ಕೋಟ್ಯಾಂತರ ರೂ. ಮೌಲ್ಯದ ಜಮೀನಿನ ದಾಖಲೆ ತಿದ್ದುಪಡಿಗಾಗಿ ಐವತ್ತು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಧಾರವಾಡದ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಧಾರವಾಡ- ಕಲಘಟಗಿ ನಡುವೆ ಯರಿಕೊಪ್ಪ ಗ್ರಾಮದಲ್ಲಿ ಇದ್ದ ೩೩೩ ಎಕರೆಯಲ್ಲಿ ೧೩ ಎಕರೆ ಖರಾಬು ಜಮೀನು ಇದೆ. ಅದನ್ನು ಪರಿವರ್ತನೆ ಮಾಡಿ ಕೊಡಲು ಐವತ್ತು ಲಕ್ಷ ರೂ. ಲಂಚ ಪಡೆಯುವ ಜೊತೆಗೆ ಅದರಲ್ಲಿ ಎರಡು ಎಕರೆ ಭೂಮಿ ಗುಳುಂ ಮಾಡಲು ಸಂಚು ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ದೂರುದಾರರೊಂದಿಗೆ ಲೋಕಾಯುಕ್ತ ಎಸ್ಪಿ ಸಿದ್ದಲಿಂಗ ನೇತೃತ್ವದ ತಂಡ ದಾಳಿ ನಡೆಸಿದೆ. ಬಾಗಲಕೋಟೆಯ ಮಂಜುನಾಥ ಅರಳಿಕಟ್ಟಿ ಎಂಬವರು ಧಾರವಾಡದ ಯರಿಕೊಪ್ಪ ಹದ್ದಿನಲ್ಲಿ ಖರೀದಿಸಿದ್ದ ಜಮೀನಿನ ಖರಾಬು ಪಹಣಿ ಸರಿಪಡಿಸಲು ಲಂಚಕ್ಕೆ ತಹಶೀಲ್ದಾರ್ ಸಚ್ಚಿದಾನಂದ ಬೇಡಿಕೆ ಇಟ್ಟಿದ್ದರು. ಬುಧವಾರ ರಾತ್ರಿ ಕರ್ನಾಟಕ ಕಾಲೇಜು ಆವರಣದಲ್ಲಿಯೇ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ತಹಸೀಲ್ದಾರ್ ಸಚ್ಚಿದಾನಂದ ಕಚೇರಿಯಲ್ಲಿ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದರು. ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎರಡು ಸಾವಿರ ಜನರಿಗೆ ಅಡುಗೆ ಸಿದ್ಧವಾಗಿತ್ತು.


