ರಾಯಚೂರು ಜಿಲ್ಲೆಯ ಮಾನ್ವಿ ಬೈಲ್ ಮರ್ಚೆಡ್ ಗ್ರಾಮದಲ್ಲಿ ಬಯಲು ನಾಟಕ ನೋಡುತ್ತಿದ್ದವರ ಮೇಲೆ ಕಮಾನು ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮೃತಪಟ್ಟ ಮಕ್ಕಳನ್ನು ವಿಶ್ವನಾಥ್ (8) ಹಾಗೂ ಸಾನ್ವಿತ (2) ಎಂದು ಗುರುತಿಸಲಾಗಿದೆ. ಏಳು ಜನರು ಕಮಾನು ಕೆಳಗೆ ಕುಳಿತು ನಾಟಕ ವೀಕ್ಷಿಸುತ್ತಿದ್ದರು. ಈ ವೇಳೆ ಕಮಾನಿನ ಗೋಡೆ ಕುಸಿದಿದೆ. ಸ್ಥಳದಲ್ಲೇ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಈ ಘಟನೆಯಲ್ಲಿ ನಾಲ್ವರು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಲಕ್ಷ್ಮಿ, ವಿಶಾಲಕ್ಷಿ, ಯಲ್ಲಮ್ಮ ಹಾಗೂ ಬಸಮ್ಮ ಎಂದು ಗುರುತಿಸಲಾಗಿದೆ. ಇವರ ಕಾಲು ಮುರಿದಿದೆ. ಬಸಮ್ಮ ಕೋಮಾ ಸ್ಥಿತಿಯಲ್ಲಿದ್ದಾರೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಲೆ ಮೇಲ ಕಲ್ಲು ಎತ್ತಿ ಹಾಕಿ ಸ್ನೇಹಿತನ ಕೊಲೆ
ಬೆಂಗಳೂರು ಸರ್ಜಾಪುರ ಸಮೀಪದ ಮಟ್ಟನಹಳ್ಳಿ ಕೆರೆ ಬಳಿ ಕುಡಿದ ಮತ್ತಲ್ಲಿ ಸ್ನೇಹಿತರ ನಡುವೆ ಜಗಳವಾಗಿ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಮೋಹನ್ (25) ಕೊಲೆಯಾದ ಯುವಕ.
ತಮಿಳುನಾಡಿನ ಸಿಂಗಸದನಪಲ್ಲಿ ಗ್ರಾಮದವನಾದ ಮೋಹನ್ ಸ್ನೇಹಿತ ಮನೋಜ್ ಜೊತೆ ಎಣ್ಣೆ ಪಾರ್ಟಿ ಮಾಡಲು ಬಂದಿದ್ದ. ಇಬ್ಬರೂ ಕಂಠಪೂರ್ತಿ ಕುಡಿದಿದ್ದರು. ಕುಡಿದ ನಶೆಯಲ್ಲಿ ಗಲಾಟೆ ನಡೆದಿದೆ. ಮನೋಜ್ ಅಲ್ಲೇ ಇದ್ದ ಕಲ್ಲನ್ನು ಮೋಹನ್ ತಲೆ ಮೇಲೆ ಎತ್ತಿಹಾಕಿದ್ದಾನೆ. ಮೋಹನ್ ಸ್ಥಳದಲ್ಲೇ ಅಸು ನೀಗಿದ್ದಾನೆ. ಆರೋಪಿ ಮನೋಜ್‌ನನ್ನು ಸರ್ಜಾಪುರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


