ನಟಿ ತ್ರಿಶಾ ಕುರಿತಂತೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಪ್ರಕರಣದಲ್ಲಿ ತಮಿಳುನಾಡಿನ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ತಂಜಾವೂರಿನಲ್ಲಿ ರೈತರ ಪ್ರತಿಭಟನೆ ವೇಳೆ ಉದಯನಿಧಿ ತ್ರಿಶಾ ವಿರುದ್ಧ ನೀಡಿರುವ ಹೇಳಿಕೆ ಬಹಳಷ್ಟು ವಿವಾದಕ್ಕೆ ಗ್ರಾಸವಾಗಿತ್ತು. ಚೆನ್ನೈನ ನೀಲಂಕರೈನಲ್ಲಿರುವ ನಿವಾಸದಲ್ಲೆಇ ಪೊಲೀಸರು ಉದಯನಿಧಿ ಅವರನ್ನು ಬಂಧಿಸಿದ್ದಾರೆ. ಡಿಎಂಕೆ ಪಕ್ಷವು ಉದಯನಿಧಿಗೆ ಕಾನೂನು ರಕ್ಷಣೆ ನೀಡುವಂತೆ ಕೋರಿ ಈಗಾಗಲೇ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ತಂಜಾವೂರಿನ ರೈತರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ದ ಉದಯನಿಧಿ, ಮುಖ್ಯಮಂತ್ರಿ ವಿಜಯ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆಗ ಸಬೆಯಲ್ಲಿದ್ದ ವ್ಯಕ್ತಿಯೊಬ್ಬ ನಟಿಯ ಹೆಸರನ್ನು ಕೂಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಉದಯನಿಧಿ ನೀಡಿದ ಹೇಳಿಕೆ ದ್ವಂದ್ವಾರ್ಥದಿಂದ ಕೂಡಿದ್ದು, ಮಹಿಳೆಯ ಬಗ್ಗೆ ಅವಹೇಳನಕಾರಿಯಾಗಿದೆ ಎಂದು ಆರೋಪಿಸಲಾಗಿದೆ.
ಉದಯನಿಧಿ ನೀಡಿದ ಆಕ್ಷೇಪಾರ್ಹ ಹೇಳಿಕೆಗಳ ವಿರುದ್ಧ ಆಡಳಿತಾರೂಢ ಟಿವಿಕೆ ಪೊಲೀಸ್ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ತಂಜಾವೂರಿನ ಟಿವಿಕೆ ಜಿಲ್ಲಾ ಮಹಿಳಾ ಘಟಕದ ಸಂಘಟಕಿ ಎಸ್. ಭೈರವಿ ದೂರು ದಾಖಲಿಸಿದ್ದರು. ಉದಯನಿಧಿ ತಂಗಿರುವ ನಿವಾಸದ ಮುಂದೆ ತಮಿಳುನಾಡು ಪೊಲೀಸರು ಭಾರಿ ಬಂದೋಬಸ್ತ್ ಮಾಡಿದ್ದರು.


