Menu

ಅಪರೂಪದ ವನ್ಯಜೀವಿಗಳ ಅಕ್ರಮ ಸಾಕಣೆ: ಬೆಂಗಳೂರಿನ ವೈದ್ಯ ಅರೆಸ್ಟ್‌

ಪರವಾನಗಿ ಇಲ್ಲದೆ ಅಕ್ರಮವಾಗಿ ವಿದೇಶಿ ಹಾಗೂ ಅತ್ಯಂತ ಅಪರೂಪದ ವನ್ಯಜೀವಿಗಳನ್ನು ಮನೆಯಲ್ಲಿಯೇ ಸಾಕಿದ್ದ ಬೆಂಗಳೂರಿನ ಜಯನಗರದ ವೈದ್ಯರೊಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಡಾ ರಾಜ್ ಕಮಲ್ ಬಂಧಿತ ವೈದ್ಯ, ಆತನ ಮನೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಅಪರೂಪದ ಪ್ರಾಣಿ ಮತ್ತು ಪಕ್ಷಿಗಳನ್ನು ರಕ್ಷಿಸಲಾಗಿದೆ. ವೈದ್ಯನೊಂದಿಗೆ ಇತರ ಆರು ಮಂದಿಯನ್ನು ಕೂಡ ಬಂಧಿಸಲಾಗಿದೆ.
ಬಂಧಿತ ವೈದ್ಯನ ತಂಡ ಇನ್‌ಸ್ಟಾಗ್ರಾಮ್‌ನ ‘@Zoo2You’ ಖಾತೆಯ ಮೂಲಕ ಮಕ್ಕಳ ಮುಂದೆ ಪ್ರಾಣಿಗಳ ಪ್ರದರ್ಶನ ದಂಧೆ ನಡೆಸುತ್ತಿತ್ತು. ಈ ಮೂಲಕ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಲಾಗಿದೆ.

ಖಚಿತ ಮಾಹಿತಿ ಅನ್ವಯ ಅರಣ್ಯ ಇಲಾಖೆಯ ಇಲಾಖೆಯ ಜಾಗೃತ ದಳ ಮತ್ತು ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳು ವೈದ್ಯನ ನಿವಾಸದ ಮೇಲೆ ಜಂಟಿ ದಾಳಿ ನಡೆಸಿದಾಗ ಮನೆಯ ಒಳಗೆ ಪ್ರತ್ಯೇಕ ಪಂಜರಗಳು ಮತ್ತು ವಿಶೇಷ ಕೃತಕ ವಾತಾವರಣ ನಿರ್ಮಿಸಿ ನಾನಾ ದೇಶಗಳ ಪ್ರಾಣಿಗಳನ್ನು ಸಾಕಿರುವುದು ಕಂಡು ಬಂದಿದೆ.

ಬಾಲ್ ಹೆಬ್ಬಾವುಗಳು, ಹಲ್ಲಿಗಳು, ಆಮೆಗಳು ಸೇರಿದಂತೆ ವನ್ಯಜೀವಿಗಳು, ವಿಮಾನ ನಿಲ್ದಾಣದ ಸಾಮಾನು ಟ್ಯಾಗ್‌ಗಳನ್ನು ಹೊಂದಿರುವ ಸೂಟ್‌ಕೇಸ್‌ಗಳು ಮತ್ತು ವನ್ಯಜೀವಿ ಕಳ್ಳಸಾಗಣೆಗೆ ಸಂಬಂಧಿಸಿದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಾಣಿಗಳನ್ನು ಅಕ್ರಮವಾಗಿ ತಂದು ಮಾರಾಟ ಮಾಡುವ ಜಾಲದೊಂದಿಗೆ ವೈದ್ಯನಿಗೆ ಸಂಪರ್ಕವಿತ್ತೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.

ವನ್ಯಜೀವಿ ಕಾಯ್ದೆ ಪ್ರಕಾರ, ವಿದೇಶಿ ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಅಥವಾ ಇಟ್ಟುಕೊಳ್ಳಲು ಕೇಂದ್ರ ಸರ್ಕಾರದ ‘ಪರಿವೇಶ್‌’ ಪೋರ್ಟಲ್‌ನಲ್ಲಿ  ನೋಂದಣಿ ಮಾಡಿಸಿರಬೇಕು. ಬಂಧಿತ ವೈದ್ಯನ ಬಳಿ ಯಾವುದೇ ಕಾನೂನುಬದ್ಧ ದಾಖಲೆಗಳು ಇಲ್ಲ. ಈ ಪ್ರಾಣಿಗಳನ್ನು ಕಸ್ಟಮ್ಸ್ ಇಲಾಖೆಗೆ ವಂಚಿಸಿ ದೇಶದೊಳಗೆ ಹೇಗೆ ತರಲಾಯಿತು ಮತ್ತು ಇದರ ಹಿಂದೆ ಇರುವ ಅಂತರರಾಷ್ಟ್ರೀಯ ಪ್ರಾಣಿ ಕಳ್ಳಸಾಗಣೆ ಜಾಲ ಯಾವುದು ಎಂಬುದರ ಕುರಿತು ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.

ಆರೋಪಿಗಳು ವಿದೇಶಿ ಸಾಕುಪ್ರಾಣಿ ವ್ಯಾಪಾರದ ಪ್ರಮುಖ ಕೇಂದ್ರಗಳಾದ ಥೈಲ್ಯಾಂಡ್ ಮತ್ತು ಮಲೇಷ್ಯಾ ಸೇರಿದಂತೆ ದೇಶಗಳಿಗೆ ಆಗಾಗ ಪ್ರಯಾಣಿಸುತ್ತಿದ್ದ ವಿಚಾರ ಬಯಲಾಗಿದೆ. ಶಾಲೆಗಳು, ಕಾಲೇಜುಗಳು, ಅಪಾರ್ಟ್ಮೆಂಟ್ ಸಂಕೀರ್ಣಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವನ್ಯಜೀವಿ ಶಿಕ್ಷಣ ಕಾರ್ಯಕ್ರಮಗಳನ್ನು ಉತ್ತೇಜಿಸುವ “@Zoo2You” ಎಂಬ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ ಬಗ್ಗೆಯೂ ತನಿಖೆ ನಡೆಯುತ್ತಿದೆ.

Related Posts

Leave a Reply

Your email address will not be published. Required fields are marked *