ ಮೇರು ನಟ ಅನಂತನಾಗ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವರಿಸಿದೆ. ಸಿನಿ ಕಲಾವಿದ ವಿ. ಕೆ. ಮೂರ್ತಿ ಅವರ ಬಳಿಕ ಕನ್ನಡ ಚಿತ್ರರಂಗದ ಯಾವೊಬ್ಬ ಮೇರು ಕಲಾವಿದನಿಗೂ ಫಾಲ್ಕೆ ಪ್ರಶಸ್ತಿ ವರಿಸಿರಲಿಲ್ಲ. ಒಟ್ಟಿನಲ್ಲಿ ಬಹಳ ದಿನಗಳ ಬಳಿಕ ನಾಡಿನ ಓರ್ವ ಉತ್ತಮ ಕಲಾವಿದನಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ಗಮನಾರ್ಹ.
ಉತ್ತರ ಕನ್ನಡ ಜಿಲ್ಲೆಯವರಾದ ಅನಂತನಾಗ್ ಕಲಾವಿದರಾಗಿ ರೂಪುಗೊಂಡಿದ್ದು ಮರಾಠಿ ರಂಗಭೂಮಿಯಲ್ಲಿ. ಕ್ರಮೇಣ ಇವರ ಕಲಾವಂತಿಕೆ ವಿಕಸನಗೊಂಡಿದ್ದು ಕನ್ನಡ ಚಿತ್ರರಂಗದಲ್ಲಿ. ಎಪ್ಪತ್ತು , ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ತೆರೆಕಂಡ ಹಲವಾರು ಸಾಮಾಜಿಕ, ಹಾಸ್ಯಮಯ ಚಿತ್ರಗಳಲ್ಲಿ ಮನೋಜ್ಞವಾಗಿ ನಟಿಸಿದ ಅನಂತನಾಗ್ ಲಕ್ಷಾಂತರ ಮಂದಿ ಮಧ್ಯಮ ವರ್ಗದ ಪ್ರೇಕ್ಷಕ ಸಮೂಹದ ಡಾರ್ಲಿಂಗ್ ಸ್ಟಾರ್ ಅಗಿದ್ದರೆಂಬುದರಲ್ಲಿ ಎರಡು ಮಾತಿಲ್ಲ. ಈ ಅವಧಿಯಲ್ಲಿ ತೆರೆಕಂಡ ಬಹುತೇಕ ಚಿತ್ರಗಳೆಲ್ಲವೂ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿದ್ದು ನಿಜ. ಮಿಗಿಲಾಗಿ ರಾಜಕುಮಾರ್, ವಿಷ್ಣುವರ್ಧನ್ ಶ್ರೀನಾಥ್ ಮತ್ತು ಅಂಬರೀಶ್ ನಟಿಸಿದ ಸಿನಿಮಾಗಳ ಜೊತೆ ಪೈಪೋಟಿ ನಡೆಸಿ ಭಲೇ ಎನಿಸಿಕೊಂಡ ಬಹಳಷ್ಟು ಚಿತ್ರಗಳಲ್ಲಿ ಅನಂತನಾಗ್ ನಟಿಸಿದ್ದು ವಿಶೇಷ.
