ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಬರೆದಿರುವ “ಮೆಮೋರೆಬಲ್ ಟ್ರಯಲ್ಸ್ – ಅವಿಸ್ಮರಣೀಯ ಪ್ರಕರಣಗಳು” ಕೃತಿಯ ಕನ್ನಡ ಹಾಗೂ ಇಂಗ್ಲೀಷ್ ಆವೃತ್ತಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.
ಮೆಮೋರೆಬಲ್ ಟ್ರಯಲ್ಸ್ – ಅವಿಸ್ಮರಣೀಯ ಪ್ರಕರಣಗಳು ಕೃತಿಯನ್ನುಸಂತೋಷದಿಂದ ಲೋಕಾರ್ಪಣೆಯನ್ನು ಮಾಡಿದ್ದೇನೆ. ಪುಸ್ತಕಗಳನ್ನು ಉಚಿತ ಪಡೆಯುವುದಕ್ಕಿಂತ, ದುಡ್ಡು ಕೊಟ್ಟು ಖರೀದಿಸಿ ಓದುವ ಸಂಸ್ಕೃತಿ ಬೆಳೆಯಬೇಕು. ಇನ್ನು ಮುಂದೆ ಸಮಯವೂ, ಅವಕಾಶವೂ ದೊರೆಯಲಿರುವುದರಿಂದ ಹೆಚ್ಚಿನ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ನಿವೃತ್ತ ಜೀವನದಲ್ಲಿದ್ದರೂ ಅತ್ಯಂತ ಕ್ರಿಯಾಶೀಲರಾಗಿದ್ದಾರೆ. ಸಮಾಜಮುಖಿ ವಿಚಾರಗಳ ಕುರಿತು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಹಲವು ಕೃತಿಗಳನ್ನು ರಚಿಸಿರುವ ಅವರು, 2018ರಲ್ಲಿ ‘ಸಂವಿಧಾನ ಓದು’ ಕೃತಿಯನ್ನು ಪ್ರಕಟಿಸಿದರು. ಈ ಕೃತಿಯ ಮೂಲಕ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸುವ ಮಹತ್ವದ ಪ್ರಯತ್ನ ಮಾಡಿದ್ದಾರೆ. ಅಲ್ಲದೆ, ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳ ಕುರಿತು ಅಧ್ಯಯನ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದಾರೆ ಎಂದರು.
ಸಂವಿಧಾನದ ಧ್ಯೇಯ, ಆಶಯ ಮತ್ತು ಮೌಲ್ಯಗಳನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವ ಕಾರ್ಯವನ್ನು ನಾಗಮೋಹನ್ ದಾಸ್ ನಿರಂತರವಾಗಿ ಮಾಡುತ್ತಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ಸಂವಿಧಾನವು ಎಲ್ಲ ವ್ಯಕ್ತಿಗಳಿಗಿಂತಲೂ ಶ್ರೇಷ್ಠವಾದದ್ದು. ಆದ್ದರಿಂದ ಪ್ರತಿಯೊಬ್ಬ ನಾಗರಿಕರೂ ಅದರ ಆಶಯ, ಮೌಲ್ಯಗಳು ಹಾಗೂ ತತ್ವ ತಿಳಿದುಕೊಳ್ಳುವುದು ಅಗತ್ಯ. ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಸಂವಿಧಾನದ ಆಶಯಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸುವ ಕೆಲಸ ಮಾಡಬೇಕು. ಅದನ್ನು ನಿರ್ಲಕ್ಷಿಸಿದರೆ ಸಮಾಜದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಆದರೆ ಸಂವಿಧಾನದ ಆದ್ಯತೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೆ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಹೇಳಿದರು.
