Menu

ಚಿನ್ನದ ಆಮದು ಇಳಿಮುಖ: ಅರ್ಥಿಕ ಚೇತರಿಕೆ ಏರುಮುಖ

ಪ್ರಧಾನಿ ಮೋದಿ ಚಿನ್ನದ ಆಭರಣ ಖರೀದಿಯನ್ನು ಒಂದು ವರ್ಷ ಮುಂದೂಡಲು ಮನವಿ ಮಾಡಿದ್ದು ಫಲಕಾರಿಯಾಗಿದೆ. ಶೇ.೭೦ ರಷ್ಟು ಚಿನ್ನದ ಆಮದು ಕಡಿಮೆಯಾಗಿದೆ. ಇದರಿಂದ ದೇಶದ ಆರ್ಥಿಕತೆಯಲ್ಲಿ ಚೇತರಿಕೆ ಕಂಡು ಬರಲು ಸಾಧ್ಯವಾಗಿದೆ.

ಪ್ರತಿ ತಿಂಗಳು ೭೫-೧೦೦ ಟನ್ ಚಿನ್ನ ಆಮದಾಗುತ್ತಿತ್ತು. ಈಗ ಅದು ೨೫-೩೦ ಟನ್‌ಗಳಿಗೆ ಇಳಿದಿದೆ.ಇದರಿಂದ ನೇರವಾಗಿ ಚಾಲ್ತಿ ಖಾತೆ ಕೊರತೆ ಕಡಿಮೆಯಾಗಿದೆ. ಜಿಡಿಪಿಯಯಲ್ಲಿ ಹಣದುಬ್ಬರದ ಪ್ರಭಾವ ಇಳಿಮುಖಗೊಂಡಿದೆ. ಚಿನ್ನದ ಆಮದಿನಿಂದ ನಿಷ್ಕ್ರಿಯ ಬಂಡವಾಳ ಅಧಿಕಗೊಳ್ಳಲಿದೆ. ಜನಸಾಮಾನ್ಯರಲ್ಲಿ ಆಪತ್ ಧನ ಎಂದರೆ ಚಿನ್ನ ಎಂಬ ಭಾವನೆ ಇರುವುದು ಸಹಜ. ಏಕೆಂದರೆ ಚಿನ್ನದ ಬೆಲೆ ಇಳಿಯುವುದಿಲ್ಲ. ಇಳಿದರೂ ಕೆಲವು ದಿನಗಳ ನಂತರ ಅಧಿಕಗೊಳ್ಳುವುದು ಗ್ಯಾರಂಟಿ. ಅದರಿಂದ ಜನ ಚಿನ್ನದ ರೂಪದಲ್ಲಿ ಹೆಚ್ಚು ಹಣ ಇಡಲು ಬಯಸುತ್ತಾರೆ. ಇದರಿಂದ ವಿದೇಶಿ ಚಿನ್ನ ಖರೀದಿಗೆ ನಾವು ವಿದೇಶಿ ವಿನಿಮಯ ರೂಪದಲ್ಲಿ ಹೆಚ್ಚು ರೂಪಾಯಿ ನೀಡಬೇಕು. ಹೀಗಾಗಿ ಡಾಲರ್ ದರ ಅಧಿಕಗೊಳ್ಳುತ್ತ ಹೋಗುತ್ತದೆ. ರೂಪಾಯಿ ಮೌಲ್ಯ ಇಳಿಮುಖಗೊಳ್ಳುತ್ತದೆ. ಚಿನ್ನದೊಂದಿಗೆ ಇಂಧನ ತೈಲ ಖರೀದಿಗೂ ಡಾಲರ್ ಬೇಕಾಗುವುದರಿಂದ ನಮ್ಮ ಆರ್ಥಿಕತೆಯ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ.

