ರಾಜ್ಯದ ಕೆಲವೆಡೆ ಕೆರೆ, ಕುಂಟೆಗಳಲ್ಲಿ ನೀರು ಲಭ್ಯವಿದ್ದು, ಈ ಬೇಸಿಗೆಯ ಸಂಕಷ್ಟ ಕಾಲದಲ್ಲಿ ಜನತೆಗೆ ಸಮರ್ಪಕವಾಗಿ ವಿತರಿಸುವ ಬಗ್ಗೆ ಅಧಿಕಾರವರ್ಗ ಮುತುವರ್ಜಿ ವಹಿಸಬೇಕಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಈ ದಿಶೆಯಲ್ಲಿ ಪರ್ಯಟನೆ ನಡೆಸಿದಲ್ಲಿ ಈ ಕಡು ಬೇಸಿಗೆಯಲ್ಲಿ ಜನತೆಗೆ ಉಂಟಾಗಿರುವ ಬವಣೆ ಮತ್ತು ಸಂಕಷ್ಟ ಏನೆಂಬುದು ಅರಿವಾದೀತು.
ರಾಜ್ಯದ ಎಲ್ಲ ಕಡೆ ಉರಿ ಬಿಸಿಲು ! ಕೆಂಡದ ಬಿಸಿ ಗಾಳಿ. ಹವಾ ನಿಯಂತ್ರಣ ನಗರಿಯಾದ ಬೆಂಗಳೂರಿನಲ್ಲಿ ಈಗ ಮಿತಿ ಮೀರಿದ ಧಗೆ ! ಬಿಸಿಲರಾಯನ ಪ್ರತಾಪಕ್ಕೆ ಜನ- ಜಾನುವಾರು ತತ್ತರ. ಕಿತ್ತೂರು, ಕಲ್ಯಾಣ ಕರ್ನಾಟಕವಲ್ಲದೆ ಮಧ್ಯ ಕರ್ನಾಟಕ, ಹಳೇ ಮೈಸೂರು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೂಡಾ ದಿನೇ ದಿನೇ ಹೆಚ್ಚಾದ ಬಿಸಿಲಿನ ತಾಪಮಾನ. ಹವಾಮಾನ ಇಲಾಖೆ ಪ್ರಕಾರ, ಮುಂದಿನ ಮೇ ತಿಂಗಳಿನಲ್ಲಿ ಇನ್ನೂ ವಾತಾವರಣದಲ್ಲಿ ಏರು ಪೇರು ಮತ್ತು ಅಧಿಕ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ. ನಾಡಿನ ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಬಿಂದಿಗೆಯ ನೀರಿಗೂ ತತ್ವಾರ.
ಹವಾಮಾನ ಏರುಪೇರಿನಪರಿಣಾಮವಾಗಿ ರಾಜ್ಯದಲ್ಲಿ ರೋಗ ರುಜಿನಗಳೂ ಹರಡುವ ಅಪಾಯವಿದೆ. ಕುಡಿಯುವ ನೀರಿನ ಪೂರೈಕೆ ಮತ್ತು ಸುದ್ಧೀಕರಣದ ಘಟಕಗಳ ನಿರ್ವಹಣೆ ವಿಚಾರದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತೀವ್ರ ನಿಗಾ ವಹಿಸುವುದು ಅಗತ್ಯ.
ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ ಮೊದಲಾದ ಜಿಲ್ಲೆಗಳಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಜನತೆಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಿದೆ. ಮಿಗಿಲಾಗಿ ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ನೈರ್ಮಲ್ಯ ಮತ್ತು ಶುಚಿ, ಶುಭ್ರತೆಯನ್ನು ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಸಮಕವಾಗಿ ನಿರ್ವಹಿಸಬೇಕಿದೆ. ಹೋಟೆಲು ಮತ್ತು ಹಣ್ಣು , ತರಕಾರಿ ಮಾರಾಟ ಕೇಂದ್ರಗಳ ಶುಚಿ ಕೂಡಾ ಅತಿ ಮುಖ್ಯ. ಈ ದಿಶೆಯಲ್ಲಿ ಜಿಲ್ಲೆ ಮತ್ತು ತಾಲೂಕು ಆಡಳಿತವು ತಮ್ಮ ವ್ಯಾಪ್ತಿಯಲ್ಲಿನ ಸಿಬ್ಬಂದಿ ಸಾರ್ವಜನಿಕ ಜನಾರೋಗ್ಯ ಮತ್ತು ಕರೆಂಟು ಮತ್ತು ನೀರು ಪೂರೈಕೆಯಲ್ಲಿ ಎಚ್ಚರ ತಪ್ಪದಿರುವುದು ಲೇಸು. ಉರಿ ಬಿಸಿಲಿನ ಸಮಯದಲ್ಲಿ ಜನತೆಗೆ, ತಾಲೂಕು, ಹೋಬಳಿ ಮತ್ತು ಗ್ರಾಮಗಳ ಮಟ್ಟದಲ್ಲಿ ತಲೆದೋರುವ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳ ಹಾಜರಾತಿ ಕಡ್ಡಾಯ. ಮುಂದಿನ ಎರಡು ಮೂರು ತಿಂಗಳು ಪ್ರತಿ ತಾಲೂಕಿನಲ್ಲಿ ತಮ್ಮ ಕಚೇರಿಗಳಲ್ಲಿ ಅಧಿಕಾರಿಗಳು ಜನತೆಗೆ ಎಟಕುವ ರೀತಿಯಲ್ಲಿರದ್ದರೆ ಒಳ್ಳೆಯದು. ಇಲ್ಲದಿದ್ದರೆ ಅಧಿಕಾರಿಗಳ ಗೈರುಹಾಜರಿ ಪರಿಣಾಮವಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳುಂಟು.
ರಾಜ್ಯದಲ್ಲಿ ಹರಿಯುವ ಜೀವ ನದಿಗಳ ಒಳಹರಿವು ಪ್ರಮಾಣದಲ್ಲಿ ಈಗ ವ್ಯತ್ಯಾಸವಾಗಿದೆ. ಇದರಿಂದಲೂ ಕೆಲವು ಕಡೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇನ್ನು ಜೀವ ನದಿಗಳ ಆಸರೆಯಿಲ್ಲದ ಜಿಲ್ಲೆಗಳಲ್ಲಿ ಅಂತರ್ಜಲ ಪ್ರಮಾಣ ಕುಸಿದಿದೆ. ಆದರೆ ರಾಜ್ಯದ ಕೆಲವು ಕಡೆ ಕೆರೆ, ಕುಂಟೆಗಳಲ್ಲಿ ನೀರು ಲಭ್ಯವಿದ್ದು ಇದೇ ನೀರನ್ನು ಸಂಕಷ್ಟ ಕಾಲದಲ್ಲಿ ಜನತೆಗೆ ಸಮರ್ಪಕವಾಗಿ ವಿತರಿಸುವ ಬಗ್ಗೆ ಅಧಿಕಾರ ವಗ್ ಮುತುವರ್ಜಿ ವಹಿಸಬೇಕಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಈ ದಿಶೆಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಪರ್ಯಟನೆ ನಡೆಸಿದಲ್ಲಿ ಕಡು ಬೇಸಿಗೆಯಲ್ಲಿ ಜನತೆ ಪ್ರತ್ಯಕ್ಷವಾಗಿ ಎದುರಿಸುತ್ತಿರುವ ಸಮಸ್ಯೆಗಳೇನೆಂಬುದು ಅರಿವಾದೀತು.