ಸಂವಿಧಾನದ ಬಗ್ಗೆ ತಿಳಿದುಕೊಂಡರೆ ನಿಮ್ಮ ತಪ್ಪುಗಳೇನು, ನಿಮ್ಮ ಜವಾಬ್ದಾರಿಗಳೇನು ಎಂದು ತಿಳಿಯುತ್ತದೆ, ಇಲ್ಲವಾದರೆ ನಮ್ಮ ಕರ್ತವ್ಯಗಳೇನು ಎಂಬುದು ತಿಳಿಯುದಿಲ್ಲ ಎಂದು ಅಭಿಪ್ರಾಯಪಟ್ಟರು. ನಮ್ಮ ಸಮಾಜದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ಯಾರಿಗೆ ಇತಿಹಾಸ ಗೊತ್ತಿರುವುದಿಲ್ಲವೋ ಅವರು ಯಾರು ಕೂಡ ಭವಿಷ್ಯವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ನಮ್ಮ ಸಮಾಜದಲ್ಲಿ ಅಸಮಾನತೆ ಇದೆ. ಯಾಕೆ ಅಸಮಾನತೆ ಇದೆ ಎನ್ನುವುದು ಇತಿಹಾಸದಿಂದ ತಿಳಿಯಬೇಕು. ಜಾತಿ ವ್ಯವಸ್ಥೆ ಹೋಗಬೇಕಾದರೆ ಸಂವಿಧಾನ ಬದಲಾಗಬೇಕು. ಅಸಮಾನತೆ ತೊಲಗಬೇಕು ಎಂದು ಮಾಜಿ ಸಿಎಂ ತಿಳಿಸಿದರು.
ಎಲ್ಲಿಯವರೆಗೆ ಎಲ್ಲಾ ವರ್ಗದವರಿಗೆ ನಾವು ಆರ್ಥಿಕ, ಸಮಾಜಿಕ ಶಕ್ತಿಯನ್ನು ನಾವು ಕೊಡುವುದಿಲ್ಲವೋ ಅಲ್ಲಿಯವರೆಗೆ ಅಸಮಾನತೆ ಹೋಗುವುದಿಲ್ಲ ಎಂದು ಅಂಬೇಡ್ಕರ್ ಅವರ ಮಾತನ್ನು ನೆನಪಿಸಿಕೊಂಡರು. ನಾಗಮೋಹನ್ ದಾಸ್ ಅವರು ಅನೇಕ ಅವಿಸ್ಮರಣೀಯ ಪ್ರಕರಣಗಳನ್ನು ಆಯ್ಕೆ ಮಾಡಿಕೊಂಡು 21 ಘಟನೆಯ ಪ್ರಕರಣಗಳನ್ನು ಮೆಮೋರೆಬಲ್ ಟ್ರಯಲ್ಸ್ – ಅವಿಸ್ಮರಣೀಯ ಪ್ರಕರಣಗಳು ಪುಸ್ತಕದಲ್ಲಿ ಬರೆದಿದ್ದಾರೆ. ಈ ದೇಶದಲ್ಲಿ ಹೋರಾಡಿದವರ, ಜನಸಮಾನ್ಯರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಡಿದವರ ಬಗ್ಗೆ ಹಾಗೂ ದೇಶಕ್ಕಾಗಿ ಬಲಿದಾನ, ತ್ಯಾಗ ಮಾಡಿದವವ ಕುರಿತು ಬಹಳ ಸ್ಪಷ್ಟವಾಗಿ ಈ ಪುಸ್ತಕದಲ್ಲಿ ತಿಳಿಸಿದ್ದಾರೆ ಎಂದು ವಿವರಿಸಿದರು.
