Wednesday, September 09, 2026
Menu

ಪ್ಲೈಓವರ್ ಬೈಕ್- ಆಟೋ ಸಂಚಾರ ನಿಷೇಧ ಸರಿಯೇ ?

ಬೆಂಗಳೂರಿನ ಮೇಲು ಸೇತುವೆಗಳನ್ನು ಬರೀ ಕಾರುಗಳ ಓಡಾಟಕ್ಕೆ ಸೀಮಿತಗೊಳಿಸಿ, ಬೈಕು ಹಾಗು ಆಟೋ ಸಂಚಾರವನ್ನು ನಿಷೇಧಿಸುವುದು ವಾಹನ ಸವಾರನ ಸಹಜ ನ್ಯಾಯದ ಸಿದ್ದಾಂತಕ್ಕೆ ವಿರುದ್ಧ. ನೆಗಡಿ ಬಂದಿದೆ ಎಂದು ಮೂಗನ್ನೇ ಕತ್ತರಿಸುವ ಆಲೋಚನೆ ಸರಿಯೇ ?

ಇಂದು ಬೆಂಗಳೂರಿನ ಮಧ್ಯಮ ವರ್ಗದ ಜನತೆಯ ಸಾಮಾನ್ಯ ದೈನಂದಿನ ಬದುಕಿಗೆ ಬೈಕ್ ಮತ್ತು ಆಟೋಗಳ ಸಂಚಾರವೇ ನರನಾಡಿ. ಇವರೆಲ್ಲರೂ ಮೇಲು ಸೇತುವೆ ಬಳಸದೆ ತಮ್ಮ ಕಚೇರಿ, ಕಾರ್ಯಸ್ಥಾನಗಳನ್ನು ನೆಮ್ಮದಿಯಿಂದ ತಲುಪಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರ ಗಮನಿಸಬೇಕಿದೆ.

ನಾಡಿನ ರಾಜಧಾನಿ ಬೆಂಗಳೂರಿನಲ್ಲಿ ವಾಹನ ಸಂಚಾರ ನಿಯಂತ್ರಣದ ಸಲುವಾಗಿ ನಗರದ ಎಂಟೂ ದಿಕ್ಕುಗಳಲ್ಲಿ ಮೇಲು ಸೇತುವೆಗಳ ನಿರ್ಮಾಣವಾಗಿರುವುದು ಸರಿಯಷ್ಟೆ. ದ್ವಿಚಕ್ರ. ತ್ರಿಚಕ್ರ ಹಾಗೂ ಕಾರು, ಲಾರಿ ಹಾಗೂ ಬಸ್ ಇತ್ಯಾದಿ ನಾಲ್ಕು ಚಕ್ರ ವಾಹಗಳ ಸುಗಮ ಸಂಚಾರಕ್ಕೆಂದು ವಿನ್ಯಾಸಗೊಳಿಸಲಾದ ಮೇಲುಸೇತುವೆಗಳು ನಗರ ಯೋಜಕರ ಉದ್ದೇಶವನ್ನು ಭಾಗಶಃ ಈಡೇರಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ವಾಹನ ಸಂಚಾರ ದಟ್ಟಣೆಯನ್ನು ನಿಗ್ರಹಿಸುವ ದಿಶೆಯಲ್ಲಿ ಹತ್ತು ವರ್ಷಗಳ ಹಿಂದೆ ನಗರದಲ್ಲಿ ಚಾಲನೆಗೊಂಡ ಮೆಟ್ರೋ ರೈಲಿನ ಕೊಡುಗೆಯೂ ಇದೆ. ಆದರೆ ದಿನೇ ದಿನೇ ಬೃಹದಾಕಾರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಹಲವಾರು ಮೇಲು ಸೇತುವೆಗಳು ನಿರ್ಮಾಣವಾದರೂ ಸುಗಮ ವಾಹನ ಸಂಚಾರ ಸಾಧ್ಯವಾಗಿಲ್ಲ. ಮಿಗಿಲಾಗಿ ಮೇಲುಸೇತುವೆಗಳು ನಿರ್ಮಾಣವಾದ ಮೇಲೆ ಇದರ ಕೆಳಗಿರುವ ರಸ್ತೆಗಳ ದುರಸ್ತಿ ಸಮರ್ಪಕವಾಗಿ ನಡೆದಿಲ್ಲ.

