Friday, September 04, 2026
Menu

ಬಸ್‌ ಪ್ರಯಾಣ ದರ ಹೆಚ್ಚಳಕ್ಕೆ ಚಿಂತನೆ: ಸಚಿವ ಬೈರತಿ ಸುರೇಶ್‌

ಜನಸಾಮಾನ್ಯರಿಗೆ ಹೊರೆಯಾಗದ ರೀತಿ ಸ್ವಲ್ಪ ಮಟ್ಟಿಗೆ  ಕೆಎಸ್ಸಾರ್ಟಿಸಿ ಬಸ್‌  ಪ್ರಯಾಣ ದರ ಹೆಚ್ಚಳಕ್ಕೆ ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್‌ ಹೇಳಿದ್ದಾರೆ.

ಬಸ್ ಡಿಪೋ, ನಿಲ್ದಾಣಗಳ ಉನ್ನತೀಕರಣಕ್ಕೆ ಕೇಂದ್ರದಿಂದ 2 ಸಾವಿರ ಕೋಟಿ ಸಾಲಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾರಿಗೆ ಇಲಾಖೆ ಇತಿಹಾಸದಲ್ಲಿ  ಮೊದಲ ಬಾರಿಗೆ ಬಿಎಂಟಿಸಿಗೆ 4500 ಎಲೆಕ್ಟ್ರಿಕ್ ಬಸ್ ಗಳು ಲಭ್ಯವಾಗಲಿವೆ.
ಮುಖ್ಯಮಂತ್ರಿ ಡಿಕೆಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದ ಅತಿ ಮಹತ್ತರ ನಿರ್ಧಾರ ಇದಾಗಿದೆ .
ಕೇಂದ್ರ ಸರ್ಕಾರದ ಪಿಎಂ ಇ-ಡ್ರೈವ್ ಕಾರ್ಯಕ್ರಮದಡಿ ಈ 4500 ಬಸ್  ಪಡೆಯಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ವಾರ್ಷಿಕ 600 ಕೋಟಿ ರೂಪಾಯಿ ವೆಚ್ಚ ಮಾಡಲಿದೆ. 20 ವರ್ಷಕ್ಕೆ  12,000 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಈ ಯೋಜನೆಗೆ ಖರ್ಚು ಮಾಡಲಿದೆ ಎಂದು ತಿಳಿಸಿದರು.

12 ಮೀಟರ್ ಉದ್ದದ 3800 ಎಲೆಕ್ಟ್ರಿಕ್ ಬಸ್ ಗಳು ಮತ್ತು 900 ಬಸ್ ಗಳು 9 ಮೀಟರ್ ಉದ್ದದ್ದಾಗಿರುತ್ತವೆ. ಇವುಗಳಲ್ಲಿ 400 ಬಸ್ ಗಳು ಹವಾನಿಯಂತ್ರಿತವಾಗಿರುತ್ತವೆ.  ವಾಹನ ತಯಾರಿಕಾ ಸಂಸ್ಥೆಗಳು ಹಂತಹಂತವಾಗಿ ಇವಿ ಬಸ್ ಗಳನ್ನು  ಬಿಎಂಟಿಸಿಗೆ ಪೂರೈಕೆ ಮಾಡಲಿದ್ದು, ಈ ಬಸ್ ಗಳನ್ನು ಬೆಂಗಳೂರು ನಾಗರಿಕರ ಸೇವೆಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಈ ಇವಿ ಬಸ್ ಗಳ ಸಂಚಾರದಿಂದ ಬೆಂಗಳೂರು ನಗರದ ಪರಿಸರ ಮಾಲಿನ್ಯ ಪ್ರಮಾಣ ಕಡಿಮೆಯಾಗಲಿದೆ. ಈ ಮೂಲಕ ರಾಜ್ಯ ಸರ್ಕಾರ ಪರಿಸರ ಸಂರಕ್ಷಣೆಯ ಬದ್ಧತೆಯನ್ನು ಪ್ರದರ್ಶಿಸಲಿದೆ ಎಂದು  ಹೇಳಿದರು.

ಕೇಂದ್ರ ಸರ್ಕಾರ ವಿವಿಧ ಬಸ್ ತಯಾರಿಕಾ ಸಂಸ್ಥೆಗಳ ಮೂಲಕ ಈ ಎಲೆಕ್ಟ್ರಿಕ್ ಬಸ್ ಗಳನ್ನು ಪೂರೈಕೆ ಮಾಡುತ್ತದೆ. ಒಂದು ಕಿಲೋಮೀಟರ್ ಗೆ ಇಂತಿಷ್ಟು ನಿಗದಿತ ಹಣವನ್ನು ಬಿಎಂಟಿಸಿ ಸಂಸ್ಥೆಗಳಿಗೆ ಪಾವತಿಸಲಿದೆ ಎಂದು  ಸಚಿವರು ತಿಳಿಸಿದರು.

ಕೇಂದ್ರ ಸರ್ಕಾರದಿಂದ 2 ಸಾವಿರ ಕೋಟಿ ರೂಪಾಯಿ ಸಾಲ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಇಡೀ ರಾಜ್ಯದಲ್ಲಿ ಹೊಸ ಬಸ್ ಡಿಪೋ ನಿರ್ಮಾಣ ಮತ್ತು ಹಳೆಯ ಬಸ್ ನಿಲ್ದಾಣಗಳ ಉನ್ನತೀಕರಣ ಮಾಡಲಾಗುತ್ತದೆ ಎಂದು ಹೇಳಿದರು.

ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿ ರಾಜ್ಯದ ಒಂದು ಕೋಟಿಗೂ ಅಧಿಕ ಮಹಿಳೆಯರಿಗೆ ಮೊದಲ ಹಂತದಲ್ಲಿ ಉಚಿತ ಸ್ಮಾರ್ಟ್ ಕಾರ್ಡ್  ವಿತರಿಸಲಾಗುತ್ತದೆ. 250 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಸದ್ಯದಲ್ಲೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದು  ತಿಳಿಸಿದರು.

ಕಳೆದ ಎಂಟು ತಿಂಗಳಲ್ಲಿ ಕೇಂದ್ರ ಸರ್ಕಾರ ತೈಲೋತ್ಪನ್ನ ದರಗಳನ್ನು ಹೆಚ್ಚಳ ಮಾಡಿದೆ.  ನಾವು ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಿಲ್ಲ. ಇದರಿಂದ ನಮ್ಮ ನಾಲ್ಕೂ ಸಾರಿಗೆ ನಿಗಮಗಳಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದರು.

ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಸಮಿತಿ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸುತ್ತಿದ್ದು, ಸದ್ಯದಲ್ಲೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.  ಜನಸಾಮಾನ್ಯರಿಗೆ ಹೆಚ್ಚು ಹೊರೆಯಾಗದ ರೀತಿ ಸ್ವಲ್ಪ ಪ್ರಮಾಣದಲ್ಲಿ ದರ ಪರಿಷ್ಕರಣೆ ಮಾಡಲಾಗುತ್ತದೆ. ಇದರಿಂದ ಆಗುವ ಹೊರೆ ಸರಿದೂಗಿಸಲು ಸರ್ಕಾರದಿಂದ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್  ಭರವಸೆ ನೀಡಿದ್ದಾರೆ. ಈ ಮೂಲಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಸಚಿವರು ತಿಳಿಸಿದರು.

Related Posts

Leave a Reply

Your email address will not be published. Required fields are marked *