Menu

ಕನ್ನಡನಾಡಿನಲ್ಲೇ ಗಾನಕೋಗಿಲೆ ಎಸ್‌ ಜಾನಕಿ ಮತ್ತೆ ಜನಿಸಲಿ

ಎಸ್‌ಪಿಬಿ ಮತ್ತು ಎಸ್. ಜಾನಕಿ ಇವರಿಬ್ಬರ ಜೀವವೂ ಕನ್ನಡನಾಡಿನಲ್ಲಿಯೇ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಜನ್ಮತಃ ಇವರಿಬ್ಬರೂ ತೆಲುಗು ಬಿಡ್ಡಲು. ಆದರೆ ಇವರಿಬ್ಬರ ಹೃದಯ ಕೊನೆಯವರೆಗೂ ಕನ್ನಡತಾಯಿಗಾಗಿ ಮಿಡಿಯಿತು.

ಜನ್ಮ ಕೊಟ್ಟ ಏಕೈಕ ಮಗ ಮತ್ತು ಮಗಳನ್ನು ಕಳೆದುಕೊಂಡ ಜಾನಕಿ ಕೊನೆಗೆ ತಾಯಿ ಚಾಮುಂಡೇಶ್ವರಿಯ ಮಡಿಲಿನಲ್ಲಿ ಚಿರನಿದ್ದೆಗೆ ಜಾರಿದ್ದು ಈ ನಾಡಿನ ಮಹಾಭಾಗ್ಯ. ಜಾನಕಿ ಮುಂದಿನ ಜನ್ಮದಲ್ಲಾದರೂ ಈ ಕನ್ನಡನಾಡಿನಲ್ಲಿಯೇ ಜನಿಸಲಿ.

ಮಧುರ ಗಾಯಕಿ ಎಸ್. ಜಾನಕಿ ಸಮಸ್ತ ಗಾಯನರಸಿಕ ಪ್ರಿಯರಿಗೆ ಹಲವು ಹತ್ತು ಸುಮಧುರ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಕನ್ನಡವಲ್ಲದೆ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಇವರು ಚಿತ್ರ ಗಾಯನಲೋಕದ ಅಜರಾಮರ ಗಾಯಕಿ. ಜನಿಸಿದ್ದು ಆಂಧ್ರದಲ್ಲಿ . ಬಹುತೇಕ ಹಾಡುಗಳನ್ನು ಆಲಾಪಿಸಿದ್ದೂ ತೆಲುಗು ಮತ್ತು ತಮಿಳಿನಲ್ಲಿ. ಇವರು ಬದುಕಿದ್ದಾಗ ಇವರ ಸಿರಿಕಂಠವನ್ನು ಬಳಸಿಕೊಂಡ ರಾಜ್ಯದ ಜನತೆಯ ಪರವಾಗಿ ಮೊನ್ನೆ ಅಲ್ಲಿನ ಸರ್ಕಾರದ ಪ್ರತಿನಿಧಿಗಳು ಒಬ್ಬರಾದರೂ ಈಕೆಯ ಗೌರವಾರ್ಥ ಮೈಸೂರಿಗೆ ಬಂದು ಅಂತಿಮ ದರ್ಶನವನ್ನು ಪಡೆಯಬೇಕಿತ್ತು ದುರದೃಷ್ಟವಶಾತ್ ತೆಲಂಗಾಣ, ತಮಿಳುನಾಡು ಆಗಲೀ, ಆಂಧ್ರ, ಕೇರಳದ ರಾಜ್ಯದ ಪ್ರತಿನಿಧಿಗಳಾಗಲೀ ಮೈಸೂರಿಗೆ ಬಾರದೆ  ಹೋಗಿದ್ದು ನಿಜಕ್ಕೂ ವಿಷಾದಕರ.

ಪ್ರಸಿದ್ದ ಗಾಯಕಿಯ ನಿಧನಕ್ಕೆ ಈ ರಾಜ್ಯಗಳು ಕನಿಷ್ಠ ಗೌರವವನ್ನಾದರೂ ತೋರಿದ್ದರೆ ಜಾನಕಿ ಅವರ ಆತ್ಮಕ್ಕೆ ಶಾಂತಿ ದೊರೆಯುತ್ತಿತ್ತು. ಹುಟ್ಟಿದ್ದು ಗುಂಟೂರಿನಲ್ಲಿ ಆದರೂ ಕೊನೆಗೆ ಕಳೆದ ಒಂದು ದಶಕದ ಅವಧಿಯಿಂದಲೂ ಮೈಸೂರಿನಲ್ಲಿ ವಾಸವಾಗಿದ್ದ ಈಕೆಯ ಜೀವನದಲ್ಲಿ ಹಲವು ಹತ್ತು ವಿಷಾದಗಳು ಗೂಡುಕಟ್ಟಿವೆ. ಕರ್ನಾಟಕ ರಾಜ್ಯ ಸರ್ಕಾರದ ಗೌರವಗಳ ಮೂಲಕ ಈಕೆಯ ಅಂತ್ಯಕ್ರಿಯೆ ನಡೆಯಿತು ಆದರೆ ಪ್ರಸಿದ್ದ ಗಾಯಕಿಯ ಅಂತಿಮಯಾತ್ರೆಯಲ್ಲಿ ನಾಡಿನ ಮತ್ತು ಪರರಾಜ್ಯದ ಇನ್ನೂ ಕೆಲವು ಪ್ರಸಿದ್ದ ಕಲಾವಿದರು ಯಾರೂ ಬಾರದೆ ಹೋಗಿದ್ದು ನಿಜಕ್ಕೂ ಕಳವಳಕಾರಿ.

