ಬಿಜೆಪಿ ಶಾಸಕರ ಮೇಲಿನ ಮೊಟ್ಟೆ ಎಸೆತ ಹಾಗೂ ಹಲ್ಲೆ ಪ್ರಕರಣದ ತನಿಖೆಯಲ್ಲಿ ಸತ್ಯಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿ ಮತ್ತೊಮ್ಮೆ ಬಯಲಾಗಿದೆ. ಸಿಎಂ @DKShivakumar ಅವರೇ, KPCC ಎಂದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಅಲ್ಲ, ಅದು ‘ಕೊತ್ವಾಲ್ ಪ್ರದೇಶ ಕಾಂಗ್ರೆಸ್ ಕಮಿಟಿ’ ಎಂದು ಮತ್ತೊಮ್ಮೆ ಸಾಬೀತಾಗಿದೆ. ಡಿಕೆ, ಬಿಕೆ, ಪಿಕೆ ನೇತೃತ್ವದಲ್ಲಿ ಇಡೀ @INCKarnataka ಪಕ್ಷವೇ ರೌಡಿಗಳು, ಗೂಂಡಾಗಳ ಅಡ್ಡಾವಾಗಿ ಮಾರ್ಪಟ್ಟಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿ ಶಾಸಕ ಬಿ.ಪಿ. ಹರೀಶ್ ಹಾಗೂ ನಾಯಕರ ಮೇಲೆ ಮೊಟ್ಟೆ ಎಸೆದು ಹಲ್ಲೆ ನಡೆಸಿದ ಆರೋಪಿಗಳು ಕಾಂಗ್ರೆಸ್ ಶಾಸಕನ ಪುತ್ರನ ಬೆಂಬಲಿಗರು ಮತ್ತು ಕಾರ್ಯಕರ್ತರು. KPCC ಕಚೇರಿ ಬಳಿಯ ಅಂಗಡಿಯಲ್ಲೇ ಮೊಟ್ಟೆ ಖರೀದಿಸಿ, ಪೂರ್ವನಿಯೋಜಿತವಾಗಿ ಈ ಗೂಂಡಾವರ್ತನೆ ಎಸಗಲಾಗಿದೆ. ಸರ್ಕಾರಿ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆಸಿ ಹಲವು ಠಾಣೆಗಳಲ್ಲಿ ಕೇಸ್‌ಗಳನ್ನು ಹೊಂದಿರುವ, ರೌಡಿಶೀಟರ್ ತೆರೆಯಲು ಯೋಗ್ಯರಾಗಿರುವ ಅಪರಾಧಿಗಳೇ ಕಾಂಗ್ರೆಸ್ ಪಕ್ಷದ ಆಸ್ತಿ ಎಂದಿದ್ದಾರೆ.
ವಿರೋಧ ಪಕ್ಷದ ಜನಪ್ರತಿನಿಧಿಗಳ ಮೇಲೆಯೇ ಗೂಂಡಾಗಳನ್ನು ಬಿಟ್ಟು ಹಲ್ಲೆ ಮಾಡಿಸುವ ಮಟ್ಟಕ್ಕೆ ಕಾಂಗ್ರೆಸ್ ಇಳಿದಿದೆಯೇ? ಅಧಿಕಾರದ ಮದ ತಲೆಗೇರಿ ರೌಡಿಗಳನ್ನು ಸಾಕಿ ಬೆಳೆಸುತ್ತಿರುವ ನಿಮ್ಮ ಗೂಂಡಾ ರಾಜಕೀಯಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಲ್ಲೆಯ ಹಿಂದೆ ಇರುವ “ಪ್ರಭಾವಿ ಶಾಸಕ”ನ ಪುತ್ರ ಹಾಗೂ ಅವರ ಹಿಂದಿರುವ ಸೂತ್ರಧಾರರನ್ನು ತಕ್ಷಣವೇ ಬಂದಿಸಬೇಕು. ಇಲ್ಲವಾದರೆ, ಪೊಲೀಸರನ್ನು ಕೈಗೊಂಬೆ ಮಾಡಿಕೊಂಡು ರೌಡಿರಾಜ್ಯ ನಡೆಸಲು ಹೊರಟಿರುವ ಈ @INCKarnataka ಸರ್ಕಾರದ ಗೂಂಡಾಗಿರಿ ವಿರುದ್ಧ ಬಿಜೆಪಿ ಕಠಿಣ ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.