ಯುವಕರು ಸಂವಿಧಾನದ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು ಮುಂದಿನ ತಿಂಗಳಿಗೆ 79 ವರ್ಷಗಳಾಗುತ್ತದೆ. ಸಂವಿಧಾನ ಜಾರಿಗೆ ಬಂದು 76 ವರ್ಷಗಳಾಯಿತು. ಇಷ್ಟು ವರ್ಷ ಆದರೂ ಸಂವಿಧಾನ ಪೂರ್ಣವಾಗಿ ಜಾರಿಯಾಗಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕೆಲವು ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕೊಡುವ ಪ್ರಯತ್ನ ಮಾಡಿದರು. ಇಂದು ನೆಹರು ಮತ್ತು ನರೇಂದ್ರ ಮೋದಿಯನ್ನು ಹೋಲಿಕೆ ಕೆಲಸ ಆಗುತ್ತಿದೆ. ನೆಹರು ಮತ್ತು ಮೋದಿಯವರನ್ನು ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ ಸುಳ್ಳನ್ನು ಜನರಿಗೆ ಹೇಳಿದಾಗ ಅದನ್ನು ನಂಬುವಂತವರು ಇದ್ದಾರೆ. 17 ವರ್ಷ ನೆಹರೂ ಪ್ರಧಾನಿಯಾಗಿದ್ದರು. ಮೋದಿಯವರು ಪ್ರಧಾನಿಯಾಗಿ 12 ವರ್ಷವಾಗಿಯಿತು. ಅವರ ದಾಖಲೆಯನ್ನು ಮುರಿದರು ಎಂದು ಕಾರ್ಯಕ್ರಮ ಮಾಡಿದರು. ಜನ ಅದಕ್ಕೆ ಚಪ್ಪಾಳೆ ತಟ್ಟಿದರು. ಹೀಗೆ ಜನರಿಗೆ ಸುಳ್ಳು ಪ್ರಚಾರವನ್ನು ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಜನ ಅದನ್ನು ಸತ್ಯವೆಂದು ನಂಬುತ್ತಿದ್ದಾರೆ. ಈ ವಿಚಾರವನ್ನು ಚರ್ಚಿಸದೇ ಇದ್ದರೆ ಸತ್ಯ ಹೇಗೆ ಹೊರಗೆ ಬರುತ್ತದೆ? ಈ ಬಗ್ಗೆ ಪುಸ್ತಕಗಳು ಬರದೇ ಹೋದರೆ ಅದೇ ನಿಜವೆಂದು ಜನ ನಂಬುತ್ತಾರೆ ಎಂದು ಸಿದ್ದರಾಮಯ್ಯ ತಿಳಿ ಹೇಳಿದರು.
ಸತ್ಯ ಯಾವುದು ಅಸತ್ಯ ಯಾವುದು ಎಂಬುದನ್ನು ಗುರುತಿಸುವ ಕೆಲಸ ಮಾಡಬೇಕು. ನಾವು ನಮ್ಮ ಸರ್ಕಾರದಲ್ಲಿ ʼಮೌಢ್ಯಗಳ ನಿಷೇಧ ಕಾಯ್ದೆʼ ಜಾರಿ ಮಾಡಿದ್ದೇವೆ. ಬಸವಣ್ಣನವರು ಬದುಕಿದ್ದಷ್ಟು ದಿನ ಮೌಢ್ಯಗಳನ್ನು ತಿರಸ್ಕಾರ ಮಾಡಿದರು. ವಚನ ಸಾಹಿತ್ಯವನ್ನು ನಿರ್ಮಾಣ ಮಾಡಿದರು. ಹೀಗಿದ್ದರೂ ಮೌಢ್ಯಗಳು ಇನ್ನೂ ಜೀವಂತವಾಗಿದೆ. ವಿದ್ಯಾವಂತರೇ ಮೌಢ್ಯಯಗಳನ್ನು ಆಚರಿಸುತ್ತಾರೆ. ಪಟ್ಟಭದ್ರ ಹಿತಾಸಕ್ತಗಳ ವಿರುದ್ಧ ಮಾತನಾಡಿದರೆ ಪ್ರಕರಣ ದಾಖಲಿಸುತ್ತಾರೆ. ಪ್ರಕರಣ ದಾಖಲಿಸಿದರು ಪರವಾಗಿಲ್ಲ. ಆ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನ ಪಡಬೇಕು ಎಂದು ಹೇಳಿದರು..
