Menu

ಗ್ಯಾರಂಟಿಗಳು ಅರ್ಹರಿಗಷ್ಟೇ ತಲುಪಲಿ

ಅಸೆಂಬ್ಲಿ ಚುನಾವಣೆಗಳು ಸಮೀಪಿಸುವ ಮುನ್ನ ಈಗಿನಿಂದಲೇ ಶಿವಕುಮಾರ್ ಸರ್ಕಾರ ಗ್ಯಾರಂಟಿ ಯೋಜನೆಗಳ ನಿಖರ ಜಾರಿ ಕುರಿತ ಗ್ರೌಂಡ್ ರಿಪೋರ್ಟ್‌ಗಳನ್ನು ಎಲ್ಲ ತಾಲೂಕುಗಳಿಂದ ಪಡೆಯುವುದು ಲೇಸು. ಗ್ಯಾರಂಟಿಗಳ ವಿತರಣೆಯಲ್ಲಿ ಲೋಪಗಳಾಗಿದ್ದರೆ ಇವುಗಳನ್ನು ಸರಿಪಡಿಸಲು ರಾಜ್ಯ ಸರ್ಕಾರ ತ್ವರಿತವಾಗಿ ಮುಂದಾಗಲಿ.

ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗಬಾರದು. ಅರ್ಹರಿಗೆ ಸಿಗಬೇಕಾದ ಸೌಲತ್ತು ಅನರ್ಹರಿಗೆ ಸಿಗುವಂತಾದರೆ ಇದು ಆಡಳಿತ ವ್ಯವಸ್ಥೆಯ ಲೋಪದಿಂದಾದ ಅವ್ಯವಸ್ಥೆ ಎನ್ನದೆ ವಿಧಿಯಿಲ್ಲ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮತ್ತು ದುರ್ಬಲರಿಗೆ ಸರ್ಕಾರಗಳಿಂದ ಸಕಾಲದಲ್ಲಿ ಕೆಲವೊಂದು ಸಹಾಯ ಮತ್ತು ನೆರವು ಅವಶ್ಯ. ಇದುವೇ ಸುಖೀ ರಾಜ್ಯದ (ವೇಲ್‌ಫೇರ್) ಪರಿಕಲ್ಪನೆ. ಯೋಜನೆಗಳ ಅನುಷ್ಠಾನದಲ್ಲಿ ಬಿಗಿ ಇಲ್ಲದಿದ್ದರೆ ಸರ್ಕಾರಗಳ ಆಶಯಗಳು ಈಡೇರದು ಮತ್ತು ನಿಜವಾದ ಫಲಾನಭವಿಗಳಿಗೆ ಸಿಗಬೇಕಿರುವ ನೆರವು ಮತ್ತು ಸಹಾಯ ತಲುಪುವುದಿಲ್ಲ.  ಬಹುತೇಕ ಜನಪ್ರಿಯ ಸರ್ಕಾರಗಳ ಲೋಪವಿದು.

ದರಿದ್ರ ನಾರಾಯಣನ ಪರಮ ಏಳಿಗೆಗಾಗಿ ಸರ್ಕಾರಗಳು ರೂಪಿಸುವ ಎಲ್ಲ ಯೋಜನೆಗಳ ನೂರಕ್ಕೆ ನೂರರಷ್ಟು ಜಾರಿಯೇ ಸರ್ಕಾರಗಳ ಸಾಮರ್ಥ್ಯಕ್ಕೊಂದು ಸವಾಲು. ಯಾವ ವರ್ಗದ ಏಳಿಗೆಗಾಗಿ ಮತ್ತು ಯಾರ ಸಾಮಾಜಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ರೂಪಿಸಿದ ಯೋಜನೆ ತಲುಪುವುದಿಲ್ಲವೋ, ಆಗ ಸರ್ಕಾರ ಖಜಾನೆಗೂ ದೊಡ್ಡ ಹಾನಿ. ಮಿಗಿಲಾಗಿ ಸರ್ಕಾರದ ಪಾಲಿಗೆ ಭಾರಿ ನಷ್ಟ.

