ರಾಜ್ಯದಲ್ಲಿ ಇತ್ತೀಚೆಗೆ ನಡೆದ ಅಲ್ಪಸಂಖ್ಯಾತರ ಸಭೆಯಲ್ಲಿ ಪ್ರತ್ಯೇಕ ಬಜೆಟ್ ಮಂಡಿಸಬೇಕೆಂಬ ಬೇಡಿಕೆ ಕೇಳಿ ಬಂದಿದೆ. ಇದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಬಜೆಟ್ನಲ್ಲಿ ವಿಶೇಷ ಅನುದಾನವನ್ನು ಮಾತ್ರ ಘೋಷಿಸಬಹುದು. ದಾವಣಗೆರೆ ಉಪ ಚುನಾವಣೆ ನಡೆದ ಮೇಲೆ ಮುಸ್ಲಿಮರು ತಮ್ಮ ಹಕ್ಕಿಗೆ ಹೋರಾಟ ಹಾದಿ ಹಿಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.
ಪ್ರತಿ ಸಮುದಾಯಕ್ಕೂ ತನ್ನ ಜನಸಂಖ್ಯೆಗೆ ಅನುಗುಣವಾಗಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನ ಕೇಳುವುದು ತಪ್ಪೇನಲ್ಲ. ಆದರೆ ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ತಮ್ಮ ಧಾರ್ಮಿಕ ಕ್ರಮಗಳನ್ನು ಮುಂದುವರಿಸಲು ಹಾಗೂ ತಮ್ಮದೇ ಶೈಕ್ಷಣಿಕ ಸಂಸ್ಥೆ ನಡೆಸಲು ಅವಕಾಶವಿದೆಯೇ ಹೊರತು ಉಳಿದ ಯಾವ ಹಕ್ಕೂ ನಮೂದಾಗಿಲ್ಲ. ಉದ್ಯೋಗ ಮತ್ತು ಶಿಕ್ಷಣದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಇರುವುದು ನಿಜ. ಆದರೆ ಅವರು ಹಿಂದುಳಿದ ವರ್ಗಗಳ ಮೀಸಲಾತಿಯನ್ನೂ ಕೇಳುವುದು ಸರಿಯಲ್ಲ. ಕೇಂದ್ರ ಸರ್ಕಾರ ಹಿಂದೂ ಧರ್ಮದಲ್ಲದವರಿಗೆ ಇರುವ ಇತಿಮಿತಿಯನ್ನು ಈಗಾಗಲೇ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್ ಕೂಡ ಇದನ್ನು ಎತ್ತಿಹಿಡಿದಿದೆ. ದಲಿತರಿಗೆ ಮೀಸಲಾತಿ ನೀಡಲು ಸಂವಿಧಾನದಲ್ಲೇ ನಮೂದಿಸಲಾಗಿದೆ.
ಅಲ್ಪಸಂಖ್ಯಾತರಿಗೆ ಈ ರೀತಿ ಹಕ್ಕು ನೀಡಿಲ್ಲ. ಪೌರತ್ವ ಕಾಯ್ದೆ ಕೂಡ ಇದನ್ನೇ ಹೇಳುತ್ತದೆ. ಇವೆಲ್ಲಕ್ಕೂ ಪ್ರಮುಖ ಕಾರಣ ಅಲ್ಪಸಂಖ್ಯಾತರು ತಮಗೆ ನೀಡಿರುವ ಸವಲತ್ತು ಬಳಸಿಕೊಂಡು ಮುಖ್ಯವಾಹಿನಿಗೆ ಬಾರದೇ ಇರುವುದು. ಮುಖ್ಯವಾಹಿನಿಗೆ ಬಂದಲ್ಲಿ ಯಾವ ಸಮಸ್ಯೆಯೂ ಇರುವುದಿಲ್ಲ. ಅಬ್ದುಲ್ ಕಲಾಂ ಮುಖ್ಯವಾಹಿನಿಗೆ ಬಂದಿದ್ದರಿಂದಲೇ ಅವರಿಗೆ ಅಲ್ಪಸಂಖ್ಯಾತರ ಸಮಸ್ಯೆ ಕಾಡಲಿಲ್ಲ.ಇದೇರೀತಿ ಹಲವು ನಾಯಕರು ಬಾಳಿ ಬದುಕಿದರು. ಒಟ್ಟಾರೆ ಜನರ ವಿಶ್ವಾಸಗಳಿಸುವುದು ಬಹಳ ಮುಖ್ಯ. ಈ ಕೆಲಸವನ್ನು ಆಯಾ ಸಮುದಾಯದ ನಾಯಕರು ಮಾಡಬೇಕು. ಅದನ್ನು ಬಿಟ್ಟು ಕೇವಲ ಜನಸಂಖ್ಯೆ ಆಧಾರದ ಮೇಲೆ ಹಕ್ಕು ಚಲಾಯಿಸಲು ಹೋದರೆ ಉಳಿದ ಸಮುದಾಯದವರು ಇವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಎಲ್ಲಿ ಸಾಮರಸ್ಯ ಇದೆಯೋ ಅಲ್ಲಿ ಈ ಸಮಸ್ಯೆ ಬರುವುದಿಲ್ಲ. ರಾಜಕೀಯ ಸ್ಥಾನಮಾನ ಕೊಡುವುದು ಆಯಾ ರಾಜಕೀಯ ಪಕ್ಷಗಳಿಗೆ ಸೇರಿದ್ದು. ದಲಿತರಿಗೆ ಪ್ರತ್ಯೇಕ ಕ್ಷೇತ್ರಗಳಿವೆ. ಆ ರೀತಿ ಅಲ್ಪಸಂಖ್ಯಾತರಿಗೆ ನಮ್ಮ ಪೂರ್ವಜರು ಕ್ಷೇತ್ರ ಸೃಷ್ಟಿಸಲು ಒಪ್ಪಲಿಲ್ಲ. ಆಗಲೂ ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಪಾಕಿಸ್ತಾನ ಸೃಷ್ಟಿಯಾದ್ದರಿಂದ ಇಲ್ಲಿ ಅವರಿಗೆ ಪ್ರತ್ಯೇಕ ಕ್ಷೇತ್ರ ಕೊಡಲು ಎಲ್ಲ ಸಮುದಾಯದ ನಾಯಕರು ಒಪ್ಪಲಿಲ್ಲ. ಈಗಲೂ ಅಲ್ಪಸಂಖ್ಯಾತರು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಬಹುದು. ಅದಕ್ಕೆ ಎಲ್ಲ ಸಮುದಾಯಗಳ ವಿಶ್ವಾಸಗಳಿಸುವುದು ಬಹಳ ಮುಖ್ಯ.
