ರಾಯಚೂರು ಜಿಲ್ಲೆಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಕಳೆದ ಮೂರು ದಿನಗಳಿಂದ ಊಟ ಮತ್ತು ಕುಡಿಯುವ ನೀರಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದು, ಪ್ರತಿಭಟನೆ ಆರಂಭಿಸಿದ್ದಾರೆ.
ಹಸಿವಿನಿಂದ ಕಂಗೆಟ್ಟ ನೂರಾರು ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಗ್ರಾಮೀಣ ಭಾಗಗಳ ಬಡ ವಿದ್ಯಾರ್ಥಿಗಳು ಈ ಹಾಸ್ಟೆಲ್‌ನಲ್ಲಿದ್ದಾರೆ. ಮೂರು ದಿನಗಳಿಂದಒಂದು ಹೊತ್ತಿನ ಊಟವಾಗಲಿ ಅಥವಾ ಕುಡಿಯುವ ನೀರಾಗಲಿ ಸಿಕ್ಕಿಲ್ಲ. ವಿದ್ಯಾರ್ಥಿಗಳು ತಮ್ಮ ಕೈಲಿದ್ದ ಅಲ್ಪಸ್ವಲ್ಪ ಹಣದಲ್ಲೇ ಹೋಟೆಲ್‌ನಲ್ಲಿ ತಿಂದಿದ್ದಾರೆ. ಹಣ ಖಾಲಿಯಾದ ಮೇಲೆ ಮತ್ತೊಂದು ಹಾಸ್ಟೆಲ್‌ಗೆ ತೆರಳಿಅಲ್ಲಿನ ಮಕ್ಕಳ ಬಳಿ ಆಹಾರ ಕೇಳಿ ಪಡೆದು ತಿಂದಿದ್ದಾರೆ. ತೀವ್ರವಾದ ಬಿಸಿಲು ಲೆಕ್ಕಿಸದೆ ವಿದ್ಯಾರ್ಥಿಗಳು
ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಎದುರು ಧರಣಿ ಕುಳಿತು ಅನ್ನ ಕೊಡಿ, ನೀರು ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.
ಹಾಸ್ಟೆಲ್ ವಾರ್ಡನ್ ಮೆಹಬೂಬ್ ಎಂಬಾತ ವಿದ್ಯಾರ್ಥಿಗಳಿಗೆ ಫೋನ್ ಮಾಡಿ ಹಾಸ್ಟೆಲ್ ಆರಂಭವಾಗಿದೆ, ಬನ್ನಿ ಎಂದು ಕರೆಸಿಕೊಂಡಿದ್ದನು. ಮಕ್ಕಳು ಬಂದ ಮೇಲೆ ಕನಿಷ್ಠ ಸೌಲಭ್ಯವನ್ನೂ ನೀಡಿಲ್ಲ. ಮಲಗುವುದಕ್ಕೂ ಅವಕಾಶ ನೀಡದೆ ಹಾಸ್ಟೆಲ್ ಗೇಟ್ ಬಳಿ ಮಲಗುವಂತಾಗಿದೆ. ಸಮಸ್ಯೆ ಹೇಳಲು ಕರೆ ಮಾಡಿದರೆ ಯಾರೂ ಪ್ರತಿಕ್ರಿಯಿಸುತ್ತಿಲ್ಲ. ವಾರ್ಡನ್‌ಗೆ ಈಬಗ್ಗೆ ಪ್ರಶ್ನಿಸಿದರೆ ನೀವು ಯಾರಿಗೆ ಬೇಕಾದರೂ ದೂರು ಕೊಡಿ. ಡಿಸಿಗಾದರೂ ಹೇಳಿ, ಡಿಡಿಗಾದರೂ ಹೇಳಿ ಎಂದು ಉಡಾಫೆ ಮಾತುಗಳನ್ನಾಡಿದ್ದಾನೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳು ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಂತೆ ವಾರ್ಡನ್ ಮೆಹಬೂಬ್ ಸ್ಥಳಕ್ಕೆ ಬಂದಿದ್ದಾನೆ, ವಿದ್ಯಾರ್ಥಿಗಳು, ನಮಗೆ ಈ ವಾರ್ಡನ್ ಬೇಡ, ವರ್ಗಾವಣೆ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ.


