ಬೆಂಗಳೂರಿನಿಂದ ಯಾದಗಿರಿಗೆ ತೆರಳಿದ್ದ ಯುವತಿಯ ಮೇಲೆ ರಾಜ್ಯದ ನಾನಾ ಸ್ಥಳಗಳಲ್ಲಿ ಪದೇ ಪದೆ ಲೈಂಗಿಕ ದೌರ್ಜನ್ಯ ನಡೆಸಿ ಬೆದರಿಸಿ ಅಕ್ರಮವಾಗಿ ಬಂಧಿಸಿಟ್ಟ ಆರೋಪದಡಿ ಇಬ್ಬರು ರೈಲ್ವೆ ಪೊಲೀಸರು ಸೇರಿದಂತೆ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ತುರ್ತು ಸ್ಪಂದನಾ ಸಿಬ್ಬಂದಿ ಸಂತ್ರಸ್ತೆಯನ್ನು ರಕ್ಷಿಸಿದ ಬಳಿಕ ಆಕೆ ನೀಡಿದ ದೂರಿನ ಆಧಾರದಲ್ಲಿ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ನ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದೆ. ಮಲ್ಲು ಅಲಿಯಾಸ್ ಮಲ್ಲಪ್ಪ, ರೈಲ್ವೆ ಪೊಲೀಸ್ ಶರಣಪ್ಪ, ಮತ್ತೊಬ್ಬ ರೈಲ್ವೆ ಪೊಲೀಸ್, ಮಹೇಶ್, ಆಕಾಶ್ ಅಲಿಯಾಸ್ ಪಪ್ಪು ಮತ್ತು ಹರ್ಷ ಅಲಿಯಾಸ್ ಸುಧಾಕರ್ ಸೇರಿದ್ದಾರೆ.
ಕೌಟುಂಬಿಕ ಸಮಸ್ಯೆಗಳಿಂದಾಗಿ ನೊಂದಿದ್ದ ಯುವತಿ ರೈಲಿನಲ್ಲಿ ಬೆಂಗಳೂರಿನಿಂದ ಯಾದಗಿರಿಯವರೆಗೆ ಪ್ರಯಾಣಿಸಿದ್ದರು. ಯಾದಗಿರಿ ರೈಲು ನಿಲ್ದಾಣದ ಬಳಿ ಕುಳಿತಿದ್ದಾಗ ಅದೇ ರೈಲಿನಲ್ಲಿ ಪ್ರಯಾಣಿಸಿದ್ದಾಗಿ ಹೇಳಿಕೊಂಡ ಮಲ್ಲಪ್ಪ ಎಂಬಾತ ಸಹಾಯ ಮಾಡುವುದಾಗಿ ಹೇಳಿದ್ದಾನೆ.
ಆಕೆಯನ್ನು ರೈಲು ನಿಲ್ದಾಣದ ಪ್ರದೇಶದಲ್ಲಿ ತನ್ನ ಸಂಬಂಧಿಕರ ಮನೆ ಎಂದು ಹೇಳಿ ಮನೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಆಕೆ ಪ್ರತಿರೋಧ ತೋರಿದರೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸ್ವಲ್ಪ ಸಮಯದ ನಂತರ ಅಲ್ಲಿಗೆ ಬಂದ ಶರಣಪ್ಪ ಸೇರಿದಂತೆ ಇಬ್ಬರು ರೈಲ್ವೆ ಪೊಲೀಸ್ ಬೆದರಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಿಕ ಮಲ್ಲಪ್ಪ ಆಕೆಯನ್ನು ರೈಲು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ. ಬಳಿಕ ಮಹೇಶ್ ಎಂಬಾತ ಆಕೆಯ ಬಳಿ ಬಂದು ಆಸ್ಪತ್ರೆಗೆ ಕರೆದೊಯ್ಯಲು ಮಲ್ಲಪ್ಪ ತನ್ನನ್ನು ಕಳುಹಿಸಿದ್ದಾಗಿ ಹೇಳಿದ್ದಾನೆ. ಆತ ಆಕೆಯನ್ನು ಹೊಸ ಬಸ್ ನಿಲ್ದಾಣದ ಸಮೀಪವಿರುವ ಸ್ಥಳೀಯ ಲಾಡ್ಜ್ವೊಂದಕ್ಕೆ ಕರೆದೊಯ್ದು, ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದು ಆರೋಪಿಸಲಾಗಿದೆ.
ಅದಾದ ಬಳಿಕ ಸಂತ್ರಸ್ತೆ ಕಲಬುರಗಿಗೆ ತೆರಳಿದ್ದಾರೆ. ಒಂದು ತಿಂಗಳ ನಂತರ ಮಲ್ಲಪ್ಪ ಆಕೆಯನ್ನು ಪತ್ತೆಹಚ್ಚಿ ಮದುವೆಯಾಗುವ ಭರವಸೆ ನೀಡಿದ್ದಾನೆ, ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸುವ ನೆಪದಲ್ಲಿ ಆಕೆಯನ್ನು ಶಹಾಪುರಕ್ಕೆ ಕರೆದೊಯ್ದು ಲಾಡ್ಜ್ವೊಂದರಲ್ಲಿ ಮತ್ತೆ ದೌರ್ಜನ್ಯ ನಡೆಸಿದ್ದಾನೆಂದು ಆರೋಪಿಸಲಾಗಿದೆ.