ಜಾನಕಿ ಅಂತಹ ಮಹಾನ್ ಗಾಯಕಿಗೆ ಇಡೀ ದಕ್ಷಿಣದ ರಾಜ್ಯಗಳು ಚಿರಋಣಿ ಆಗಿರಬೇಕು. ಜಾನಕಿ ಈ ಶತಮಾನ ಕಂಡ ನಿರ್ಗರ್ವಿ ನಿರಾಡಂಬರಿ ಮತ್ತು ಅಪ್ಪಟ ಸ್ವಾಭಿಮಾನಿ ಗಾಯಕಿ. ಕಲಾವಿದರಿಗೆ ಪ್ರಶಸ್ತಿ ಅಥವಾ ಸನ್ಮಾನ ಮುಖ್ಯವಲ್ಲ. ಆದರೆ ಜಾನಕಿ ಅವರಂತಹ ಗಾಯಕಿ ಮುಂದೆಯೇ ಸರ್ಕಾರಗಳು ಇವರಿಗಿಂತಲೂ ಕಿರಿಯರಿಗೆ ಉನ್ನತ ಗೌರವವನ್ನು ಸಲ್ಲಿಸಿ ಪ್ರಶಸ್ತಿ ನೀಡಿದರೆ ಜಾನಕಿ ಅಂತಹ ಓರ್ವ ಹಿರಿಯ ಮತ್ತು ಅನುಭವಿ ಕಲಾವಿದರ ಮನಸಿಗೆ ಘಾಸಿ ಮತ್ತು ಆಘಾತ ಆಗುವುದಿಲ್ಲವೇ?

ಪದ್ಮಭೂಷಣ ಪ್ರಶಸ್ತಿಯನ್ನು ನಿರಾಕರಿಸಿ ಅವರು ಮೈಸೂರಿನಲ್ಲಿ ತಮ್ಮ ಬದುಕುನ್ನು ಕಂಡು ಕೊಂಡರೂ ಇವರಿಗೆ ಸಲ್ಲಬೇಕಿರುವ ಗೌರವ ಪುರಸ್ಕಾರಗಳು ಸಲ್ಲದೆ ಹೋಗಿದ್ದು ಪರಮ ಸೋಜಿಗ. ಬಾಲಸುಬ್ರಮಣ್ಯಂ ನಿಧನದ ಸಮಯದಲ್ಲಿಯೂ ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳು ನಡೆದುಕೊಂಡ ರೀತಿ ಚರ್ಚಾರ್ಹ.  ದಾಖಲೆ ಮಟ್ಟದಲ್ಲಿ ಹಾಡುಗಳನ್ನು ಆಲಾಪಿಸಿದ ಮಹಾ ಗಾಯಕನಿಗೆ ಕೊನೆಯ ಕ್ಷಣದಲ್ಲಿ ನೀಡಬೇಕಿದ್ದ ಗೌರವ ಸಂತಾಪದಲ್ಲಿ ಲೋಪ ಎಸಗಿದ್ದು ಅಕ್ಷಮ್ಯ.

ಎಸ್‌ಪಿ ಮತ್ತು ಜಾನಕಿ ಇವರಿಬ್ಬರ ಜೀವವೂ ಕನ್ನಡನಾಡಿನಲ್ಲಿಯೇ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಜನ್ಮತಃ ಇವರಿಬ್ಬರೂ ತೆಲುಗು ಬಿಡ್ಡಲು. ಆದರೆ ಇವರಿಬ್ಬರ ಹೃದಯ ಕೊನೆಯವರೆಗೂ ಕನ್ನಡತಾಯಿಗಾಗಿ ಮಿಡಿಯಿತು. ಜನ್ಮ ಕೊಟ್ಟ ಏಕೈಕ ಮಗ ಮತ್ತು ಮಗಳನ್ನು ಕಳೆದುಕೊಂಡ ಜಾನಕಿ ಕೊನೆಗೆ ತಾಯಿ ಚಾಮುಂಡಿ ಮಡಿಲಿನಲ್ಲಿ ಚಿರನಿದ್ದೆಗೆ ಜಾರಿದ್ದು ಈ ನಾಡಿನ ಮಹಾಭಾಗ್ಯ. ಜಾನಕಿ ಮುಂದಿನ ಜನ್ಮದಲ್ಲಿ ಈ ಕನ್ನಡನಾಡಿನಲ್ಲಿಯೇ ಜನಿಸಿ ಬರಲಿ.

Related Posts

Leave a Reply

Your email address will not be published. Required fields are marked *