ಅಬ್ದುಲ್ ಕಲಾಂ ನೇರವಾಗಿ ರಾಷ್ಟ್ರಪತಿಯಾದವರು. ಅವರು ಯಾರನ್ನೂ ಹೋಗಿ ಮತ ಕೇಳಿದವರಲ್ಲ. ಜನ ಅವರನ್ನು ತಮ್ಮವರು ಎಂದು ಪರಿಗಣಿಸಿದರು. ಕೊನೆಯವರೆಗೂ ಅಬ್ದುಲ್ ಕಲಾಂ ಅಪ್ಪಟ ಭಾರತೀಯನಾಗಿ ಎಲ್ಲ ಜನಮಾನಸದಲ್ಲಿ ಉಳಿದರು. ಅವರು ಈಗಿರುವ ಅಲ್ಪಸಂಖ್ಯಾತರಿಗೆ ಆದರ್ಶವಾಗಬೇಕು. ಅವರ ಜೀವನ ಎಲ್ಲರಿಗೂ ಪ್ರೇರಣೆ ನೀಡಬೇಕು. ಅಬ್ದುಲ್ ನಜೀರ್ ಸಾಬ್ ಕೂಡ ಕರ್ನಾಟಕದಲ್ಲಿ ಜನಾನುರಾಗಿ. ಅವರನ್ನು ಇತರ ಸಮುದಾಯದವರು ನೀರ್ ಸಾಬ್ ಎಂದೇ ಕರೆದರು. ಅವರ ಸ್ನೇಹಿತರು ಇತರ ಕೋಮಿನವರೇ ಹೆಚ್ಚು ಎಂಬುದು ಗಮನಾರ್ಹ. ಜನರ ಪ್ರೀತಿಯ ಮುಂದೆ ಯಾವ ಬೇಧಭಾವಗಳು ನಿಲ್ಲುವುದಿಲ್ಲ.
ಸಂವಿಧಾನದಲ್ಲಿ ನೀಡಿರುವ ಸವಲತ್ತುಗಳು ಈಜುಕೊಳದಲ್ಲಿ ಚಿಮ್ಮುವ ಹಲಗೆ ಇದ್ದಂತೆ. ಅದರಿಂದ ಜಿಗಿದ ಮೇಲೆ ನೀರಿನಲ್ಲಿ ಎಲ್ಲರ ಹಾಗೆ ಈಜಬೇಕು. ಈಜಿ ಜೈಸಬೇಕು. ಅದರಲ್ಲೂ ಮೀಸಲಾತಿ ಕೇಳಲು ಬರುವುದಿಲ್ಲ. ಸರ್ಕಾರಿ ಸವಲತ್ತು ಎಲ್ಲ ವಂಚಿತ ಸಮುದಾಯಗಳಿಗೆ ಚಿಮ್ಮುವ ಹಲಗೆ ಇದ್ದಂತೆ. ಅದು ಶಾಶ್ವತವಾಗಿ ಇರುವುದಿಲ್ಲ. ರಾಜಕೀಯದಲ್ಲಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು ಮುಖ್ಯವಾಹಿನಿಗೆ ಬಂದಿದ್ದರಿಂದಲೇ ಅವರನ್ನು ಜನ ನಾಯಕರಾಗಿ ಸ್ವೀಕರಿಸಿದರು. ಇದು ಎಲ್ಲ ಕಡೆ ಅನ್ವಯಿಸುವ ಮಾತು. ಅಲ್ಪಸಂಖ್ಯಾತರು ಸಂಘಟಿತರಾಗುವುದು ತಪ್ಪಲ್ಲ. ಆದರೆ ಅದರ ಮೂಲ ಉದ್ದೇಶ ಮುಖ್ಯವಾಹಿನಿಯಲ್ಲಿ ಸೇರುವುದಾಗಿರಬೇಕು. ಪ್ರತ್ಯೇಕತೆ ಪರಿಹಾರವಲ್ಲ.


