Menu

ವಿಮಾ ಕಂಪನಿಗಳು ರೈತರಿಗೆ ಪರಿಹಾರ ನೀಡದಿದ್ದರೆ ಪರಿಣಾಮ ಎದುರಿಸಬೇಕಾದೀತು: ಸಚಿವ ಪರಮೇಶ್ವರ

 

ರೈತರಿಗೆ ಸರಿಯಾದ ಪರಿಹಾರ ಸಿಗದಿದ್ದರೆ ವಿಮೆ ಮಾಡದಂತೆ ರೈತರಿಗೆ ನಾವೇ ಹೇಳಬೇಕಾಗುತ್ತದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ವಿಮಾ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ,  ವಿಮಾ ಕಂಪನಿ ರೈತರಿಂದ ವಿಮೆ ಮಾಡಿಸಿ ಪರಿಹಾರ ಕೊಡುವಾಗ ನಿಬಂಧನೆಗಳನ್ನು ವಿಧಿಸಿ ಕಡಿಮೆ ಪರಿಹಾರ ನೀಡುವುದು ಸರಿಯಲ್ಲ. ರೈತರಿಗೆ ಸರಿಯಾದ ವಿಮೆ ಸಿಗದಿದ್ದರೆ ಮುಂದಿನ ದಿನಗಳಲ್ಲಿ ನಾವೇ ರೈತರಿಗೆ ವಿಮಾ ಮಾಡದಂತೆ ತಿಳಿಸಬೇಕಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಹಾಗೂ ಜಿ.ಪ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಮಾ ಕಂಪನಿಗಳ ಸಭೆ ಕರೆದು ಚರ್ಚಿಸಿ ನಿಬಂಧನೆಗಳನ್ನು ಸಡಿಲಗೊಳಿಸಲು ತಿಳಿಸಬೇಕು. ಅಲ್ಲದೆ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಮುಂದಿನ ತೀರ್ಮಾನವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ತಿಳಿಸಿದರು.

ಕೃಷಿ ಇಲಾಖೆ ಮಾಹಿತಿ ಪಡೆಯುವ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಹೋಲಿಸಿದರೆ ಕುಣಿಗಲ್ ತಾಲೂಕಿನಲ್ಲಿ ಮಾತ್ರ ಅತ್ಯಂತ ಕಡಿಮೆ 1453 ರೈತರು ವಿಮೆ ಮಾಡಿಸಿದ್ದಾರೆ. ಕಾರಣ ಏನು ಎಂದು ಪ್ರಶ್ನಿಸಿದರು. ಶಾಸಕ ಎಚ್.ಡಿ.ರಂಗನಾಥ್ ಅವರು ಕೇಂದ್ರ ಸರ್ಕಾರದ ಮೇಲೆ ರೈತರು ವಿಶ್ವಾಸ ಕಳೆದುಕೊಂಡಿದ್ದಾರೆ. ಹಾಗಾಗಿ ರೈತರು ವಿಮೆ ಮಾಡಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೈತರಿಗೆ ವಿಮೆ ಮಾಡಿಸುವ ಸಂಬಂಧ ಜಾಗೃತಿ ಮೂಡಿಸಬೇಕು. ಅಲ್ಲದೆ ವಿಮಾ ಕಂಪನಿಗಳ ನಿಬಂಧನೆಗಳನ್ನು ಪರಿಷ್ಕರಿಸಬೇಕು ಹಾಗೂ ನಿಯಮಗಳ ಸಡಿಲಿಕೆಯೂ ಆಗಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಸಭೆಯಲ್ಲಿದ್ದ ಶಾಸಕರು ಆಗ್ರಹಿಸಿದರು.

ವಿಮಾ ಕಂಪನಿಗಳು ರೈತರ ವಿಮಾ ಹಣದಿಂದಲೇ ಬದುಕುತ್ತಿರವುದು. ಜಿಲ್ಲೆಯಲ್ಲಿ 7 ಕೋಟಿ ರೂ. ವಿಮೆ ಪಡೆದು 1.5 ಕೋಟಿ ರೂ. ಪರಿಹಾರ ನೀಡಿವೆ ಎಂದರೆ ಏನರ್ಥ ಎಂದು ಸಭೆಯಲ್ಲಿ ಶಾಸಕರು ಪ್ರಶ್ನಿಸಿದರು.  ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಾವು ಬೆಳೆನಷ್ಟದ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಚಿವರು ಸೂಚಿಸಿದರು.

ಪ್ರಸ್ತುತ ಜಿಲ್ಲೆಯ ಕೆಲವು ಭಾಗದಲ್ಲಿ ಸರ್ಕಾರಿ ಶಾಲೆ, ಕಟ್ಟಡಗಳು ಸೇರಿದಂತೆ ಡೀಮ್ಡ್ ಅರಣ್ಯ ವ್ಯಾಪ್ತಿಯಲ್ಲಿವೆ ಎಂದು ಹೇಳಲಾಗುತ್ತಿದೆ. ಇದು ಕಂದಾಯ ಹಾಗೂ ಅರಣ್ಯ ಇಲಾಖೆ ನಡುವೆ ತಿಕ್ಕಾಟ ಇದೆ. ಆದ್ದರಿಂದ ಅರ್ಯ ಇಲಾಖೆ ತಕ್ಷಣ ಜಂಟಿ ಸರ್ವೆ ಮಾಡಿಸಿ ಕಂದಾಯ ಇಲಾಖೆ ಜಾಗ ಇದ್ದರೆ ಕಂದಾಯ ಇಲಾಖೆಗೆ ಬಿಟ್ಟು ಕೊಡಬೇಕು ಎಂದರು.

