ಶಿವಮೊಗ್ಗದ ಗಾಜನೂರು ಬಳಿಯ ತುಂತುರು ರೆಸಾರ್ಟ್ನಲ್ಲಿ ವಿದ್ಯುತ್ ಶಾಕ್ಗೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅಬ್ಬಲಗೆರೆ ಗ್ರಾಮದ ನಿವಾಸಿ ನಾಗಮ್ಮ (45) ಮೃತಪಟ್ಟವರು.
ರೆಸಾರ್ಟ್ನಲ್ಲಿ ನಡೆಯುತ್ತಿದ್ದ ನಿಶ್ಚಿತಾರ್ಥ ಕಾರ್ಯಕ್ರಮದ ಕ್ಯಾಟರಿಂಗ್ ಕೆಲಸಕ್ಕೆ ನಾಗಮ್ಮ ತೆರಳಿದ್ದರು. ರೆಸಾರ್ಟ್ ಅಲಂಕಾರಕ್ಕಾಗಿ ಅಳವಡಿಸಲಾಗಿದ್ದ ಲೈಟಿಂಗ್ನಿಂದಾಗಿ ಬೇಲಿಗೆ ವಿದ್ಯುತ್ ಪ್ರವಹಿಸಿತ್ತು, ಈ ಬೇಲಿಯನ್ನು ಮುಟ್ಟಿದ ತಕ್ಷಣ ವಿದ್ಯುತ್ ಪ್ರವಹಿಸಿ ನಾಗಮ್ಮ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು. ಆ ವೇಳೆಗಾಗಲೆ ಅವರು ಮೃತಪಟ್ಟಿದ್ದಾರೆ. ಮೃತ ನಾಗಮ್ಮ ಅವರು ಅಬ್ಬಲಗೆರೆ ಗ್ರಾಮದ ನಾಗರಾಜ್ ಎಂಬವರ ಪತ್ನಿ. ಚಂದ್ರು ಎಂಬುವರ ಮಾಲೀಕತ್ವದ ಎಸ್.ಪಿ.ಎಸ್ ಕ್ಯಾಟರಿಂಗ್ನಲ್ಲಿ ಕೆಲಸ ಮಾಡುತ್ತಿದ್ದರು.
ವೇದಿಕೆಯ ಅಲಂಕಾರಕ್ಕೆ ಲೈಟ್ಗಳನ್ನು ಅಳವಡಿಸಲಾಗಿತ್ತು. ಇದರ ಬ್ಯಾಲೆನ್ಸ್ಗಾಗಿ ವೇದಿಕೆಯಿಂದ ಬೇಲಿಗೆ ತಂತಿ ಮೂಲಕ ಕಟ್ಟಲಾಗಿತ್ತು. ವೇದಿಕೆಯಲ್ಲಿ ಅಳವಡಿಸಿದ್ದ ಲೈಟಿಂಗ್ನಲ್ಲಿ ವಿದ್ಯುತ್ ಪ್ರವಹಿಸಿದ ವಿದ್ಯುತ್ ತಂತಿ ಬೇಲಿಗೆ ತಲುಪಿದೆ. ಇದರ ಅರಿವಿರದೆ ನಾಗಮ್ಮ ಅವರು ಅದೇ ತಂತಿ ಬೇಲಿ ಮೇಲೆ ಬಟ್ಟೆ ಒಣಗಿಸಿದ್ದಾರೆ. ಆಗ ವಿದ್ಯುತ್ ಶಾಕ್ಗೆ ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


