ಪ್ಯಾಲಿಯೇಟಿವ್ ಕೇರ್ ಕೇಂದ್ರವನ್ನು ರಾಜ್ಯಾದ್ಯಂತ ಪ್ರಾರಂಭಿಸುವ ಗುರಿಯಿದೆ, ಈಗಾಗಲೇ ಬೆಂಗಳೂರಿನಲ್ಲಿ ನಾಲ್ಕೈದು ಕಡೆ ಪ್ರಾರಂಭಿಸಲಾಗಿದೆ. ಈ ಯುನಿಟ್ ನಲ್ಲಿ ತಜ್ಞರ ತಂಡದಿಂದ ಹೊರರೋಗಿ ವಿಭಾಗ, ಡೇ ಕೇರ್ ವಿಭಾಗ, ಸುಸಜ್ಜಿತ ಒಳ ರೋಗಿ ವಿಭಾಗ ಮತ್ತು ಆಸ್ಪತ್ರೆಯಿಂದ 5-8 ಕಿಲೋ ವ್ಯಾಪ್ತಿಯಲ್ಲಿ ಮನೆಗೆ ತೆರಳಿ ಆರೈಕೆ ಮಾಡುವ ಮತ್ತು ಆರೈಕೆಗೆ ಪೂರಕ ತರಬೇತಿ ನೀಡುವ ಮೊಬೈಲ್ ಯುನಿಟ್ ಇರಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಾನವೀಯತೆ ದೃಷ್ಟಿಯಿಂದ ಈ ಸೇವೆ ನೀಡಲಾಗುತ್ತಿದ್ದು ಸರ್ವಜನಿಕರು ಇದರ ಉಪಯೋಗ ಪಡೆಯಬೇಕು ಎಂದು ಸಚಿವರು ತಿಳಿಸಿದರು. ಬೆಂಗಳೂರಿನ ಮಲ್ಲೇಶ್ವರಂ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಸರನಂ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಪ್ಯಾಲಿಯೇಟಿವ್ ಕೇರ್ ಯುನಿಟ್ ಅನ್ನು ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.
ಪ್ಯಾಲಿಯೇಟಿವ್ ಕೇರ್ ಕೇಂದ್ರದಲ್ಲಿ ಚಿಕಿತ್ಸೆ ನೀಡುವುದಿಲ್ಲ. ರೋಗಿಗಳು ಚಿಕಿತ್ಸೆಗೆ ಸ್ಪಂದಿಸದೆ ಇರುವ ಹಂತದಲ್ಲಿ, ಅಸಾಧಾರಣ ನೋವು, ಮಾನಸಿಕ ಒತ್ತಡದಿಂದ ಬಳಲುವ ರೋಗಿಗಳ ಮತ್ತು ಅಂತಹ ರೋಗಿಗಳ ಆರೈಕೆ ಮಾಡುತ್ತಿರುವ ಕುಟುಂಬ ವರ್ಗದವರಿಗೆ ಇದು ವರದಾನವಾಗಲಿದೆ ಎಂದರು.
ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ರಾಥಮಿಕವಾಗಿ ಐದು ಬೆಡ್‌ಗಳ ಒಂದು ವಾರ್ಡ್ ನಿರ್ಮಾಣ ಮಾಡಲಾಗಿದೆ. ಮಾರಣಾಂತಿಕ ಅಥವಾ ತೀವ್ರವಾದ ಕಾಯಿಲೆಗಳಿಂದ ಬಳಲುತ್ತ ಅಂತಿಮ ಹಂತದಲ್ಲಿರುವ ರೋಗಿಗಳಿಗೆ ವಿಶೇಷ ಯೂನಿಟ್ ಆಗಿದೆ. ಕ್ಯಾನ್ಸರ್, ಕಿಡ್ನಿ ವೈಫಲ್ಯ ಸೇರಿದಂತೆ ಇತರ ರೋಗಿಗಳ ಆರೈಕೆಗೆ ಈ ವಾರ್ಡ್ ಸಹಕಾರಿ ಆಗಲಿದೆ ಎಂದು ತಿಳಿಸಿದರು.


