ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನವು ಆಗಸ್ಟ್ ೧೩ರಿಂದ ೨೭ರವರೆಗೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಅಧಿಸೂಚನೆ ಪ್ರಕಟಿಸಿದೆ.
ಆಗಸ್ಟ್ 13ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ಗಳ ಅಧಿವೇಶನ ಆರಂಭವಾಗಲಿದ್ದು, ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆದ ಬಳಿಕ ನಡೆಯುವ ಮೊದಲ ಅಧಿವೇಶನ ಇದಾಗಿರುತ್ತದೆ.
ಅದಕ್ಕೂ ಮೊದಲು ಸಚಿವ ಸಂಪುಟ ವಿಸ್ತರಣೆಗೊಳ್ಳಲಿದ್ದು, ಹೊಸ ಸಚಿವರ ಭಾಗವಹಿಸುವಿಕೆಯೊಂದಿಗೆ ಅಧಿವೇಶನ ನಡೆಯಲಿದೆ. ಹೊಸ ಸಂಪುಟದಲ್ಲಿ ಶೇ. 75 ಹೊಸ ಮುಖಗಳು ಮತ್ತು ಶೇ. 25 ಹಿರಿಯ ಸಚಿವರು ಇರಲಿದ್ದಾರೆ ಎನ್ನಲಾಗಿದೆ.ಅಧಿವೇಶನದ ಅವಧಿಯಲ್ಲಿ ಆಗಸ್ಟ್ 15, 16, 22, 23 ಮತ್ತು 26ರಂದು ರಜಾ ದಿನಗಳಾಗಿರುವುದರಿಂದ ಕಲಾಪ ಇರುವುದಿಲ್ಲ.
ಜುಲೈ 30 ಗುರುವಾರ ಸಂಜೆ ರಾಜಭವನ ಅಥವಾ ಲೋಕಭವನದ ಗ್ಲಾಸ್ ಹೌಸ್ನಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಯಿದೆ. ಸಚಿವರಾಗಲಿರುವ ಶಾಸಕರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಲಾಗಿದ್ದು, ರಾಹುಲ್ ಗಾಂಧಿ ಒಪ್ಪಿಗೆ ಬಾಕಿಯಿದೆ. ಗುರುವಾರ ಸಾಧ್ಯವಾಗದಿದ್ದರೆ ಶುಕ್ರವಾರ ಪ್ರಮಾಣವಚನ ಸಮಾರಂಭ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.
ಸಚಿವ ಸಂಪುಟ ವಿಸ್ತರಣೆಯ ಜೊತೆಗೆ ವಿಧಾನಸಭೆ ಸಭಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸಭಾಪತಿ ಹುದ್ದೆಗಳಿಗೂ ಹೈಕಮಾಂಡ್ ಹೆಸರುಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಈ ಹುದ್ದೆಗಳಿಗೆ ಮಾಜಿ ಸಚಿವರಾದ ಎಚ್.ಕೆ. ಪಾಟೀಲ್ ಹಾಗೂ ಎನ್.ಎಸ್. ಬೋಸರಾಜು ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.


