ಬರ ಪರಿಸ್ಥಿತಿ ಎದುರಿಸಲು ತುರ್ತು ಕ್ರಮಗಳ ಪೂರ್ವಸಿದ್ಧತೆ , ರೈತರಿಗೆ ಅಗತ್ಯ ಮಾಹಿತಿ ಪೂರೈಕೆ, ಅತಿವೃಷ್ಟಿ, ಅನಾವೃಷ್ಟಿ ಎದುರಿಸಲು ಸರ್ವ ಸಿದ್ಧತೆ ಸೇರಿದಂತೆ ಎಲ್ಲ ಅಗತ್ಯ ನೆರವು ಒದಗಿಸಿ, ಕೃಷಿಗೆ ಅನುಕೂಲ ಕಲ್ಪಿಸುವಂತೆ ಸಿಎಂ ಡಿಕೆ ಶಿವಕುಮಾರ್ ಅಧಿಖಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕೃಷಿ, ತೋಟಗಾರಿಕೆ, ರೇಷ್ಮೆ ಮೀನುಗಾರಿಕೆ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ನಿರ್ನಿದೇಶನ ನೀಡಿದರು. ಕ್ರಿಮಿನಾಶಕ ಮತ್ತಿತರ ಔಷಧ ಸಿಂಪರಣೆ ಸಲಕರಣೆಗಳ ನೆರವನ್ನು ರೈತರಿಗೆ ಒದಗಿಸಿ. ಕೃಷಿ ಹೊಂಡಗಳಿಗೆ ಬಿದ್ದು ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಂಡಗಳಿಗೆ ಬೇಲಿ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಿ. ಇದಕ್ಕೆ ಹಣಕಾಸಿನ ನೆರವು ಸಂಬಂಧ ಅಗತ್ಯ ಯೋಜನೆ ರೂಪಿಸಿ, ಚರ್ಚಿಸಿ ಎಂದು ಸಲಹೆ ನೀಡಿದರು.
ಇತರ ರಾಜ್ಯಗಳಲ್ಲಿರುವ ಮಾದರಿ ಯೋಜನೆ, ಮಾರ್ಗಗಳನ್ನು ಅಧ್ಯಯನ ಮಾಡಿ ರಾಜ್ಯದ ಕೃಷಿ ಸಂಸ್ಕೃತಿ ಮತ್ತು ಬೆಳೆ ಮಾದರಿಗಳಿಗೆ ಅನುಗುಣವಾಗಿ ಕಾರ್ಯರೂಪಕ್ಕೆ ತನ್ನಿ. ದ್ರೋಣ್, AI ಮತ್ತಿತರ ಆಧುನಿಕ ತಂತ್ರಜ್ಞಾನವನ್ನು ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಿ. ಪ್ರಕೃತಿ ವೈಪರೀತ್ಯಗಳಿಂದ ರೈತರ ಕೃಷಿ ಚಟುವಟಿಕೆಗೆ ತೊಂದರೆ ಆಗದಂತೆ ಕ್ರಮ ವಹಿಸಿ. ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಪ್ರಾಥಮಿಕ ಕೃಷಿ ಜತೆ ಸೆಕೆಂಡರಿ ಕೃಷಿ ಸೇರಿದಂತೆ ರೈತರ ಆದಾಯ ಹೆಚ್ಚಿಸಲು ಈಗಾಗಲೇ ಸೂಚಿಸಿರುವ ಕ್ರಮಗಳನ್ನು ಸಮರ್ಪಕವಾಗಿ ಜಾರಿ ಮಾಡಿ. ಕೃಷಿ ಇಲಾಖೆ ಅಧೀನದಲ್ಲಿರುವ ಐದು ನಿಗಮ ಮತ್ತು ಮಂಡಳಿಗಳ ಸ್ಥಿತಿಗತಿಯ ಅಧ್ಯಯನ ನಡೆಸಿ ವರದಿ ನೀಡಿ. ರೈತರಿಗೆ ನೀಡಬೇಕಾದ ಪೂರಕ ಮಾಹಿತಿಗಳನ್ನು ವರದಿಯಲ್ಲಿ ಉಲ್ಲೇಖಿಸಿ. ರಾಜ್ಯದಲ್ಲಿರುವ ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮುಗಳು ಬಗ್ಗೆ ಪಟ್ಟಿ ಕೊಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ರೈತರಿಗೆ ಸಬ್ಸಿಡಿ ದರದಲ್ಲಿ ಕೊಟ್ಟಿರುವ ಸವಲತ್ತುಗಳು ಎಷ್ಟು ಪ್ರಯೋಜನಕಾರಿಯಾಗಿವೆ ಎನ್ನುವ ಬಗ್ಗೆ ಪರಿಶೀಲನೆ ನಡೆಸಿ. ಸಬ್ಸಿಡಿ ನೀಡಿರುವ ಉದ್ದೇಶ ಜಾರಿ ಆಗುತ್ತಿದೆಯೇ ಎಂಬುದರ ಬಗ್ಗೆ ವರದಿ ನೀಡಿ. ಕೆಪೆಕ್ ಮೂಲಕ ರಫ್ತು ಎಷ್ಟು ಹೆಚ್ಚಾಗಿದೆ. ರಫ್ತು ಉತ್ತೇಜಿಸಲು ಏನೇನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ರಫ್ತು ಉತ್ತೇಜನಕ್ಕೆ ಯೋಜನೆ ರೂಪಿಸಲು ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್ ಹಾಗೂ ಎಸಿಎಸ್ ತುಷಾರ ಗಿರಿನಾಥ್ ಅವರಿಗೆ ಸೂಚನೆ ನೀಡಿದರು.
ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳು ಎಷ್ಟರ ಮಟ್ಟಿಗೆ ಜಾರಿ ಆಗುತ್ತಿದೆ ಎನ್ನುವ ಬಗ್ಗೆ ವರದಿ ನೀಡಿ. ಕೇಂದ್ರದ ಸಹಕಾರ, ಅನುದಾನಕ್ಕೆ ಬರುವಂತೆ ಒತ್ತಡ ಹೇರೋಣ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಸೇರಿದ ಜಾಗಗಳು ಸುರಕ್ಷಿತವಾಗಿರಬೇಕು. ಕಾಂಪೌಂಡ್ ಹಾಕಿಸಿ, ಈ ಬಗ್ಗೆ ಕ್ರಮ ಕೈಗೊಳ್ಳಿ. APMC ಗಳು ಸರಿಯಾಗಿ ರೈತರಿಗೆ ಬಳಕೆ ಆಗುತ್ತಿವೆಯೇ ಎನ್ನುವ ಬಗ್ಗೆ ಖಚಿತಪಡಿಸಿಕೊಳ್ಳಿ. ಸಹಕಾರ ಇಲಾಖೆ ಅಡಿಯಲ್ಲಿ ಯಾವ್ಯಾವ ಸಂಸ್ಥೆಗಳಿಗೆ ಚುನಾವಣೆ ಆಗಬೇಕಿದೆಯೋ ಎಲ್ಲದಕ್ಕೂ ಚುನಾವಣೆ ಮಾಡಿ. ಕಾಸ್ಕಾರ್ಡ್ ಬ್ಯಾಂಕ್ ಗಳು ಕೊಡುವ ಬಡ್ಡಿ ರಹಿತ ಸಾಲದ ಸೌಲಭ್ಯ ಅಗತ್ಯವಿರುವವರಿಗೆ ತಲುಪುತ್ತಿಲ್ಲ. ಬ್ಯಾಂಕ್ ನವರೇ ತಮಗೆ ಬೇಕಾದವರ ಹೆಸರಲ್ಲಿ ಸಾಲ ಪಡೆಯುತ್ತಿದ್ದಾರೆ. ರೈತರಿಗೆ ವಂಚನೆ ಆಗಲು ಬಿಡಬಾರದು. 5 ಲಕ್ಷದವರೆಗೂ ಬಡ್ಡಿ ರಹಿತ ಸಾಲ ಸೌಲಭ್ಯ ದುರುಪಯೋಗ ಆಗುತ್ತಿರುವ ಬಗ್ಗೆ ರೈತರು ನನ್ನ ಬಳಿ ಬಂದು ದೂರುತ್ತಿದ್ದಾರೆ. ಇದಕ್ಕೆ ಕಟ್ಟು ನಿಟ್ಟಿನ ಬ್ರೇಕ್ ಹಾಕಬೇಕು ಎಂದು ಹೇಳಿದರು.
ಅಗತ್ಯ ಇರುವ ಫಲಾನುಭವಿಗಳಿಗೆ ಸಾಲ ಸವಲತ್ತು ತಲುಪುವಂತೆ ನೋಡಿಕೊಳ್ಳಿ. ಈ ವರ್ಷ 1068 ಕೋಟಿ ಮಾವು ಬೆಳೆ ನಾಶ ಆಗಿದೆ,ಇದರಲ್ಲಿ 25% ಅಂದರೆ 229 ಕೋಟಿ ರೂ. ಪರಿಹಾರ ಕೊಡಬೇಕಿದೆ. ಕರ್ನಾಟಕ ಸರಕಾರ 114 ಕೋಟಿ ಹಾಗೂ ಕೇಂದ್ರ ಸರಕಾರ 115 ಕೋಟಿ ನಷ್ಟ ಪರಿಹಾರ ಭರಿಸಬೇಕಿದೆ. ಕಾನೂನು ಪ್ರಕಾರ ಮಾವು ಬೆಳೆಗಾರರಿಗೆ ನಷ್ಟ ಪರಿಹಾರ ಸಿಗುವಂತೆ ನೋಡಿಕೊಳ್ಳಿ. APMC ಆವರ್ತ ನಿಧಿ ಸದ್ಬಳಕೆ ಆಗುವಂತೆ ನೋಡಿಕೊಳ್ಳಿ ಎಂದು ಸಿಎಂ ಹೇಳಿದರು.


