ದೇವೇಗೌಡರಂತಹ ಪರಮ ಹುಟ್ಟು ಹೋರಾಟಗಾರನಿಗೆ ಮತ್ತು ರಾಜಕಾರಣವೇ ತಮ್ಮ ಉಸಿರೆಂದು ನಂಬಿದ ವ್ಯಕ್ತಿಯ ಜೊತೆ ೭೨ ವರ್ಷಗಳ ಕಾಲ, ವಿವಾಹಿತ ಮಹಿಳೆ ಯಾವುದೇ ತಂಟೆ, ತಕರಾರು ಇಲ್ಲದೆ ಸಂಸಾರ ಮಾಡುವುದೆಂದರೆ ಇದು ಭಾರತೀಯ ರಾಜಕಾರಣದ ಚರಿತ್ರೆಯಲ್ಲಿಯೇ ಅಪರೂಪ ಅಧ್ಯಾಯ ಎಂದರೆ ಅತಿಶಯವಲ್ಲ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಧರ್ಮಪತ್ನಿ ಚನ್ನಮ್ಮ ಅವರೂ ಒಂದರ್ಥದಲ್ಲಿ ಜನತಾ ಪಕ್ಷ ಮತ್ತು ಜನತಾದಳದ ಇತಿಹಾಸಕ್ಕೆ ಒಂದು ಸಾಕ್ಷಿ ಎಂದರೆ ತಪ್ಪಲ್ಲ. ದೇಶದ ತುರ್ತುಪರಿಸ್ಥಿತಿಯ ಸಮಯದಲ್ಲಿ ಸಂಸಾರ ತಾಪತ್ರಯಗಳ ನಡುವೆಯೂ ಪತಿಯ (ದೇವೇಗೌಡ) ಅವರ ರಾಜಕೀಯ ಹಿತ ಕಾಪಾಡಿದ್ದು, ತದನಂತರ ದೇವೇಗೌಡರು ಜನತಾ ಪಾರ್ಟಿಯನ್ನು ತಳಮಟ್ಟದಿಂದ ಕಟ್ಟಲೆಂದು ರಾಜ್ಯದ ಪ್ರತಿಯೊಂದು ಊರು- ಕೇರಿಯನ್ನು ಹಗಲೂ ರಾತ್ರಿ , ಸುತ್ತಾಡಿದಾಗ ಚನ್ನಮ್ಮ, ತಮ್ಮ ಪತಿರಾಯನಿಗೆ ನೀಡಿದ ಬೆಂಬಲ ನಂದೀ ಬೆಟ್ಟಕ್ಕಿಂತಲೂ ಎತ್ತರವಾದುದು ಎಂದರೆ ಅತಿಶಯವಲ್ಲ.
ದೇವೇಗೌಡ – ಚನ್ನಮ್ಮ ಅವರ ೭೨ ವರ್ಷಗಳ ಸುದೀರ್ಘ ವೈವಾಹಿಕ ದಾಂಪತ್ಯ ಜೀವನವೇ ಒಂದು ಇತಿಹಾಸ ! ಏಕೆಂದರೆ ರಾಜಕಾರಣದಲ್ಲಿ ದೇಶದ ಹಿಂದಿನ ಪ್ರಧಾನಿಗಳ ವೈಯಕ್ತಿಕ ಹಿನ್ನೆಲೆಯನ್ನು ಗಮನಿಸಿದಾಗ ಮನಮೋಹನಸಿಂಗ್, ಶಾಸ್ತ್ರಿ, ಮುರಾರ್ಜಿ ದೇಸಾಯಿ ಅಂತವರನ್ನು ಹೊರತುಪಡಿಸಿದರೆ ) ಚನ್ನಮ್ಮ ಅವರ ಹಾಗೆ ಪವರ್ ಸೆಂಟರ್ ನಿಂದ ಬಹಳ ದೂರ ಉಳಿದ ಮಿಸಸ್ ಪ್ರೈಮ್ ಮಿನಿಸ್ಟರ್‌ಗಳ ಪಟ್ಟಿ ಬಹಳ ಚಿಕ್ಕದು.