ಎಲ್ಲಂದರೆ ಅಲ್ಲಿ ಗುಂಡಿಗಳು ಮತ್ತು ಕತ್ತಲೆಯಾದೊಡನೆ ಮೇಲು ಸೇತುವೆಗಳ ಬಳಿ ಅಕ್ರಮ ,ಅನೈತಿಕ ಚಟುವಟಿಕೆಗಳು ಆರಂಭಗೊಂಡಿರುವುದು ಸತ್ಯಕ್ಕೆ ದೂರವಾದ ಸಂಗತಿಯಲ್ಲ. ಈಗ ಬೆಂಗಳೂರಿನ ಸಂಚಾರಿ ಪೊಲೀಸರು ಅಪಘಾತಗಳ ಕಾರಣವನ್ನು ಮುಂದೊಡ್ಡಿ, ಬೈಕ್, ಸ್ಕೂಟರ್, ಆಟೋಗಳ ವಾಹನ ಸಂಚಾರಕ್ಕೆ ಲಗಾಮು ಹಾಕಿರುವುದು ಚರ್ಚಾಸ್ಪದ. ಈ ವಾಹನಗಳ ಸಂಚಾರಕ್ಕೆ ನಿಷೇಧ ಹೇರುವುದರಿಂದ ಅಪಘಾತ ನಿಯಂತ್ರಿಸಬಹುದೆಂಬ ವೈಜ್ಞಾನಿಕ ಮತ್ತು ತಾಂತ್ರಿಕ ಕಾರಣಗಳಾವುದೂ ಇಲ್ಲ. ಮಿಗಿಲಾಗಿ ಇಂದು ಮೇಲು ಸೇತುವೆಗಳು ನಿರ್ಮಾಣವಾಗಿರುವುದು ಜನತೆಯ ಮತ್ತು ವಾಹನ ಸವಾರರ ಅನುಕೂಲ ಮತ್ತು ಸೌಕರ್ಯ ಒದಗಿಸಲು ವಿನಹ ಕೇವಲ ಐಶಾರಾಮಿ , ಶ್ರೀಮಂತ ಕಾರುಗಳ ತಡೆರಹಿತ ಓಡಾಟಕ್ಕೆ ಮಾತ್ರವಲ್ಲ.

ಮೇಲುಸೇತುವೆಗಳ ಮೇಲೆ ದ್ವಿಚಕ್ರ ಮತ್ತು ಆಟೋಗಳು ಸಂಚರಿಸಬಾರದೆಂಬ ಸಂಚಾರಿ ಪೊಲೀಸರ ನಿಯಮಾವಳಿ ಹಿಂದೆ ತರ್ಕವೇ ಇಲ್ಲ. ಬೆಂಗಳೂರಿನ ಪ್ರಮುಖ ಸರ್ಕಾರಿ, ಕಾರ್ಪೋರೆಟ್ ಕಚೇರಿಗಳು ಮತ್ತು ವಾಣಿಜ್ಯ ಶಿಕ್ಷಣ ಕೇಂದ್ರಗಳಿಗೂ ಮೇಲು ಸೇತುವೆಗಳಿಗೂ ನಿಕಟ ಸಂಬಂಧವಿದೆ . ಇವುಗಳ ಮೇಲೆ ಸಂಚರಿಸದೆ ನಗರದ ಪ್ರಮುಖ ಕೇಂದ್ರಗಳನ್ನು ತಲುಪುವುದು ಸಾಧ್ಯವಿಲ್ಲ. ಮೇಲು ಸೇತುವೆಗಳ ಮೇಲೆ ಆಟೋ ಬೈಕು ಸಂಚಾರದಿಂದ ಅಪಘಾತ ಹೆಚ್ಚಾಗಿದೆ ಎಂದು ಹೇಳುವ ಸಂಚಾರಿ ಪೊಲೀಸರು, ಇದನ್ನು ತಡೆಯುವುದರಿಂದ ಸಮಸ್ಯೆ ಬಗೆಹರಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ. ಇದಕ್ಕೆ ಪರ್ಯಾಯವಾಗಿ ಆಲೋಚಿಸುವುವುದು ಸೂಕ್ತ. ಮೇಲು ಸೇತುವೆಗಳನ್ನು ಬರೀ ಕಾರುಗಳ ಓಡಾಟಕ್ಕೆ ಸೀಮಿತಗೊಳಿಸಿ, ಬೈಕು ಮತ್ತು ಆಟೋಗಳನ್ನು ನಿಷೇಧಿಸುವುದು ವಾಹನ ಸವಾರನ ಸಹಜ ನ್ಯಾಯದ ಸಿದ್ದಾಂತಕ್ಕೆ ವಿರುದ್ಧ. ನೆಗಡಿ ಬಂದಿದೆ ಎಂದು ಮೂಗನ್ನು ಕತ್ತರಿಸುವ ಆಲೋಚನೆ ಮತ್ತು ತೀರ್ಮಾನ ಸರಿಯಲ್ಲ.

ಇಂದು ಬೆಂಗಳೂರಿನ ಮಧ್ಯಮ ವರ್ಗದ ಜನತೆಯ ಸಾಮಾನ್ಯ ಬದುಕು ಅವಲಂಬಿತವಾಗಿರುವುದೇ ಬೈಕ್ ಮತ್ತು ಆಟೋ ಸಂಚಾರದ ಮೂಲಕ. ಇವರೆಲ್ಲರೂ ಮೇಲು ಸೇತುವೆ ಬಳಸದೆ ತಮ್ಮ ಕಚೇರಿ, ಕಾರ್ಯಸ್ಥಾನಗಳನ್ನು ನೆಮ್ಮದಿಯಿಂದ ತಲುಪಲು ಸಾಧ್ಯವಿಲ್ಲ. ಸಾಮಾನ್ಯ ಜನತೆಗೆ ಸಂಚಾರೀ ಪೊಲೀಸ್ ಅಥವಾ ಬಿಬಿಎಂಪಿ ಅನುಕೂಲ ಕಲ್ಪಿಸಬೇಕೇ ವಿನಹ, ನಿಷೇಧ ಹೇರುವ ಮೂಲಕ ಅವರಿಗೆ ಮತ್ತಷ್ಟು ಸಂಕಷ್ಟ ಮತ್ತು ಸಮಸ್ಯೆಗಳನ್ನು ತಂದಿಡಬಾರದು.

Related Posts

Leave a Reply

Your email address will not be published. Required fields are marked *