Menu

ಎಸಿ ಆನ್‌ ಮಾಡಿ ವಿಂಡೋ, ಡೋರ್‌ ಮುಚ್ಚಿ ಕಾರಿನಲ್ಲಿ ಮಲಗಿದ್ದ ಚಾಲಕ ಸಾವು

ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಗೆದರಹಳ್ಳಿ ಬಳಿ ಕಾರಿನ ಗ್ಲಾಸ್ ಏರಿಸಿ ಎಸಿ ಆನ್ ಮಾಡಿ ಮಲಗಿದ್ದ ಖಾಸಗಿ ಕಂಪನಿಯ ಕ್ಯಾಬ್ ಚಾಲಕರೊಬ್ಬರು ಕಾರಿನೊಳಗೆ ಮೃತಪಟ್ಟಿದ್ದಾರೆ.

ಟಿ ದಾಸರಹಳ್ಳಿ ನಿವಾಸಿ ಸುನಿತ ಹೆಚ್.ಬಿ. (38) ಹೀಗೆ ದಾರುಣವಾಗಿ ಮೃತಪಟ್ಟವರು. ಖಾಸಗಿ ಕಂಪನಿಯೊಂದರಲ್ಲಿ ಕ್ಯಾಬ್ ಚಾಲಕರಾಗಿ ಲಸ ಮಾಡುತ್ತಿದ್ದ ಸುನಿತ ಸೋಮವಾರ ಬೆಳಿಗ್ಗೆ 10 ಗಂಟೆಗೆ ನೆಲಗೆದರಹಳ್ಳಿ ರಸ್ತೆ ಪಕ್ಕದಲ್ಲಿ ಕಾರನ್ನು ಪಾರ್ಕ್ ಮಾಡಿದ್ದರು. ವೆದರ್ ಬಿಸಿಯಾಗಿದ್ದರಿಂದ ಕಾರಿನ ಎಲ್ಲಾ ಕಿಟಕಿ ಗಾಜುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಎಸಿ ಆನ್ ಮಾಡಿಕೊಂಡು ಸೀಟಿನಲ್ಲೇ ಮಲಗಿದ್ದರು.

ಮಧ್ಯಾಹ್ನ 12 ಗಂಟೆಯಾದರೂ ಕಾರು ಅದೇ ಜಾಗದಲ್ಲಿ ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ಕಾರಿನ ಬಳಿ ತೆರಳಿ ಪರಿಶೀಲಿಸಿದ್ದಾರೆ. ಕಾರಿನ ಒಳಗೆ ಚಾಲಕ ಮಲಗಿರುವುದನ್ನು ಕಂಡು ಸ್ಥಳೀಯರು ಎಷ್ಟು ಬಾರಿ ಕಾರಿನ ಗಾಜು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅಲ್ಲಿದ್ದವರು ಕಲ್ಲಿನಿಂದ ಕಾರಿನ ಕಿಟಕಿ ಗಾಜನ್ನು ಒಡೆದು ತೆರೆದಿದ್ದಾರೆ. ಆಗ ಚಾಲಕ ಸುನಿತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.

ಸ್ಥಳೀಯರು ಮತ್ತು ಪೊಲೀಸರು ಸಮೀಪದ ಆಸ್ಪತ್ರೆಗೆ ಕರೆದಯ್ದಿದ್ದಾರೆ. ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು  ತಿಳಿಸಿದ್ದಾರೆ. ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೀಣ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

ನಿಲುಗಡೆ ಮಾಡಿರುವ ಕಾರಿನಲ್ಲಿ ಗ್ಲಾಸ್ ಸಂಪೂರ್ಣ ಮುಚ್ಚಿ ಎಸಿ ಹಾಕಿಕೊಂಡು ಮಲಗುವುದು ಅಪಾಯಕಾರಿ.ಎಂಜಿನ್‌ನಿಂದ ಹೊರಬರುವ ಕಾರ್ಬನ್ ಮಾನಾಕ್ಸೈಡ್ ವಿಷಾನಿಲ ಕಾರಿನೊಳಗೆ ಆವರಿಸುತ್ತದೆ. ಆಮ್ಲಜನಕದ ಕೊರತೆಯಾಗಿ ಮನುಷ್ಯ ಪ್ರಜ್ಞೆ ತಪ್ಪಿ, ಉಸಿರುಗಟ್ಟಿ ಸಾಯುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Related Posts

Leave a Reply

Your email address will not be published. Required fields are marked *