Menu

ಲೇಖಕಿ, ಪ್ರಕಾಶಕಿ ಇಂದಿರಾ ಲಂಕೇಶ್‌ ನಿಧನ

ಹಿರಿಯ ಪತ್ರಕರ್ತಪಿ. ಲಂಕೇಶ್‌ ಅವರ ಪತ್ನಿ  ಲೇಖಕಿ ಇಂದಿರಾ ಲಂಕೇಶ್ (84) ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ರಾಜಾಜಿನಗರದಲ್ಲಿರುವ ನಿವಾಸದಲ್ಲಿ ನಿಧನರಾಗಿದ್ದಾರೆ. ಮಗಳು ಕವಿತಾ ಲಂಕೇಶ್‌ (ಚಿತ್ರನಿರ್ದೇಶಕಿ), ಮಗ  ಇಂದ್ರಜಿತ್‌ ಲಂಕೇಶ್‌ (ಚಿತ್ರನಿರ್ದೇಶಕ ಹಾಗೂ ಪತ್ರಕರ್ತ) ಸೇರಿದಂತೆ ಬಂಧು-ಮಿತ್ರರನ್ನು ಅಗಲಿದ್ದಾರೆ.

ಇಂದಿರಾ ಲಂಕೇಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ, ಸಾಹಿತ್ಯ ಹಾಗೂ ಚಲನಚಿತ್ರ ರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ ಒಂಬತ್ತು ಗಂಟೆಗೆ  ಬನಶಂಕರಿ ಚಿತಾಗಾರದಲ್ಲಿ ನಡೆಯಲಿದೆ.

ಸಿನೆಮಾ ಮತ್ತು ಪತ್ರಿಕೋದ್ಯಮದಲ್ಲಿ ಪತಿ ಲಂಕೇಶ್‌ ಅವರಿಗೆ ಬೆಂಬಲವಾಗಿ ನಿಂತ ಇಂದಿರಾ ಲಂಕೇಶ್ ಲೇಖಕಿಯಾಗಿದ್ದರು. ಅವರ ‘ಹುಳಿ ಮಾವು ಮತ್ತು ನಾನು’ ಎಂಬ ಆತ್ಮಕಥೆ ಜನಪ್ರಿಯವಾಗಿದೆ. ಸೀರೆ ಅಂಗಡಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಇಂದಿರಾ ಅವರು, ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಹಲವು ಸಾಹಿತ್ಯಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.  ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್‌ ಜೋಡೋ ಯಾತ್ರೆಯಲ್ಲೂ ಅವರು ಪಾಲ್ಗೊಂಡಿದ್ದರು.

ನಾಡಿನ ಖ್ಯಾತ ಸಾಹಿತಿ ಮತ್ತು ಪತ್ರಕರ್ತರಾಗಿದ್ದ ದಿವಂಗತ ಪಿ.ಲಂಕೇಶ್‌ ಅವರ ಧರ್ಮಪತ್ನಿ ಇಂದಿರಾ ಲಂಕೇಶ್‌ ಅವರ ನಿಧನದ ವಿಷಯ ತಿಳಿದು ಅತೀವ ದುಃಖವಾಗಿದೆ. ಪಿ.ಲಂಕೇಶ್‌ ಅವರ ಸಾಹಿತ್ಯ, ಮಾಧ್ಯಮ ಹಾಗೂ ಚಿತ್ರರಂಗದ ಸಾಧನೆಗೆ ಇಂದಿರಾ ಲಂಕೇಶ್‌ ಅವರು ಬೆನ್ನೆಲುಬಾಗಿದ್ದರು. ಜೊತೆಗೆ ವ್ಯವಹಾರ, ಬರವಣಿಗೆ ಹಾಗೂ ಪುಸ್ತಕ ಪ್ರಕಟಣೆಯಲ್ಲೂ ತಮ್ಮನ್ನು ತೊಡಗಿಸಿಕೊಂಡು ಗಟ್ಟಿಗಿತ್ತಿಯಂತೆ ಬದುಕಿದ ಇಂದಿರಾ ಲಂಕೇಶ್‌ ಅವರು ಎಲ್ಲಾ ಹೆಣ್ಣುಮಕ್ಕಳಿಗೂ ಮಾದರಿಯಾಗಿದ್ದರು. ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ ಹಾಗೂ ನೋವಿನಲ್ಲಿರುವ ಕುಟುಂಬಸ್ಥರು, ಆಪ್ತರು, ಅಭಿಮಾನಿಗಳು ಹಾಗೂ ಸಾಹಿತ್ಯಾಸಕ್ತರಿಗೆ ಶಕ್ತಿ, ಧೈರ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಡಿಕೆ ಶಿವಕುಮಾರ್‌ ಎಕ್ಸ್‌ ಪೋಸ್ಟ್‌ ಮಾಡಿದ್ದಾರೆ. 

ಪ್ರಸಿದ್ಧ ಸಾಹಿತಿ ಮತ್ತು ಪತ್ರಕರ್ತರಾಗಿದ್ದ ದಿವಂಗತ ಪಿ.ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ಅವರ ನಿಧನದ ಸುದ್ದಿ ಕೇಳಿ ದು:ಖವಾಯಿತು. ಸಾಹಿತ್ಯ, ಮಾಧ್ಯಮ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ಲಂಕೇಶ್ ಅವರು ಮಾಡಿರುವ ಸಾಧನೆಯಲ್ಲಿ ಅವರಿಗೆ ಬೆಂಬಲವಾಗಿ ನಿಂತಿದ್ದ ಇಂದಿರಾ ಲಂಕೇಶ್ ಅವರ ಬಹುದೊಡ್ಡ ಕೊಡುಗೆ ಇದೆ ಎನ್ನುವುದು ನಿಸ್ಸಂಶಯ.  ಸ್ನೇಹವಲಯದಲ್ಲಿದ್ದ ನನಗೆ ಇಂದಿರಾ ಲಂಕೇಶ್ ಮತ್ತು ಅವರ ಮಕ್ಕಳು ಆತ್ಮೀಯರು. ಸ್ವತ: ಬರವಣಿಗೆಯನ್ನೂ ಮಾಡುತ್ತಿದ್ದ ಇಂದಿರಾ ಲಂಕೇಶ್, ಪುಸ್ತಕ ಪ್ರಕಟಣೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆಯಷ್ಟೆ ನಡೆದ ಗೌರಿ ಲಂಕೇಶ್ ಹತ್ಯೆಯ ನಂತರ ಆಘಾತಕ್ಕೀಡಾಗಿದ್ದ ಇಂದಿರಾ ಅವರು ಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಇಂದಿರಾ ಲಂಕೇಶ್ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ಎಕ್ಸ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. 

 

Related Posts

Leave a Reply

Your email address will not be published. Required fields are marked *