Menu

ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ

ಕರ್ನಾಟಕ ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜೀನಾಮೆ ನೀಡುವಂತೆ ಹೊರಟ್ಟಿ ಅವರಿಗೆ ಹೇಳಿದ್ದರು. ಅದರಂತೆ ಈಗ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೊದಲು ಮುಂಗಾರು ಅಧಿವೇಶನ ಆರಂಭವಾದ ಬಳಿಕ ಅಂದರೆ ಆಗಸ್ಟ್ 14 ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಸವರಾಜ ಹೊರಟ್ಟಿ ತೀರ್ಮಾನಿಸಿದ್ದರು.

75 ಸದಸ್ಯರನ್ನು ಒಳಗೊಂಡ ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದು, ಸಭಾಪತಿ ಮತ್ತು ಉಪಸಭಾಪತಿ ಎರಡೂ ಹುದ್ದೆಗಳನ್ನು ವಶಕ್ಕೆ ಪಡೆಯಲು ಆಡಳಿತಾರೂಢ ಕಾಂಗ್ರೆಸ್ ಮುಂದಾಗಿದೆ.
ಸ್ವ ಇಚ್ಛೆಯಿಂದಲೇ ತಾನು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಹೊರಟ್ಟಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ನೂತನ ಸಭಾಪತಿ ಆಯ್ಕೆಯಾಗುವವರೆಗೆ ಬಸವರಾಜ ಹೊರಟ್ಟಿ ಹಂಗಾಮಿ ಸಭಾಪತಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್, ಉಪ ಸಭಾಪತಿ ಸ್ಥಾನಕ್ಕೆ ಉಮಾಶ್ರೀ ಅವರ ಹೆಸರನ್ನು ಕಾಂಗ್ರೆಸ್ ವರಿಷ್ಠರು ಈಗಾಗಲೇ ಅಂತಿಮಗೊಳಿಸಿದ್ದಾರೆ.  ಸಿಎಂ ಡಿಕೆ ಶಿವಕುಮಾರ್‌ ಅವರನ್ನು ಸದಾಶಿವನಗರದಲ್ಲಿ ಬೆಳಗ್ಗೆ ಭೇಟಿ ಮಾಡಿದ್ದ ಪರಿಷತ್‌ ಸಭಾಪತಿ ಹೊರಟ್ಟಿ ಅಸಮಾಧಾನದಿಂದಲೇ ಹೊರನಡೆದಿದ್ದರು. ಡಿಕೆ ಶಿವಕುಮಾರ್‌ ಜೊತೆ ಹತ್ತು ನಿಮಿಷ ಮಾತುಕತೆ ನಡೆಸಿ  ಹೊರಟ್ಟಿ ತಮ್ಮ ಸಿಬ್ಬಂದಿಗೆ, ಕಾರು ಎಲ್ಲಿದೆ ಎಂದು ಕೇಳಿ, ಹಿಂದೆ ತಿರುಗಿ ಸಿಎಂ ಕಡೆ ನೋಡದೆಯೇ ಹೊರಟರು.

ಏನೂ ಮಾತಾಡಿಲ್ಲ, ಬೇರೆ ವಿಷಯ ಮಾತಾಡಿದ್ದೇನೆ. ಮೊನ್ನೆ ಏನು ಹೇಳಿದ್ದೇನೋ ಅದಕ್ಕೆ ಬದ್ಧ ಆಗಿದ್ದೇನೆ. ಅವಿಶ್ವಾಸ ನಿರ್ಣಯ ಮಂಡಿಸಿದ್ರೆ ಮಂಡಿಸಲಿ. ಕಾನೂನು ಪ್ರಕಾರ ಏನು ಬೇಕಾದರೂ ಮಾಡಲಿ ಎಂದು ಸುದ್ದಿಗಾರರ ಪ್ರಶ್ನೆಗೆ ಹೊರಟ್ಟಿ ಪ್ರತಿಕ್ರಿಯಿಸಿದ್ದರು.

Related Posts

Leave a Reply

Your email address will not be published. Required fields are marked *