ಹರಿಹರ ಪಂಚಮಸಾಲಿ ಪೀಠದಲ್ಲಿ ವಚನಾನಂದ ಸ್ವಾಮೀಜಿ ಮತ್ತು ಬೆಂಬಲಿಗರು ಹಾಗೂ ಟ್ರಸ್ಟಿಗಳ ನಡುವಿನ ಗಲಾಟೆ ತೀವ್ರಗೊಳ್ಳುತ್ತಿದೆ. ಈ ಹಿನ್ನೆಲೆ ಮಠದಲ್ಲಿ ಸಭೆ, ಸಮಾರಂಭ ಮಾಡದಂತೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ.
ಮಠದಲ್ಲಿ ಮಾ.10 ರಿಂದ ಎರಡು ಕಡೆ ಬೆಂಬಲಿಗರಿಂದ ಸಭೆ, ಸಮಾರಂಭ, ಸುದ್ದಿಗೋಷ್ಠಿಗಳು ನಡೆಯುತ್ತಿವೆ. ಗಲಾಟೆಗಳು ನಡೆಯುತ್ತಿದ್ದು, ಪ್ರಚೋದನಕಾರಿ ಹೇಳಿಕೆಗಳು ಬರುತ್ತಿವೆ. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ, ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಪೊಲೀಸ್ ಇಲಾಖೆ ಯಾವಾಗಲೂ ಭದ್ರತೆ ಒದಗಿಸಲಾಗುವುದಿಲ್ಲ. ಅದ್ದರಿಂದ ಪಂಚಮಸಾಲಿ ಪೀಠದಲ್ಲಿ ಯಾವುದೇ ಸಭೆ, ಸಮಾರಂಭ, ಪತ್ರಿಕಾ ಗೋಷ್ಠಿ ನಡೆಸುವಂತಿಲ್ಲ. ಈ ಬಗ್ಗೆ ಸ್ವಾಮೀಜಿಗೆ, ಟ್ರಸ್ಟಿಗಳಿಗೆ ಹಾಗೂ ಅವರ ಬೆಂಬಲಿಗರಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೋಟಿಸ್ ಜಾರಿಗೊಳಿಸಿ ಮೇ 1 ರಿಂದ 30 ರವರಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮೇ 5ರಂದು ಮಂಗಳವಾರ ಟ್ರಸ್ಟಿಗಳ ವಿರುದ್ಧ ಸ್ವಾಮೀಜಿ ಬೆಂಬಲಿಗರು ಲೆಕ್ಕಕೊಡಿ ಅಭಿಯಾನ ಹಮ್ಮಿಕೊಂಡಿದ್ದರು. ಏ.27 ರಂದು ಟ್ರಸ್ಟಿಗಳು ಸುಳ್ಳು ಲೆಕ್ಕ ನೀಡಿದ್ದಾರೆ. ಪಾರದರ್ಶಕ ಲೆಕ್ಕ ಮಂಡನೆ ಮಾಡಬೇಕು ಎಂದು ಆಗ್ರಹಿಸಲು ಯೋಜನೆ ರೂಪಿಸಿದ್ದರು. ಹಳ್ಳಿ ಹಳ್ಳಿಗೂ ತೆರಳಿ ಭಕ್ತರು ನೀಡಿದ ಕಾಣಿಕೆ ಬಗ್ಗೆ ಪಟ್ಟಿ ಮಾಡಲು ಸ್ವಾಮೀಜಿ ಬೆಂಬಲಿಗರು ಮುಂದಾಗಿದ್ದಾರೆ. ನಿಷೇಧಾಜ್ಞೆ ನಡುವೆಯೂ ಸಭೆ ನಡೆಸಲು ಬೆಂಬಲಿಗರು ಯತ್ನಿಸಿದ್ದಾರೆ.
ಪಂಚಮಸಾಲಿ ಮಠದಲ್ಲಿ ಶಾಂತಿ ಕದಡದಂತೆ ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸ್ಥಿತಿ ಶಾಂತಿಯುತವಾಗುವವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