ಸಹೋದರ ಶಂಕರನಾಗ್ ಜೊತೆ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಅನಂತನಾಗ್ ಬಹುಮುಖ ಪ್ರತಿಭಾಶಾಲಿ. ಮಧ್ಯಮ ವರ್ಗದ ಕುಟುಂಬಗಳ ಬದುಕು ಬವಣೆ ಮತ್ತು ಏಳು ಬೀಳುಗಳನ್ನು ಬಿಂಬಿಸುವ ಪಾತ್ರಗಳಿಗೆ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸುವ ಅನಂತನಾಗ್ ಮಹಿಳೆಯರ ಅಚ್ಚುಮೆಚ್ಚಿನ ನಟ ಕೂಡಾ. ಇವರ ಪ್ರೌಢ ನಟನೆಗೆ ಸಿಂಹಾಸನ ಚಿತ್ರದ ಓರ್ವ ಪತ್ರಕರ್ತನ ಪಾತ್ರವೇ ಸಾಕ್ಷಿ. ಚಂದನದ ಗೊಂಬೆ, ಬೆಂಕಿಯ ಬಲೆ, ಬಯಲುದಾರಿ, ಮುದುಡಿದ ತಾವರೆ ಅರಳಿತು, ಅರುಣರಾಗ, ನಾರದ ವಿಜಯ, ಹೊಸನೀರು , ಯಾರಿಗೂ ಹೇಳಬೇಡಿ, ನಾ ನಿನ್ನ ಬಿಡಲಾರೆ, ಮೊದಲಾದ ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿ ಸೈ ಎನಿಸಿಕೊಂಡರು.
ಆರಂಭದಲ್ಲಿ ಕೆಲ ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ಇವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡರೂ, ಕನ್ಡಡದ ಸಿನಿಮಾ ಪ್ರಪಂಚವು ಈ ನಟನ ಮೇರು ಕಲಾವಂತಿಕೆಯ ವಿಕಾಸಕ್ಕೆ ಬಹುದೊಡ್ಡ ಬುನಾದಿ ಹಾಕಿದ್ದು ಗಮನಾರ್ಹ. ಎಂಬತ್ತರ ದಶಕದಲ್ಲಿ ದೂರದರ್ಶನ ಜಾಲದಲ್ಲಿ ಪ್ರಸಾರಗೊಂಡ ಆರ್ ಕೆ ನಾರಾಯಣ್ ವಿರಚಿತ ಮಾಲ್ಗುಡಿ ಡೇಸ್ ಹಿಂದಿ ಧಾರಾವಾಹಿಯಲ್ಲಿಯೂ ಅನಂತನಾಗ್ ಸುಲಿಲತ ಅಭಿಯನ ನೀಡಿದ್ದಾರೆ.
ದೇಶದ ಕೋಟ್ಯಂತರ ಮಂದಿ ಕಲಾಸಕ್ತರಿಗೆ ಮೋಡಿ ಮಾಡಿದ್ದ ಮಾಲ್‌ಗುಡಿ ಡೇಸ್ ಧಾರವಾಹಿಯನ್ನು ನಿರ್ದೇಶಿಸಿದ್ದು ಶಂಕರನಾಗ್. ಇವರಿಗೆ ಈಗ ಬಂದಿರುವ ಫಾಲ್ಕೆ ಪ್ರಶಸ್ತಿಯ ಹಿಂದೆ ಶಂಕರನಾಗ್ ಕೊಡುಗೆಯೂ ಇದೆ ಎಂದರೆ ಅತಿಶಯವಲ್ಲ. ರಾಜ್ಯ ರಾಜಕಾರಣದಲ್ಲಿಯೂ ತೊಡಗಿಸಿಕೊಂಡು ಜನತಾದಳ ಸರ್ಕಾರದ ಅವಧಿಯಲ್ಲಿ ಇವರು ರಾಜ್ಯದ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದರು. ಸಂಭಾವಿತರಿಗೆ ಸಕಾಲದಲ್ಲಿ ಸರ್ಕಾರಗಳು ಸೂಕ್ತ ಪ್ರಶಸ್ತಿ ನೀಡಿ ಗೌರವಿಸಿದರೆ ಇದಕ್ಕೊಂದು ಅರ್ಥ ಉಂಟು. ಈ ದಿಶೆಯಲ್ಲಿ ಅನಂತನಾಗ್ ಅವರ ಕಲಾಕೊಡುಗೆಗೆ ಕೇಂದ್ರ ಸರ್ಕಾರದಿಂದ ಈಗ ದೊರೆತಿರುವ ಗೌರವ ಅಭಿನಂದನೀಯ ಮತ್ತು ಶ್ಲಾಘನೀಯ.