ಈಗ ಇರಾನ್- ಅಮೆರಿಕ ಯುದ್ಧ ನಿಲ್ಲುವ ಹಂತಕ್ಕೆ ಬಂದು ತಲುಪಿದೆ. ಆದರೆ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ದರ ಗಗನಕ್ಕೇರಿರುವುದು ನಿಜ. ಎಷ್ಟೋ ಹೊಟೇಲ್‌ಗಳು ಮುಚ್ಚಿ ಹೋದವು. ನೌಕರರು ಬೀದಿ ಪಾಲಾದರು. ಇದನ್ನು ತಪ್ಪಿಸಬೇಕು ಎಂದರೆ ನಾವು ಚಿನ್ನ ಖರೀದಿಯನ್ನು ಕಡಿಮೆ ಮಾಡಬೇಕು. ಆಗ ಡಾಲರ್ ಮೇಲೆ ಹೆಚ್ಚು ಹಣ ಹೂಡುವುದು ಅನಿವಾರ್ಯ ಕಡಿಮೆ ಮಾಡಬಹುದು. ಚಿನ್ನದ ಮೇಲೆ ಆಮದು ಸುಂಕವನ್ನು ಶೇ.೬ ರಿಂದ ೧೫ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಚಿನ್ನದ ಖರೀದಿ ಕಡಿಮೆಯಾಗಿದ್ದಂತೂ ನಿಜ. ಆದರೆ ಅಕ್ರಮ ಚಿನ್ನ ಸಾಗಣೆ ಅಧಿಕಗೊಳ್ಳುತ್ತದೆ. ಅದನ್ನು ತಪ್ಪಿಸಲು ಚಿನ್ನದ ಖರೀದಿಯನ್ನು ಕಡಿಮೆ ಮಾಡುವುದೇ ಈಗ ಇರುವ ಮಾರ್ಗ. ಪ್ರಧಾನಿ ಕರೆ ನೀಡಿದಾಗ ಪ್ರತಿಪಕ್ಷಗಳ ನಾಯಕರು ಅಪಹಾಸ್ಯ ಮಾಡಿದರು. ಅದರೆ ಜನ ಮಾತ್ರ ಪ್ರಧಾನಿಯ ಕರೆಯನ್ನು ಗಂಭೀರವಾಗಿ ಪರಿಗಣಿಸಿ ವಿದೇಶಿ ಚಿನ್ನದ ಖರೀದಿಯನ್ನು ಕಡಿತಗೊಳಿಸಿದರು. ಅಲ್ಲದೆ ಚಿನ್ನ ಬೆಳ್ಳಿ ವ್ಯಾಪಾರಿಗಳು ಕೂಡ ಸರ್ಕಾರದೊಂದಿಗೆ ಸಹಕರಿಸಲು ಒಪ್ಪಿದ್ದು ಉತ್ತಮ ಲಕ್ಷಣ. ಚಿನ್ನದ ವ್ಯಾಪಾರಿಗಳಿಗೆ ಹೆಚ್ಚು ವ್ಯಾಪಾರ ನಡೆದಷ್ಟೂ ಆದಾಯ ಬರುವುದು ಹೆಚ್ಚುತ್ತದೆ. ಅದು ಅವರ ವೃತ್ತಿಧರ್ಮವೂ ಹೌದು. ಆದರೂ ಅವರು ಪ್ರತಿಪಕ್ಷದ ನಾಯಕರಿಗಿಂತ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಿದ್ದು ಸ್ವಾಗತಾರ್ಹ.

ಚಿನ್ನದ ವ್ಯಾಪಾರಿಗಳು ಮನವಿ ಮಾಡಿದ್ದು ಒಂದೇ,  ಹಳೆಯ ಆಭರಣಗಳನ್ನು ತಂದು ಜನ ನವೀಕರಿಸಿಕೊಂಡಲ್ಲಿ ಚಿನ್ನದ ಆಚಾರಿಗಳಿಗೆ ಕೆಲಸ ಸಿಗುತ್ತದೆ. ಇಲ್ಲದಿದ್ದಲ್ಲಿ ಅವರ ಕುಟುಂಬ ಚೀವನ ನಡೆಸುವುದು ಕಷ್ಟ. ಇದು ಮಾನವೀಯ ಸಮಸ್ಯೆ. ಕುಶಲ ಕರ್ಮಿಗಳಿಗೆ ಕೆಲಸ ಕೊಡುವುದು ಮುಖ್ಯ. ಈಗ ಅಮೆರಿಕ- ಇರಾನ್ ಯುದ್ಧ ನಿಲ್ಲುವ ಹಂತ ತಲುಪಿದೆ. ಹರ್ಮೂಜ್ ಜಲ ಸಂಧಿ ಮುಕ್ತಗೊಂಡಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ದರ ಇಳಿಮುಖಗೊಳ್ಳಬಹುದು. ಅಲ್ಲಿಯವರೆಗೆ ಅಗತ್ಯವಸ್ತುಗಳ ಬೆಲೆ ಇಳಿಯಲಾರದು.

ವಾಹನಗಳಿಗೆ ಶೇಕಡ ೧೦೦ ರಷ್ಟು ಎಥನಾಲ್ ಬಳಕೆ ಜನಪ್ರಿಯಗೊಂಡಲ್ಲಿ ನಾವು ವಿದೇಶಿ ಇಂಧನ ತೈಲದ ಮೇಲೆ ಅವಲಂಬಿಸುವುದು ಕಡಿಮೆಯಾಗಲಿದೆ. ಅದಕ್ಕೆ ನಮ್ಮ ವಾಹನಗಳ ಎಂಜಿನ್ ವಿನ್ಯಾಸ ಬದಲಿಸುವುದು ಅಗತ್ಯ. ಹೊಸ ಎಂಜಿನ್ ತಯಾರಿಕೆಯಲ್ಲಿ ಎಥನಾಲ್ ಬಳಕೆ ಸುಲಭವಾಗುವಂತೆ ಮಾಡಬಹುದು. ಹಳೆ ಎಂಜಿನ್‌ಗಳ ಮಾರ್ಪಾಡಿಗೆ ಹಣ ಬೇಕು. ಸರ್ಕಾರ ಸಹಾಯಧನ ನೀಡಿದರೆ ಎಂಜಿನ್ ಮಾರ್ಪಾಡಿಗೆ ಅನುಕೂಲವಾಗುತ್ತದೆ. ಇವೆಲ್ಲವೂ ದೇಶದ ಆರ್ಥಿಕತೆಗೆ ಕಾರಣ ಎಂಬುದನ್ನು ಮರೆಯಬಾರದು.

Related Posts

Leave a Reply

Your email address will not be published. Required fields are marked *