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಬಡವರು ಮತ್ತು ಆರ್ಥಿಕ ದುರ್ಬಲರಿಗೆ ಗ್ಯಾರಂಟಿ ಯೋಜನೆಗಳು ಲಭ್ಯವಿದೆ. ಇದು ಕಾಂಗ್ರೆಸ್ ಸರ್ಕಾರದ ಯೋಜನೆ ಎಂಬುದರಲ್ಲಿ ಅನುಮಾನವಿಲ್ಲ. ಚುನಾವಣೆಗಳ ಸಮಯದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆ ಮತ್ತು ಪಕ್ಷ ಘೋಷಿಸಿದ್ದ ಪ್ರಣಾಳಿಕೆ ಅನುಸಾರ ಜನತೆಗೆ ಗ್ಯಾರಂಟಿ ಯೋಜೆನಗಳನ್ನು ಇಲ್ಲಿಯವರೆಗೆ ನೀಡಿರುವುದು ಸರಿ. ಆದರೆ ಯೋಜನೆಯ ಹೆಸರಿನಲ್ಲಿ ಉಳ್ಳವರು ಮತ್ತು ಅನರ್ಹರೂ ಈ ಯೋಜನೆಯ ಅನುಕೂಲ ಪಡೆದಿರುವುದು ಸತ್ಯಕ್ಕೆ ದೂರವಾದ ಸಂಗತಿಯಲ್ಲ. ಇದರ ಹಿಂದೆ ಭ್ರಷ್ಟ ಮತ್ತು ಪಟ್ಟಭದ್ರ ಅಧಿಕಾರಿಗಳ ಕೈವಾಡವೂ ಇದೆ.

ಜನತೆಯ ಹಸಿವು ನೀಗಿಸುವ ಮತ್ತು ಕಣ್ಣೀರು ಒರೆಸುವ ಯೋಜನೆಗಳ ಪರಿಶೀಲನೆಗೆಂದು ಹಿಂದಿನ ಸಿದ್ದರಾಮಯ್ಯ ಸರ್ಕಾರ ಪ್ರತಿ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಪರಿಶೀಲನೆ ಸಭೆಗಳನ್ನು ರಚಿಸಿರುವುದು ಸರಿ. ಈ ಸಮಿತಿಗಳ ಕಾರ್ಯವೈಖರಿಯ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ರಾಜಕೀಯ ಭವಿಷ್ಯ ಅವಲಂಬಿತವಾಗಿದೆ. ಗೃಹಜ್ಯೋತಿ, ಭಾಗ್ಯಜ್ಯೋತಿ ಮತ್ತು ಸ್ತ್ರಿ ಶಕ್ತಿ ಯೋಜನೆಗಳ ಸಂಪೂರ್ಣ ಅನುಷ್ಠಾನದ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈಗ ಗಂಭೀರ ದೃಷ್ಟಿ ಹರಿಸುವುದು ಅವಶ್ಯ.

ಈ ದೇಶದಲ್ಲಿ ದೇವರು ವರ ನೀಡಿದರೂ ಪೂಜಾರಿ ವರ ಕೊಡೋದು ಕಷ್ಟ. ಈ ವಾಸ್ತವ ಸರ್ಕಾರಕ್ಕೆ ಗೊತ್ತಿದೆ. ಈ ವ್ಯವಸ್ಥೆಯಿಂದ ಬದಲಾಗಲು ನಾವಿನ್ನೂ ಅದೆಷ್ಟು ದಿನ ಕಾಯಬೇಕೋ ,  ಅಸೆಂಬ್ಲಿ ಚುನಾವಣೆಗಳು ಸಮೀಪಿಸುವ ಮುನ್ನ ಈಗಿನಿಂದಲೇ ಶಿವಕುಮಾರ್ ಸರ್ಕಾರ ಗ್ಯಾರಂಟಿ ಯೋಜನೆಗಳ ನಿಖರ ಜಾರಿ ಕುರಿತ ಗ್ರೌಂಡ್ ರಿಪೋರ್ಟ್‌ಗಳನ್ನು ಎಲ್ಲ ತಾಲೂಕುಗಳಿಂದ ಪಡೆಯುವುದು ಲೇಸು. ಗ್ಯಾರಂಟಿಗಳ ವಿತರಣೆಯಲ್ಲಿ ಲೋಪಗಳಾಗಿದ್ದರೆ ಇವುಗಳನ್ನು ಸಮರೋಪಾದಿಯಲ್ಲಿ ನಿವಾರಿಸಲು ಡಿಕೆ ಸರ್ಕಾರ ಈಗಲೇ ಮುಂದಾದರೆ ಒಳಿತು. ಸರ್ಕಾರದ ಸಾರ್ಥಕ ಯೋಜನೆಗಳ ಆಡಳಿತದ ಲೋಪದಿಂದ ಕೊನೆಗೆ ಸೋಲುವಂತಾಗಬಾರದು.

Related Posts

Leave a Reply

Your email address will not be published. Required fields are marked *