ಮುಂಡಗೋಡ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಅಂಬಿಕಾ ಸಾವಜಿ ಹೊಟೇಲ್‌ನಲ್ಲಿ ನಡೆದಿದ್ದ ಜಮೀರ ಅಹ್ಮದ ದರ್ಗಾವಾಲೆ (38) ಅವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಘಟನೆ ನಡೆದ 24 ಗಂಟೆಯೊಳಗೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಎರಡು ದಿನದ ಹಿಂದೆ ಜಮೀರಅಹ್ಮದ ಅವರು ಸಾಧಿಕ ಚಾವೂಸನೊಂದಿಗೆ ಊಟಕ್ಕೆ ತೆರಳಿದ್ದಾಗ ನಾಲ್ಕೈದು ಜನರಿದ್ದ ಗುಂಪೊಂದು ಖಾರದಪುಡಿ ಎರಚಿ ಹತ್ಯೆ ಮಾಡಿತ್ತು. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಮುಂಡಗೋಡದ ಮಂಜುನಾಥ ನಾಗೇಂದ್ರ ಕಾಜಗಾರ (35), ಶ್ರೀಕಾಂತ ರಾಜಶೇಖರ ಕಿರಣ್ಣನವರ (22), ಧಾರವಾಡದ ಮಂಜುನಾಥ ವಿಷ್ಣು ಬೆಳಗಾಂವ (20), ಅಭಿಷೇಕ ಮಲ್ಲಿಕಾರ್ಜುನ ಬಡಶೆಟ್ಟಿ (22) ಮತ್ತು ದೀಪಕ ನಾಗರಾಜ ನವಲೆ (22) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಎರಡು ದ್ವಿಚಕ್ರ ವಾಹನಗಳು, ಒಂದು ಕಾರು, ಎರಡು ಕಂಟ್ರಿ ಮೇಡ್ ಪಿಸ್ತೂಲ್‌ಗಳು ಮತ್ತು 06 ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಮುಖ ಆರೋಪಿ ಮಂಜುನಾಥ ಕಾಜಗಾರನಿಗೆ ಮೃತ ಜಮೀರಅಹ್ಮದನೊಂದಿಗೆ ಮೀಟರ್ ಬಡ್ಡಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದ ವಿಷಯದಲ್ಲಿ ದ್ವೇಷವಿತ್ತು. ಉಳಿದ ನಾಲ್ಕು ಜನರಿಗೆ ಸುಪಾರಿ ನೀಡಿ, ಕೊಲೆ ಮಾಡಿಸಿರುವುದು ತನಿಖೆಯಲ್ಲಿ ಬಯಲಾಗಿದೆ.


