ವಿಧಾನಪರಿಷತ್ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರ ಕಚೇರಿಗೆ ಕಾಂಗ್ರೆಸ್ ನಾಯಕರು ನುಗ್ಗಿ ಬಲವಂತವಾಗಿ ರಾಜೀನಾಮೆ ಪಡೆದಿರುವುದು ಇಡೀ ಸದನಕ್ಕೆ ಆಗಿರುವ ಅಪಮಾನವಾಗಿದೆ. ಇದು ಗೂಂಡಾಗಿರಿ ಮಾಡುವ ಸರ್ಕಾರ ಎಂದು ಈ ಘಟನೆಯಿಂದ ಸಾಬೀತಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದರು.
ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಎಂಟು ಬಾರಿ ನಿರಂತರವಾಗಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಎರಡೂ ಸದನಕ್ಕೆ ಅವರೇ ಹಿರಿಯರಾಗಿದ್ದಾರೆ. ಯಾವುದೇ ಕಳಂಕವಿಲ್ಲದೆ ಅಧಿವೇಶನ ನಡೆಸಿದ ಅವರ ರಾಜೀನಾಮೆಯನ್ನು ಕಾಂಗ್ರೆಸ್ ಸದಸ್ಯರು ಬಲವಂತವಾಗಿ ಪಡೆದಿದ್ದಾರೆ. ಅವರು ಈಗ ಬಹಳ ದುಃಖದಲ್ಲಿದ್ದಾರೆ. ಅವರು ಕಚೇರಿಯಲ್ಲಿ ಕುಳಿತಿರುವಾಗ ಮುನ್ಸೂಚನೆ ನೀಡದೆ ಏಕಾಏಕಿ ನುಗ್ಗಿ, ಲೆಟರ್ ಹೆಡ್ ತಂದು ಟೈಪ್ ಮಾಡಿ ಸಹಿ ಹಾಕಿ ಎಂದು ಒತ್ತಡ ಹಾಕಲಾಗಿದೆ. ವಿಧಾನಪರಿಷತ್ ಇತಿಹಾಸದಲ್ಲಿ ಯಾರಿಗೂ ಹೀಗೆ ಅಪಮಾನವಾಗಿಲ್ಲ. ಈ ಮೂಲಕ ಇದು ಗೂಂಡಾಗಿರಿ ಮಾಡುವ ಸರ್ಕಾರ ಎಂದು ಸಾಬೀತಾಗಿದೆ. ಆಗಸ್ಟ್ 14 ರಂದು ರಾಜೀನಾಮೆ ನೀಡುತ್ತೇನೆ, ನಂತರ ಎಲ್ಲರಿಗೂ ಧನ್ಯವಾದ ಹೇಳಬೇಕು ಎಂದು ಹೇಳಿದ್ದರೂ, ಅವಕಾಶ ನೀಡದೆ ಬಲವಂತದಿಂದ ಸಹಿ ಹಾಕಿಸಲಾಗಿದೆ. ಇದು ರಾಜ್ಯ ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಿದೆ. ಇದು ಇಡೀ ಸದನಕ್ಕೆ ಆಗಿರುವ ಅಪಮಾನ ಎಂದರು.
ಅಧಿವೇಶನದ ಸಿದ್ಧತೆಯ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿ ಕೆಲಸ ಮಾಡುತ್ತಾ ಜನರನ್ನು ಲೂಟಿ ಮಾಡುತ್ತಿದೆ. ಅನೇಕ ಜಿಲ್ಲೆಗಳಲ್ಲಿ ಬರಗಾಲ ಬಂದಿದ್ದರೂ, ದೆಹಲಿ ಯಾತ್ರೆ ಮಾಡುತ್ತಾ ಪರಿಹಾರ ನೀಡಿಲ್ಲ. ಮಧ್ಯ ಕರ್ನಾಟಕದಲ್ಲಿ ಈಗಲೂ ಭೀಕರ ಬರಗಾಲವಿದೆ. ಆದರೂ ಹಣ ನೀಡದೆ, ಬರಗಾಲ ಘೋಷಣೆ ಮಾಡದೆ ನಾಟಕ ಮಾಡುತ್ತಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆಯಡಿ ರಿಯಲ್ ಎಸ್ಟೇಟ್ ಮಾಫಿಯಾಗಾಗಿ ರೈತರರ ಜಮೀನು ಕಬಳಿಸಲಾಗುತ್ತಿದೆ. ಅಲ್ಲಿ ಸುಮಾರು 10 ಲಕ್ಷ ಅಡಿಕೆ, ಮಾವು, ತೆಂಗು ಮೊದಲಾದ ಮರಗಳಿವೆ. ಆದರೂ ಅಲ್ಲಿನ ಜಮೀನನ್ನು ವಶಕ್ಕೆ ಪಡೆಯುತ್ತೇವೆ ಎನ್ನುತ್ತಿದ್ದಾರೆ. ಕೆಪಿಎಸ್‌ಸಿಯಲ್ಲಿ ಭಾರಿ ಹಗರಣ ನಡೆದಿದ್ದು, ಲಂಚದ ಹಣ ಸಚಿವರ ಮನೆಗೆ ಹೋಗುತ್ತಿದೆ. ಗೃಹಲಕ್ಷ್ಮಿ ಯೋಜನೆಯ 5,000 ಕೋಟಿ ರೂ. ಎಲ್ಲಿಗೆ ಹೋಗಿದೆ ಎಂದು ಇನ್ನೂ ಗೊತ್ತಾಗಿಲ್ಲ. ಈ ಎಲ್ಲ ವಿಷಯಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಮೇಕದಾಟು ಯೋಜನೆಗೆ ಯಾವುದೇ ತಡೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆದರೂ ಕಾಂಗ್ರೆಸ್ ಸರ್ಕಾರ ಯೋಜನೆ ಜಾರಿ ಬಗ್ಗೆ ಇನ್ನೂ ಹೇಳಿಲ್ಲ. ರೇಷನ್ ಕಾರ್ಡುಗಳನ್ನು ಕಡಿತಗೊಳಿಸಿ ಬಡವರಿಗೆ ವಂಚಿಸಲಾಗುತ್ತಿದೆ. ಈ ಬಗ್ಗೆಯೂ ನಾವು ಪ್ರಸ್ತಾಪ ಮಾಡುತ್ತೇವೆ. ಸಿದ್ದರಾಮಯ್ಯನವರ ಮುಖ್ಯಮಂತ್ರಿ ಹುದ್ದೆಯನ್ನು ಒದ್ದು ಕಿತ್ತುಕೊಂಡ ಸಿಎಂ ಡಿ.ಕೆ.ಶಿವಕುಮಾರ್ ಸರಿಯಾದ ಆಡಳಿತ ನೀಡುತ್ತಿಲ್ಲ. ಕಾಂಗ್ರೆಸ್‌ನ ಲೆಟರ್ ಹೆಡ್‌ನಲ್ಲಿ ಸಭಾಧ್ಯಕ್ಷರ ಹೆಸರು ಉಲ್ಲೇಖವಾಗಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಇದರ ವಿರುದ್ಧವೂ ವಿಧಾನಪರಿಷತ್‌ನಲ್ಲಿ ಹೋರಾಟ ನಡೆಯಲಿದೆ ಎಂದರು.