ಬಲಿದಾನವೇ ನಮ್ಮ ಇತಿಹಾಸ, ಅದೇ ನಮಗೆ ಧರ್ಮಗ್ರಂಥ. ಸಂವಿಧಾನದ ರೀತಿಯಲ್ಲಿ ನಡೆದುಕೊಂಡರೆ ನಿಮ್ಮ ಜವಾಬ್ದಾರಿಗಳೇನು, ನಿಮ್ಮ ಕರ್ತವ್ಯಗಳೇನು ಎಂದು ತಿಳಿಯುತ್ತದೆ. ಕರ್ತವ್ಯಗಳನ್ನು ನಿರ್ವಹಿಸುವಂತಹ ಕೆಲಸವನ್ನು ಮಾಡಿದಾಗ ನಾವು ಸಂವಿಧಾನದ ರೀತಿ ನಡೆಯುತ್ತಿದ್ದೇವೆ ಎಂದು ಆಗುತ್ತದೆ. ವೈಜ್ಞಾನಿಕತೆ ಶಿಕ್ಷಣದಲ್ಲಿ ಬರದೆ ಹೋದರೆ ಈ ಮೌಢ್ಯಗಳು ಹಾಗೆ ಮುಂದುವರಿಯುವಂತ ಕೆಲಸಗಳು ನಡೆಯುತ್ತದೆ ಎಂದರು.
ಸಮಾಜ ಮೌಢ್ಯಗಳಿಂದ ದೂರ ಇರಬೇಕಂದರೆ ನಾವೆಲ್ಲರೂ ಕೂಡ ಮೌಢ್ಯಗಳನ್ನು ಆಚರಣೆ ಮಾಡುವಂತ ಕೆಲಸವನ್ನು ಬಿಡಬೇಕು ಎಂದು ತಿಳಿಸಿದರು. ಹಾಗೆ ಮಾಡಿದರೆ ಮಾತ್ರ ಜಾತಿ ವ್ಯವಸ್ಥೆ ಹೋಗಲಾಡಿಸಲು ಸಾಧ್ಯ ಎಂದರು. ಅನೇಕ ದಾರ್ಶನಿಕರು, ಸಾಧು ಸಂತರು ಬಂದು ಹೋಗಿದ್ದಾರೆ. ಜಾತಿ ವ್ಯವಸ್ಥೆ ಮಾತ್ರ ಜೀವಂತವಾಗಿ ಇದೆ. ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ ಎಂದು ಬಸವಣ್ಣನವರ ವಚನ ನೆನಪಿಸಿಕೊಂಡರು.
“ಮೆಮೋರೆಬಲ್ ಟ್ರಯಲ್ಸ್ – ಅವಿಸ್ಮರಣೀಯ ಪ್ರಕರಣಗಳು” ಕೃತಿಯನ್ನು ಎಲ್ಲರೂ ಓದಬೇಕು. ಇದರ ಜೊತೆಗೆ ಬೇರೆ ಪ್ರಕರಣಗಳನ್ನು ಓದಬೇಕು. ನಾನು ಕೊನೆಯವರೆಗೂ ಜನರ ಜೊತೆ ಸಂಪರ್ಕದಲ್ಲಿರುವಂತೆ ಕೆಲಸ ಮಾಡುತ್ತೇನೆ. ಜನರಿಗೆ ಕೆಲವೊಂದು ವಿಚಾರಗಳ ಬಗ್ಗೆ ಅರಿವು ಮೂಡಿಸುತ್ತೇನೆ. ನಾಗಮೋಹನ್ ದಾಸ್ ಅವರು ಹೀಗೆ ತಮ್ಮ ಕೆಲಸದಲ್ಲಿ ಮುಂದುವರೆಯಲಿ. ಅವರಿಗೆ ಆಯಸ್ಸು, ಆರೋಗ್ಯ ಹೆಚ್ಚಾಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.


