ಅಕ್ರಮಗಳನ್ನು ಒಪ್ಪಲು ನೀಟ್ ಆಡಳಿತ ವರ್ಗ ಸಿದ್ದವಿಲ್ಲ . ಈ ವಿಷಯ ದೇಶದ ಸಂಸತ್ತಿನಲ್ಲಿ ಚರ್ಚೆಯಾದರೂ ಕೇಂದ್ರ ಸರ್ಕಾರದಿಂದ ಇದುವರೆಗೂ ಸಮಂಜಸ ಉತ್ತರಗಳು ದೊರೆತಿಲ್ಲ. ಇದುವರೆಗೆ ಆಗಿರುವ ತಪ್ಪುಗಳನ್ನು ಸರಿಪಡಿಸಲು ಮುಂದಾಗದೆ ತನ್ನನ್ನು ತಾನು ಸಮರ್ಥಿಸಿಕೊಂಡರೇ ಕೊನೆಗೆ ಈ ದೇಶದ ಸರ್ವೋನ್ನತ ನ್ಯಾಯಾಲಯವೇ ವಿದ್ಯಾರ್ಥಿ- ಪೋಷಕರ ಹಿತದೃಷ್ಟಿಯಿಂದ ಮಧ್ಯಪ್ರವೇಶಿಸಿ ಭ್ರಷ್ಟರು ಮತ್ತು ವಂಚಕರಿಗೆ ಚಾಟಿ ಬೀಸಬೇಕಾದೀತು.
ಲಕ್ಷಾಂತರ ಮಂದಿ ವಿದ್ಯಾರ್ಥಿಗಳ ವೈದ್ಯರಾಗುವ ಕನಸುಗಳಿಗೆ ಈಗ ನೀಟ್ ಎಂಬ ಭೂತ ಕಾಡಿರುವುದು ದುರದೃಷ್ಟಕರ. ಪ್ರಸಕ್ತ ದೇಶದಲ್ಲಿ ಜಾರಿಯಲ್ಲಿರುವ ನೀಟ್ ಪ್ರವೇಶ ಪರೀಕ್ಷೆಯ ಅವ್ಯವಸ್ಥೆ ನೋಡಿದಾಗ ರಾಷ್ಟ್ರೀಯ ಮಟ್ಟದಲ್ಲಿ ನಾವೇಕೆ ಪರಿಣಾಮಕಾರಿ ಪದ್ದತಿಯನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂಬ ಗಂಭೀರ ಪ್ರಶ್ನೆ ತಲೆದೋರುತ್ತೆ. ಒಟ್ಟಿನಲ್ಲಿ ನೀಟ್ ಇಂದು ದಿಕ್ಕೆಟ್ಟಿದೆ!
ಪ್ರಶ್ನೆ ಪತ್ರಿಕೆ ಸೋರುವಿಕೆ ಎಂಬುದು ಇಂದು ವಿವಿಗಳು ಮತ್ತು ಶಾಲೆ, ಕಾಲೇಜುಗಳ ಮಟ್ಟದಲ್ಲಿ ಒಂದು ಮಹಾಪಿಡುಗು ಆಗಿ ಪರಿಣಮಿಸಿದೆ. ಆದರೆ ಇದೊಂದು ಅಪಾಯಕಾರಿ ವಿದ್ಯಮಾನ ಎಂಬುದನ್ನು ತಿಳಿದೂ ಸುಮ್ಮನಿರುವ ವ್ಯ್ಕಕ್ತಿಗಳಿಗೆ ಏನನ್ನಬೇಕು. ಓರ್ವ ಉತ್ತಮ ವೈದ್ಯನು ಈ ದೇಶದಲ್ಲಿ ರೂಪುಗೊಳ್ಳಬೇಕಾದರೆ, ಇದಕ್ಕೆ ಸಂಬಂಧಿಸಿದ ಮಾನದಂಡಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಸರ್ಕಾರಕ್ಕೆ ಸಾಧ್ಯವಾಗಬೇಕಲ್ಲವೇ? ನೀಟ್ ಪರೀಕ್ಷೆ ನ್ಯಾಷನಲ್ ಮಟ್ಟದಲ್ಲಿ ನಿರ್ವಹಿಸಬೇಕೆ , ಬೇಡವೇ ಎಂಬುದು ಈಗಲೂ ದೇಶದ ಕೆಲವು ಕಡೆ ಮುಂದುವರಿದಿರುವ ಗಂಭೀರ ಚರ್ಚೆ.
