Menu

ಸಾಲ ವಾಪಸ್‌ ಬರದೆ ಸಂಕಷ್ಟ, ನ್ಯಾಯ ಕೇಳಿದ್ರೆ ಪೊಲೀಸರಿಂದ ಬೆದರಿಕೆ: ಡಿವೈಎಸ್‌ಪಿ, ಪಿಎಸ್‌ಐ ಹೆಸರು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

ಕೊಟ್ಟ ಸಾಲದ ಹಣ ವಾಪಸ್ ಬಾರದೆ ಸಂಕಷ್ಟ ಒಂದೆಡೆಯಾದರೆ, ಅತ್ತ ನ್ಯಾಯ ಕೇಳಲು ಹೋದಾಗ ಪೊಲೀಸರಿಂದಲೇ ಬೆದರಿಕೆ ಎದುರಿಸಿ ಮನನೊಂದ ವ್ಯಕ್ತಿಯೊಬ್ಬರು ಡೆತ್‌ನೋಟ್‌ನಲ್ಲಿ ಡಿವೈಎಸ್‌ಪಿ ಹಾಗೂ ಪಿಎಸ್‌ಐ ಹೆಸರನ್ನುಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ  ಗೋಕಾಕ್ ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ನಡೆದಿದೆ.

ಬೆಂಡಿಗೇರಿ ಗ್ರಾಮದ ನಿವಾಸಿ ರವೀಂದ್ರ ದಾನವ್ವಗೋಳ ಆತ್ಮಹತ್ಯೆ ಮಾಡಿಕೊಂಡವರು. ಈ ಸಾವು ಹಾಗೂ ಡೆತ್‌ನೋಟ್‌ನಲ್ಲಿರುವ ಅಂಶಗಳು ಜಿಲ್ಲೆಯಾದ್ಯಂತ  ಸಂಚಲನ ಮೂಡಿಸಿವೆ. ಮೃತ ರವೀಂದ್ರ ಗ್ರಾಮದ ಲಕ್ಷ್ಮಣ್ ಚಂದರಗಿ ಮತ್ತು ಭರಮಪ್ಪ‌ ಪೂಜಾರಿಗೆ ಒಟ್ಟು 8 ಲಕ್ಷ ರೂಪಾಯಿ ಸಾಲ ನೀಡಿದ್ದರು ಎನ್ನಲಾಗಿದೆ.  ದೀರ್ಘಕಾಲದ ಬಳಿಕವೂ ಆರೋಪಿಗಳು ಹಣ ವಾಪಸ್ ನೀಡಿರಲಿಲ್ಲ. ರವೀಂದ್ರ  ಹಣ ಕೇಳಿದಾಗ, ಆರೋಪಿಗಳು ಹಣ ಕೊಡುವುದನ್ನು ಬಿಟ್ಟು ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಆರೋಪಿಗಳಿಂದ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ರವೀಂದ್ರ  ನ್ಯಾಯ ಕೊಡಿಸುವಂತೆ ಮೂಡಲಗಿ ವಲಯದ ಅಂದಿನ ಡಿವೈಎಸ್‌ಪಿ ಮುಲ್ಲಾ ಹಾಗೂ ಪಿಎಸ್‌ಐ ಆನಂದ್ ಅವರಿಗೆ ಮನವಿ ಮಾಡಿದ್ದರು. ಆದರೆ ಪೊಲೀಸರು  ರವೀಂದ್ರ ಅವರನ್ನೇ ಹೆದರಿಸಿದ್ದರು ಎಂದು ಮೃತರು ಆತ್ಮಹತ್ಯೆಗೂ ಮೊದಲು  ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿಗಳ ವಂಚನೆ ಹಾಗೂ ಪೊಲೀಸರ ಅನ್ಯಾಯದಿಂದ ನೊಂದು ರವೀಂದ್ರ  ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಮೂಡಲಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಮೃತ ರವೀಂದ್ರ ಅವರ ಪತ್ನಿ ನೀಡಿದ ದೂರಿನನ್ವಯ ಹಣ ಪಡೆದ ಇಬ್ಬರು ಮುಖ್ಯ ಆರೋಪಿಗಳು ಸೇರಿದಂತೆ ಒಟ್ಟು 8 ಜನರ ವಿರುದ್ಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಈ ಕಾರ್ಯವೈಖರಿಯಿಂದ ನಡೆದ ಈ ದುರಂತಕ್ಕೆ  ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಡೆತ್‌ನೋಟ್‌ನಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳ ಹೆಸರೇ ಇರುವುದರಿಂದ, ಸ್ಥಳೀಯ ಪೊಲೀಸರು ಇದನ್ನು ಮುಚ್ಚಿಹಾಕುವ ಸಾಧ್ಯತೆಯಿದೆ.  ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು  ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Related Posts

Leave a Reply

Your email address will not be published. Required fields are marked *