ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯು ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ಚಾಟಿ ಬೀಸಿದೆ.
ವಂಚನೆ ಹಾಗೂ ಇತರ ಅಪರಾಧಗಳ ಆರೋಪಗಳ ಕುರಿತು ತಜ್ಞರ ವಿಶೇಷ ತಂಡದಿಂದ ಸ್ವತಂತ್ರ ತನಿಖೆ ಮತ್ತು ಯೋಜನೆಯ ಲೆಕ್ಕಪತ್ರಗಳ ಫೊರೆನ್ಸಿಕ್ ಆಡಿಟ್ ನಡೆಸಲು ಸೂಕ್ತ ಪ್ರಕರಣ ಇದಾಗಿದೆ ಎಂದು ಕೋರ್ಟ್ ಅಪ್ರಾಯಪಟ್ಟಿದೆ.
ಈ ನಿಟ್ಟಿನಲ್ಲಿ ತನಿಖೆ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕೋರ್ಟ್, ಯೋಜನೆಯ ಪ್ರವರ್ತಕರಾದ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಮತ್ತು ಇತರರು ಚೌಕಟ್ಟು ಒಪ್ಪಂದ ಉಲ್ಲಂಘಿಸಿ ಭೂಮಿಯನ್ನು ಬೇರೆ ಉದ್ದೇಶಗಳಿಗೆ ಬಳಸುವುದು, ಆಸ್ತಿಗಳನ್ನು ಬಂಡವಾಳೀಕರಣ ಮಾಡುವುದು, ಕೆರೆಗಳನ್ನು ಒಣಗಿಸುವುದು, ಒಪ್ಪಂದಕ್ಕೆ ವಿರುದ್ಧವಾಗಿ ಟೋಲ್ ಸಂಗ್ರಹಿಸುವುದು ಹಾಗೂ ಪರಿಹಾರ ನೀಡದೆ ಅಪಾರ ಪ್ರಮಾಣದ ಭೂಮಿ ವಶದಲ್ಲಿಟ್ಟುಕೊಳ್ಳುವುದಕ್ಕೆ ರಾಜ್ಯ ಸರ್ಕಾರವೇ ಸಹಕಾರಿಯಾಗಿದೆ ಎಂದು ಹೇಳಿದೆ.
ನೈಸ್ ಯೋಜನೆಯಿಂದ ಸಾರ್ವಜನಿಕ ಹಿತಾಸಕ್ತಿಗೆ ಯಾವುದೇ ಪ್ರಯೋಜನವಾಗಿಲ್ಲ. ಭೂಮಾಲೀಕರ ಹಿತಾಸಕ್ತಿಯನ್ನು ಬಲಿ ನೀಡಿ, ಯೋಜನೆಯ ಪ್ರವರ್ತಕರಿಗೆ ಮಾತ್ರ ಲಾಭವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನಾದಾಫ್ ಅವರಿದ್ದ ವಿಭಾಗೀಯ ಪೀಠವು, ನೈಸ್ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸುವ ವೇಳೆ ಈ ಅಭಿಪ್ರಾಯಗಳನ್ನು ನೀಡಿದೆ.
2025ರ ಜುಲೈ 4ರಂದು ಏಕಸದಸ್ಯ ನ್ಯಾಯಮೂರ್ತಿ ನೀಡಿದ್ದ ತೀರ್ಪಿನಲ್ಲಿ,ಅಂತಿಮ ಅಧಿಸೂಚನೆ ಹೊರಡಿಸಿ 23 ವರ್ಷಗಳು ಕಳೆದರೂ ಭೂಸ್ವಾಧೀನಕ್ಕೆ ಸಂಬಂಧಿಸಿದ ಪರಿಹಾರದ ಪ್ರಶಸ್ತಿ ಪ್ರಕಟಿಸದ ಕಾರಣ ಹಲವು ಎಕರೆ ಭೂಸ್ವಾಧೀನವನ್ನು ರದ್ದುಪಡಿಸಲಾಗಿತ್ತು. ಈ ತೀರ್ಪನ್ನು ಪ್ರಶ್ನಿಸಿ ನೈಸ್ ಹಾಗೂ ಕೆಐಎಡಿಬಿ ಮೇಲ್ಮನವಿ ಸಲ್ಲಿಸಿದ್ದವು.