ಇದು ದೇಶದ ಸರಾಸರಿ ವಿದ್ಯಾರ್ಥಿಗಳ ಪಾಲಿಗೆ ಒಂದು ಉಕ್ಕಿನ ಕಡಲೆಯಂತಹ ಪರೀಕ್ಷೆ ! ಇದರಲ್ಲಿ ಅನುಮಾನವಿಲ್ಲ. ಹಾಗಾದರೆ ಈ ದೇಶದ ಓವ ಕೂಲಿ, ಕಾರ್ಮಿಕನ ಮಗ ಅಥವಾ ಮಗಳು ದೇಶದ ಓರ್ವ ಉತ್ತಮ ವೈದ್ಯನಾಗುವ ಕನಸನ್ನು ತಮ್ಮ ಮನಸಿನಿಂದ ಭಗ್ನಗೊಳಿಸಬೇಕೇ ? ಈ ನೀಟ್ ಜಾರಿಗೊಳ್ಳುವ ಮುನ್ನ ನಮ್ಮ ಈ ರಾಜ್ಯದಲ್ಲಿ ಪ್ರವೇಶ ಪರೀಕ್ಷೆಗಳು ಇರಲಿಲ್ಲವೇ ? ಹೇಳಬೇಕೆಂದರೆ ಕರ್ನಾಟಕವು ೧೯೯೨- ೯೩ರಿಂದಲೂ ವೈದ್ಯ, ದಂತ ವೈದ್ಯ ಮತ್ತು ಇಂಜನಿಯರಿಂಗ್ ಕ್ಷೇತ್ರದ ವಿದ್ಯಾರ್ಥಿಗಳಿಗೆಂದು ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ ದೇಶದಲ್ಲಿಯೇ ಅತಿ ಪಾರದರ್ಶಕ ಪ್ರವೇಶ ಪರೀಕ್ಷೆ ಎಂಬುದು ಸಾಬೀತಾಗಿರುವುದು ಸ್ಪಷ್ಟ. ದುರಂತ ಎಂದರೆ ಈ ವ್ಯವಸ್ಥೆಯು ಇಂದು ರಾಜ್ಯದಲ್ಲಿ ಬಲಗೊಳ್ಳದಿರುವುದು ಕಳವಳಕಾರಿ. ಮೂವತ್ತು ವರ್ಷಗಳ ಹಿಂದೆ ದೇಶದ ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ಬಗೆಯ ಪ್ರವೇಶ ಪರೀಕ್ಷೆ ಇರಬೇಕೆಂದು ಅಪೇಕ್ಷಿಸಿದ್ದು ನಿಜ. ಆದರೆ ಸುಪ್ರೀಂಕೋರ್ಟ್ ತೀರ್ಪಿನ ಆಶಯದಂತೆ ಕಾಮನ್ ಎಂಟ್ರೆನ್ಸ್ ಟೆಸ್ಟ್ ರೂಪುಗೊಂಡಿದ್ದರೂ ಇದು ದೇಶದ ಎಲ್ಲ ಜನತೆಗೆ ಒಪ್ಪುವ ಹಾಗೆ ತಿದ್ದಲು ಸರ್ಕಾರಗಳ ಕೈಯಲ್ಲಿ ಇದುವರೆಗೂ ಸಾಧ್ಯವಾಗಿಲ್ಲ.
ಕಳೆದ ಎರಡು ವರ್ಷಗಳ ಹಿಂದೆ ಕೂಡಾ ನೀಟ್ ಪರೀಕ್ಷೆಯ ಅವಾಂತರಗಳಿಗೆ ದೇಶದ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಪರಿತಪಿಸಿದರು. ಅಕ್ರಮಗಳನ್ನು ಒಪ್ಪಲು ನೀಟ್ ಆಡಳಿತ ವರ್ಗ ಸಿದ್ದವಿಲ್ಲ . ಈ ವಿಷಯ ದೇಶದ ಸಂಸತ್ತಿನಲ್ಲಿ ಚರ್ಚೆಯಾದರೂ ಕೇಂದ್ರ ಸರ್ಕಾರದಿಂದ ಇದುವರೆಗೂ ಸಮಂಜಸ ಉತ್ತರಗಳನ್ನು ನೀಡಲು ಸಾಧ್ಯವಾಗಿಲ್ಲ. ಆದ ತಪ್ಪುಗಳನ್ನು ಸರಿಪಡಿಸದೆ ತಮ್ಮನ್ನು ತಾವು ಸಮರ್ಥಿಸಿಕೊಂಡರೇ ಕೊನೆಗೆ ಈ ವಿಷಯದಲ್ಲಿ ದೇಶದ ಸರ್ವೋನ್ನತ ನ್ಯಾಯಾಲಯವೇ ವಿದ್ಯಾರ್ಥಿ- ಪೋಷಕರ ಹಿತದೃಷ್ಟಿಯಿಂದ ಮಧ್ಯಪ್ರವೇಶಿಸಿ ಭ್ರಷ್ಟರು ಮತ್ತು ವಂಚಕರಿಗೆ ಚಾಟಿ ಬೀಸಬೇಕಾದೀತು.


