ಕರ್ನಾಟಕ ಸರ್ಕಾರದ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಅಜಯ್ ಧರ್ಮಸಿಂಗ್ ಹಟ್ಟಿ ಚಿನ್ನದ ಗಣಿ ಕಂಪನಿಗೆ ಭೇಟಿ ನೀಡಿದ್ದು, ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದವರು ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರು.
ಮೆಡಿಕಲ್ ಅನ್‌ಫಿಟ್ ಸ್ಕೀಮ್ ಅನ್ನು ಪುನರ್ ಜಾರಿಗೊಳಿಸುವಂತೆ ಸಚಿವರಿಗೆ ಮನವಿ ಮಾಡಲಾಯಿತು. ಈ ಹಿಂದೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶರಣಪ್ರಕಾಶ ಪಾಟೀಲ್, ಗಣಿ ಸಚಿವರಾಗಿದ್ದ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಎನ್.ಎಸ್. ಬೋಸ್ ರಾಜ್ ಅಧ್ಯಕ್ಷತೆಯಲ್ಲಿ ಈ ಕುರಿತು ಚರ್ಚೆ ನಡೆದಿತ್ತು. ಆದರೆ ನಿರ್ದೇಶಕ ಮಂಡಳಿ ಸಭೆಯಲ್ಲಿ ಉಂಟಾದ ವಿಳಂಬದ ಕಾರಣ ಮೆಡಿಕಲ್ ಅನ್‌ಫಿಟ್ ಸ್ಕೀಮ್ ಮರುಜಾರಿಯಾಗದೆ ಬಾಕಿ ಉಳಿದಿರುವ ವಿಷಯವನ್ನು ಸಚಿವರ ಗಮನಕ್ಕೆ ತರಲಾಯಿತು.
ಕಂಪನಿ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ ರಾಮಾಯಜಿ ಹಾಗೂ ಪ್ರಧಾನ ವ್ಯವಸ್ಥಾಪಕರು (ಸಮನ್ವಯ) ಸೈಫುಲ್ಲಾ ಖಾನ್ , ಮೆಡಿಕಲ್ ಅನ್‌ಫಿಟ್ ಸ್ಕೀಮ್‌ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸಚಿವ ಡಾ. ಅಜಯ್ ಧರ್ಮಸಿಂಗ್‌ಗೆ ವಿವರಿಸಿದರು.
ಸಿಬ್ಬಂದಿ ಹಾಗೂ ಕಾರ್ಮಿಕರ ಬಹುಕಾಲದ ಬೇಡಿಕೆಯಾಗಿರುವ ಮೆಡಿಕಲ್ ಅನ್‌ಫಿಟ್ ಸ್ಕೀಮ್ ಅನ್ನು ತಮ್ಮ ಅವಧಿಯಲ್ಲಿಯೇ ಶೀಘ್ರವಾಗಿ ಪುನರ್ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಸಂಘದ ಪದಾಧಿಕಾರಿಗಳು ಸಚಿವರಲ್ಲಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಡಾ. ಅಜಯ್ ಧರ್ಮಸಿಂಗ್ , ಮೆಡಿಕಲ್ ಅನ್‌ಫಿಟ್ ಸ್ಕೀಮ್ ವಿಷಯವನ್ನು ವಿಶೇಷವಾಗಿ ಪರಿಗಣಿಸಿ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕವಾಗಿ ಒತ್ತಾಯಿಸುವುದಾಗಿ ಹಾಗೂ ಕಾರ್ಮಿಕರ ಬಹುಕಾಲದ ಬೇಡಿಕೆಯನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಡಿ.ಎಸ್. ಹೂಲಗೇರಿ, ಹಟ್ಟಿ ಚಿನ್ನದಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಹಟ್ಟಿ ಪಟ್ಟಣದ ಪ್ರಮುಖ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.