ನೈಸ್ ಯೋಜನೆಯಲ್ಲಿ ನೈಸ್ ಎಂಬುದು ಏನೂ ಇಲ್ಲ, ಸಂವಿಧಾನದ 300ಎ ವಿಧಿಯ ಪ್ರಕಾರ ನೀಡಬೇಕಾದ ಪರಿಹಾರವಿಲ್ಲದೆ ರೈತರ ಭೂಮಿ ಹಾಗೂ ತಲೆಮಾರುಗಳ ಜೀವನೋಪಾಯವನ್ನು ಕಸಿದುಕೊಂಡಿರುವುದಷ್ಟೇ ನಡೆದ ಕೆಲಸ ಎಂದು ಕೋರ್ಟ್ ಕಟುವಾಗಿ ಪ್ರತಿಕ್ರಿಯಿಸಿದೆ.
ಭೂಸ್ವಾಧೀನದ ಮಾನ್ಯತೆಯನ್ನು ಸುಪ್ರೀಂ ಕೋರ್ಟ್ ಈಗಾಗಲೇ ಎತ್ತಿಹಿಡಿದಿರುವುದರಿಂದ ರೈತರು ಮತ್ತೆ ಪ್ರಶ್ನಿಸಲು ಸಾಧ್ಯವಿಲ್ಲ ಎಂಬ ನೈಸ್ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು. ಪ್ರಕರಣದಲ್ಲಿ ರೈತರು ಭೂಸ್ವಾಧೀನದ ಮಾನ್ಯತೆಯನ್ನು ಪ್ರಶ್ನಿಸಿಲ್ಲ. ಭೂಸ್ವಾಧೀನ ಅಧಿಸೂಚನೆ ಹೊರಬಿದ್ದ ಎರಡು ದಶಕಗಳ ಬಳಿಕವೂ ಹಾಗೂ ಸುಪ್ರೀಂ ಕೋರ್ಟ್ ಭೂಸ್ವಾಧೀನವನ್ನು ಎತ್ತಿಹಿಡಿದ 15 ವರ್ಷಗಳ ಬಳಿಕವೂ ಪ್ರಶಸ್ತಿ ಪ್ರಕಟಿಸದಿರುವುದನ್ನಷ್ಟೇ ಪ್ರಶ್ನಿಸಿದ್ದಾರೆ. ಇಷ್ಟು ವಿಳಂಬವಾದರೆ ಭೂಸ್ವಾಧೀನ ಪ್ರಕ್ರಿಯೆ ಕಾನೂನುಬದ್ಧವಾಗಿ ಉಳಿಯುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನೈಸ್ ಮೂಲ ಉದ್ದೇಶವಾದ ಐದು ಟೌನ್‌ಶಿಪ್‌ಗಳು ಹಾಗೂ ಬೆಂಗಳೂರು–ಮೈಸೂರು ನಡುವಿನ 111 ಕಿ.ಮೀ. ಎಕ್ಸ್‌ಪ್ರೆಸ್‌ವೇ ನಿರ್ಮಾಣದಲ್ಲಿ ಸಂಪೂರ್ಣ ವಿಫಲವಾಗಿದೆ. ಆದರೂ ಸರ್ಕಾರ ಈ ಯೋಜನೆಯನ್ನು ಮರು ಪರಿಶೀಲಿಸದಿರುವುದು ಅಥವಾ ರದ್ದುಪಡಿಸದಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಆಕ್ಷೇಪವೆತ್ತಿದೆ. 25 ವರ್ಷಗಳಲ್ಲಿ 1 ಕಿಲೋಮೀಟರ್ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗಿರುವುದು ಯೋಜನೆಯ ವಿಫಲತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಹೈಕೋರ್ಟ್ ತೀಕ್ಷ್ಣವಾಗಿ ಹೇಳಿದೆ.


