Friday, September 04, 2026
Menu

ಮಾನಸಿಕ ಅಸ್ವಸ್ಥೆ ಮೇಲೆ ದೌರ್ಜನ್ಯ ಯತ್ನ: ಕಚ್ಚಿ ಬಾಲಕನ ಓಡಿಸಿದ ಬೀದಿ ನಾಯಿ

ತಮಿಳುನಾಡಿನ ಕೊಯಂಬತ್ತೂರಿನ ರಸ್ತೆಬದಿಯಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಬಾಲಕನನ್ನು ಬೀದಿನಾಯಿ ಕಚ್ಚಿ ಓಡಿಸಿದ ಘಟನೆ ನಡೆದಿದೆ.

ರಸ್ತೆಬದಿಯಲ್ಲಿದ್ದ ಅಸಹಾಯಕ ಹಾಗೂ ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಬಾಲಕ ದೌರ್ಜನ್ಯ ಎಸಗಲು ಮುಂದಾದಾಗ ಬೀದಿ ನಾಯಿ ಆತನ ಮೇಲೆರಗಿ ಆಕೆಯ ರಕ್ಷಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಬಾಲಕನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ಕೊಯಂಬತ್ತೂರಿನ ತುಡಿಯಲೂರು ಸಮೀಪ ಅಶೋಕಪುರಂ ಎನ್‌ಜಿಜಿಒ ಕಾಲೊನಿ ಬಳಿ ರೈಲು ಮೇಲ್ಸೆತುವೆಯ ಸರ್ವಿಸ್‌ ರಸ್ತೆ ಬದಿ ಈ ಘಟನೆ ನಡೆದಿದೆ.

ಅಸ್ವಸ್ಥ ಮಹಿಳೆ ಅಲ್ಲಿ ಕುಳಿತಿದ್ದಾಗ ಬಾಲಕ ಆಕೆಯ ಬಳಿ ತೆರಳಿದ್ದಾನೆ. ನಿರ್ಜನ ಪ್ರದೇಶವಾಗಿದ್ದರಿಂದ ಬಾಲಕ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದಾನೆ. ಮಹಿಳೆ ರಕ್ಷಣೆಗಾಗಿ ಕಿರುಚುತ್ತಿದ್ದಂತೆ, ನಾಯಿ ಆತನ ಕಾಲುಗಳನ್ನು ಕಚ್ಚಿದೆ, ಹೆದರಿದ ಬಾಲಕ ಮಹಿಳೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ನಾಯಿ ಆತನನ್ನು ರಸ್ತೆಯುದ್ದ ಬೆನ್ನಟ್ಟಿ ಓಡಿಸಿದೆ.

ಆ ಪ್ರದೇಶದ ಪೆಟ್ಟಿಗೆ ಅಂಗಡಿಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದ ದೂರಿನ ತನಿಖೆ ನಡೆಸುತ್ತಿದ್ದ ತುಡಿಯಲೂರು ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದರು. ಆಗ ಅನಿರೀಕ್ಷಿತವಾಗಿ ಈ ಮಹಿಳೆಯ ಮೇಲಿನ ದೌರ್ಜನ್ಯ ಯತ್ನ ಹಾಗೂ ನಾಯಿಗಳ ರಕ್ಷಣಾ ಸಾಹಸ ಕ್ಯಾಮೆರಾದಲ್ಲಿ ಕಂಡುಬಂದಿದೆ. ತನಿಖೆ ಆರಂಭಿಸಿದ ಪೊಲೀಸರು, ಗಣೇಶ್ ನಗರ ನಿವಾಸಿಯಾಗಿದ್ದ ಬಾಲಕನನ್ನು ಪತ್ತೆಹಚ್ಚಿ ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಿದ್ದಾರೆ.

ಮಹಿಳೆ ಪ್ರತಿದಿನ ಅದೇ ಪ್ರದೇಶದಲ್ಲಿರುತ್ತಿದ್ದು, ತನಗೆ ಸಿಗುವ ಆಹಾರದಲ್ಲಿ ಸ್ವಲ್ಪ ಪಾಲನ್ನುಬೀದಿ ನಾಯಿಗಳಿಗೆ ಹಂಚುತ್ತಿದ್ದರು. ಈ ಪ್ರೀತಿಯನ್ನು ಆಕೆಗೆ ರಕ್ಷಣೆ ನೀಡುವ ಮೂಲಕ ನಾಯಿಗಳು ತೋರಿಸಿಕೊಟ್ಟಿವೆ. ಘಟನೆಯ ಸಿಸಿಟಿವಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶ್ವಾನಗಳ ನಿಷ್ಠೆಯನ್ನು ಕೊಂಡಾಡಿದ್ದಾರೆ.

Related Posts

Leave a Reply

Your email address will not be published. Required fields are marked *