ಹೊಳೆನರಸೀಪುರದಿಂದ ದೆಹಲಿಯ ಕೆಂಪುಕೋಟೆ, ಜನಪಥ್ ವರೆಗೆ ಪತಿಯೊಂದಿಗೆ ತಮ್ಮ ಬದುಕನ್ನು ಸಾಗಿಸಿದ ನಾರಿ, ಪತಿಗೆ ಅಡಿಗಡಿಗೂ ಆಧಾರವಾಗಿದ್ದವರು. ದೇವೇಗೌಡರಂತಹ ಪರಮ ಹುಟ್ಟು ಹೋರಾಟಗಾರನಿಗೆ ಮತ್ತು ರಾಜಕಾರಣವೇ ತಮ್ಮ ಉಸಿರೆಂದು ನಂಬಿದ ವ್ಯಕ್ತಿಯ ಜೊತೆ ೭೨ ವರ್ಷಗಳ ಕಾಲ ಓರ್ವ ವಿವಾಹಿತ ಮಹಿಳೆ ಯಾವುದೇ ತಕರಾರು ಇಲ್ಲದೆ ಸಂಸಾರ ಮಾಡುವುದೆಂದರೆ ಇದು ಭಾರತೀಯ ರಾಜಕಾರಣದ ಚರಿತ್ರೆಯ ಪುಟಗಳಲ್ಲಿ ಒಂದು ಅಪರೂಪ ಅಧ್ಯಾಯವೇ ಸರಿ. ಚನ್ನಮ್ಮ ಅವರ ಕಣ್ ಮುಂದೆಯೇ ಜನತಾ ಪಾರ್ಟಿ ಜನಿಸಿತು . ಈ ಪಾರ್ಟಿ ಭವಿಷ್ಯದಲ್ಲಿ ಹಲವು ತುಂಡುಗಳಾಗಿ ಛಿದ್ರವೂ ಆಯಿತು, ಮತ್ತೆ ಜನತಾದಳದ ಹೊಸರೂಪ ಬಂದರೂ ಪುನಃ ವಿಭಜನೆ ಆಯಿತು.
ಈ ರಾಜಕೀಯ ಹೋರಾಟಗಳು ದಿನನಿತ್ಯದ ರಾಜಕೀಯ ಜಂಜಡಗಳಲ್ಲಿ ಚನ್ನಮ್ಮ ಮೌನ ವೀಕ್ಷಕಿಯೇ ವಿನಹ ಮೂಕಪ್ರೇಕ್ಷಕಿ ಅಲ್ಲ. ಜನತಾದಳ ಹೋಳಾದ ಹಾಗೆ ದೇವೇಗೌಡರ ಕುಟುಂಬ ಛಿದ್ರವಾಗದೆ ಕುಟುಂಬದ ಏಕತೆಯನ್ನು ಬಲವಾಗಿ ಕಾಪಾಡಿಕೊಂಡು ಬರುವುದರಲ್ಲಿ ಚನ್ನಮ್ಮ ಅವರ ಪಾತ್ರ ಅತಿ ದೊಡ್ಡದು. ೨೦೦೨ರಲ್ಲಿ ನಡೆದ ಆಸಿಡ್ ದಾಳಿ ಘಟನೆ ದೇಶದಲ್ಲಿ ತೀವ್ರ ಚರ್ಚೆಗೆ ಬರಲಿಲ್ಲ ಎಂಬುದ ನಿಜ. ಓರ್ವ ಮಾಜಿ ಪ್ರಧಾನಿ ಅವರ ಪತ್ನಿ ಎಂಬುದನ್ನು ಪಕ್ಕದಲ್ಲಿಟ್ಟು ಈ ಘಟನೆಯನ್ನು ನಾವು ನೋಡಿದಾಗ ಓರ್ವ ಹಿರಿಯ ಮಹಿಳೆಯ ಮೇಲೆ ನಡೆದ ಹೇಯ ಮತ್ತು ಅಮಾನವೀಯ ದಾಳಿಯಿದು. ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯೋರ್ವಳ ಮೇಲೆ ನಡೆದ ಈ ಆಸಿಡ್ ದಾಳಿ ಗಂಭೀರ ಚರ್ಚೆ ಆಗಬೇಕಿತ್ತು . ಅಂದು ಚನ್ನಮ್ಮ ಮೇಲೆ ನಡೆದಿದ್ದ ಆಸಿಡ್ ದಾಳಿ ಸಾಮಾನ್ಯದ್ದಲ್ಲ . ಆದರೂ ಇದಾವ ಚರ್ಚೆ ಮತ್ತು ವ್ಯಾಖ್ಯಾನಗಳಿಗೆ ಇವರಾಗಲೀ, ದೇವೇಗೌಡರ ಕುಟುಂಬವಾಗಲೀ ಅವಕಾಶ ನೀಡಲಿಲ್ಲ . ಆರೋಪಿಯನ್ನು ಕ್ಷಮಿಸಿದ ಕ್ಷಮಯಾಧರಿತ್ರಿ ಈಕೆ.
ಒಟ್ಟಿನಲ್ಲಿ ದೇಶದ ರಾಜಕಾರಣದಲ್ಲಿ ದೇವೇಗೌಡರೇ ಒಂದು ವಿಶೇಷ ಪುಸ್ತಕವಾದರೆ, ಇವರ ಜೊತೆ ಜೊತೆಯಲ್ಲಿಯೇ ಚನ್ನಮ್ಮ ಅವರೂ ಭಾರತೀಯ ರಾಜಕಾರಣದಲ್ಲಿ ಅಪರೂಪ ದಾಖಲೆಯೊಂದನ್ನು ಬರೆದಿಟ್ಟು ಪರಲೋಕಕ್ಕೆ ತೆರಳಿದ ಓರ್ವ ದಿಟ್ಟ ನಾರಿ.