ಸಂತ್ರಸ್ತೆ ಬೆಂಗಳೂರಿಗೆ ಮರಳಲು ಯಾದಗಿರಿ ರೈಲು ನಿಲ್ದಾಣಕ್ಕೆ ಬಂದಾಗ ರಮೇಶ್, ಆಕಾಶ್ ಅಲಿಯಾಸ್ ಪಪ್ಪು ಮತ್ತು ಹರ್ಷ ಅಲಿಯಾಸ್ ಸುಧಾಕರ್ ಎಂಬ ಮೂವರು ವ್ಯಕ್ತಿಗಳು ಬಂದು ಆಕೆಯನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ. ಆಕಾಶ್ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಮತ್ತು ನಂತರ ಬೆಂಗಳೂರಿಗೆ ಮರಳಲು ಎರಡು ಸಾವಿರ ರೂಪಾಯಿ ನೀಡಿದ್ದಾನೆ.
ಬೆಂಗಳೂರಿಗೆ ತಲುಪಿದ ನಂತರ ಆಕಾಶ್ ಆಕೆ ಕಲಬುರಗಿಗೆ ಮರಳಿದರೆ ಉದ್ಯೋಗ ಮತ್ತು ಮದುವೆಯ ಭರವಸೆ ನೀಡಿದ್ದಾನೆ. ಆಕೆ ಕಲಬುರಗಿಗೆ ಮರಳಿದ ನಂತರ ಪೊಲೀಸರು ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಹೇಳಿ ಆಕಾಶ್ ಆಕೆಯನ್ನು ಎರಡು ದಿನ ಕೋಣೆಯಲ್ಲಿ ಕೂಡಿಹಾಕಿ ದೌರ್ಜನ್ಯ ಎಸಗಿ ಬಳಿಕ ರೈಲು ನಿಲ್ದಾಣದಲ್ಲಿ ಬಿಟ್ಟುಹೋಗಿದ್ದಾನೆ. ಬಳಿಕ ಹರ್ಷ ಆಕೆಯನ್ನು ಸಂಪರ್ಕಿಸಿ ಆಶ್ರಯ ಹಾಗೂ ಮನೆಗೆಲಸ ಮಾಡುವ ಕೆಲಸ ಕೊಡಿಸುವುದಾಗಿ ಹೇಳಿ ಆಳಂದ ತಾಲೂಕಿನ ಗ್ರಾಮವೊಂದರಲ್ಲಿರುವ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದಾನೆ, ಅದಾದ ಮೇಲೆ ಆಧಾರ್ ಕಾರ್ಡ್ ಮಾಡಿಸಿಕೊಡುವ ನೆಪದಲ್ಲಿ ಆಳಂದದ ಲಾಡ್ಜ್ವೊಂದಕ್ಕೆ ಕರೆದೊಯ್ದು ಮತ್ತೆ ದೌರ್ಜನ್ಯ ಎಸಗಿ ಬೆದರಿಕೆ ಹಾಕಿರುವುದಾಗಿ ಆರೋಪಸಲಾಗಿದೆ.
ಆಳಂದದಿಂದ ಹೊರಬಂದ ಸಂತ್ರಸ್ತೆ ಶಹಾಪುರಕ್ಕೆ ಬಸ್ ಹತ್ತಿದ್ದು, ಆಕೆ ಅಳುತ್ತಿರುವುದನ್ನು ಗಮನಿಸಿದ ಸಹ-ಪ್ರಯಾಣಿಕರೊಬ್ಬರು ತಕ್ಷಣವೇ ತುರ್ತು ಪೊಲೀಸ್ ಸಹಾಯವಾಣಿ ‘112’ಕ್ಕೆ ಮಾಹಿತಿ ನೀಡಿದ್ದಾರೆ.
ತುರ್ತು ಸೇವಾ ಸಿಬ್ಬಂದಿ ಬಸ್ಸನ್ನು ತಡೆದು ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ ಮತ್ತು ಯಾದಗಿರಿಯಲ್ಲಿರುವ ಸರ್ಕಾರಿ ಮಹಿಳಾ ಆಶ್ರಯ ತಾಣವಾದ ‘ಶಕ್ತಿ ಸದನ’ಕ್ಕೆ ಕರೆದೊಯ್ದಿದ್ದಾರೆ.
ಆಶ್ರಯ ತಾಣದ ಅಧಿಕಾರಿಗಳಿಂದ ಸಮಾಲೋಚನೆ ನಂತರ ಆಕೆ ನಡೆದ ಘಟನೆಗಳನ್ನು ವಿವರಿಸಿದ್ದಾರೆ ಮತ್ತು ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಸಮಗ್ರ ತನಿಖೆ ಕೈಗೊಂಡಿದ್ದು, ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ತಂಡಗಳನ್ನು ನಿಯೋಜಿಸಲಾಗಿದೆ.