ಜಿಲ್ಲೆಯಲ್ಲಿ 4584 ಜಾನುವಾರುಗಳ ಸಾವಿನ ಕಾರಣದ ಬಗ್ಗೆ ಚರ್ಚಿಸಲಾಯಿತು. ಸಂಬಂಧಿಸಿದ ಪರಿಹಾರಗಳನ್ನು ಶೀಘ್ರ ರೈತರಿಗೆ ನೀಡಬೇಕು. ನವಿಲುಗಳು ಸಾವೀಡಾಗುತ್ತಿರುವ ಬಗ್ಗೆ ವರದಿಯಾಗುತ್ತಿವೆ.  ಹಕ್ಕಿಜ್ಚರದ ಶಂಕೆ ವ್ಯಕ್ತವಾಗಿದ್ದು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ. ವಾರದಲ್ಲಿ ವರದಿ ಬರುವ ಸಾಧ್ಯತೆ ಇರುವುದರಿಂದ ಅಲ್ಲಿಯವರೆಗೆ ಕಾಯಬೇಕಾಗುತ್ತದೆ ಎಂದು ತಿಳಿಸಿದರು.

ರೇಷ್ಮೆ ಬೆಳೆಗಾರರಿಗೆ ನೀಡಬೇಕಾಗಿರುವ ಪ್ರೋತ್ಸಾಹ ಧನ ಹಾಗೂ ಬೋನಸ್ ಧನ 6 ಕೋಟಿ ರೂ. ವಿತರಣೆ ಬಾಕಿ ಇದ್ದು, ಈ ಬಗ್ಗೆ ಜಿಲ್ಲೆಯಿಂದ ರೇಷ್ಮೆ ಇಲಾಖೆ ಕೇಂದ್ರ ಕಚೇರಿಗೆ ಪತ್ರ ಬರೆದು ವಿತರಣೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಲಾ ಶಿಕ್ಷಣ ಇಲಾಖೆಯ ತುಮಕೂರು ಹಾಗೂ ಮಧುಗಿರಿ ಎರಡೂ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿರ್ದಿಷ್ಟ ವಿಷಯಗಳಲ್ಲಿ ಕಳಪೆ ಪ್ರಗತಿ ತೋರಿಸಿರುವ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಬೇಕು ಹಾಗೂ ಮುಂದಿನ ದಿನಗಳಲ್ಲಿ ಕಡಿಮೆ ಸಾಧನೆ ಮಾಡುವ ವಿದ್ಯಾರ್ಥಿಗಳ ಮೇಲೆ ವಿಶೇಷ ನಿಗಾ ಅವಶ್ಯವಿದೆ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ 139 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಒಟ್ಟು 34 ಹಳ್ಳಿಗಳಲ್ಲಿ ಟ್ರಾಕ್ಟರ್ ಹಾಗೂ ಖಾಸಗಿ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ 122 ಕೊಳವೆಬಾವಿಗಳಿಗೆ ಟಾಸ್ಕ್ ಫೋರ್ಸ್ ಮೂಲಕ ಅನುಮೋದನೆ ನೀಡಲಾಗಿದ್ದ ಈ ಪೈಕಿ 65 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ, 53 ನೀರು ಬಿದ್ದಿದೆ ಎಂಬ ಬಗ್ಗೆ ಮಾಹಿತಿ ಪಡೆದ ಸಚಿವರು, ಅಂತರ್ಜಲ ಕುಸಿತದಿಂದಾಗಿ ಮುಂದಿನ ದಿನಗಳಲ್ಲಿ ಇನ್ನೂ ತೀವ್ರ ಸಮಸ್ಯೆ ಸಾಧ್ಯತೆ ಇದ್ದು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾಗಿದೆ ಎಂದು ಸಚಿವರು ಮತ್ತು  ಅಧಿಕಾರಿಗಳಿಗೆ  ತಿಳಿಸಿದರು.

ಕುಡಿಯುವ ನೀರಿನ ವಿಷಯ ಕುರಿತು ಟಾಸ್ಕ್ ಫೋರ್ಸ್ ಸಭೆಗೆ ಸಮಿತಿಯ ಅಧ್ಯಕ್ಷರಾದ ಶಾಸಕರನ್ನು ಕರೆಸು ಸಭೆಗೆ ಕರೆಯಬೇಕು ಎಂದ ಸಚಿವರು, ಈಗಾಗಲೆ ಹೇಮಾವತಿ ನೀರು ಎರಡನೇ ತಾಕಿನ ನೀರು ಬಿಡುವಂತೆ ಹಾಸನ ಉಸ್ತುವಾರಿ ಸಚಿವರಿಗೆ ಕೋರಿದ್ದು ಎರಡು ದಿನದಲ್ಲಿ ನೀರು ಬರಲಿದೆ ಎಂದು ಉಸ್ತುವಾರಿ ಸಚಿವರು ಸಭೆಗೆ ಮಾಹಿತಿ ನೀಡಿದರು.

Related Posts

Leave a Reply

Your email address will not be published. Required fields are marked *