ಆಂಧ್ರದ ಲಕ್ಷಾಂತರ ಕುಟುಂಬಗಳಿಂದು ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಗಡಿ ಜಿಲ್ಲೆಗಳಲ್ಲಿ ತಮ್ಮ ಜೀವನೋಪಾಯಕ್ಕಾಗಿ ನೆಲೆಯನ್ನು ಕಂಡುಕೊಂಡಿದೆ. ಅಲ್ಲದೆ ತೆಲುಗಿನ ಸಾವಿರಾರು ಮಂದಿ ಉದ್ಯಮಿಗಳು ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಮತ್ತು ವಿವಿಧ ಕೈಗಾರಿಕೆಗಳ ವಲಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆಲಮಟ್ಟಿ ಎತ್ತರಕ್ಕೆ ಅಡ್ಡಿ ಹೇಳುವ ಮುನ್ನ ಚಂದ್ರಬಾಬು, ಈ ಸಂಗತಿಗಳನ್ನೂ ಗಮನಿಸುವುದು ಲೇಸು. ಆಂಧ್ರವೀಗ ಆಲೋಚಿಸಬೇಕಿರುವುದು ಆಲಮಟ್ಟಿ ಅಣೆಕಟ್ಟೆಯ ಎತ್ತರದ ವಿರದ್ಧವಲ್ಲ.
ಆಲಮಟ್ಟಿ ಅಣೆಕಟ್ಟು ಎತ್ತರಿಸುವ ವಿಷಯ ಮತ್ತೆ ಚರ್ಚೆಯಲ್ಲಿದೆ. ಕೃಷ್ಣಾ ಕಣಿವೆಯ ರಾಜ್ಯದ ಎಲ್ಲ ಕಾಮಗಾರಿ ಹಾಗೂ ಯೋಜನೆಗಳಿಗೆ ಅಡ್ಡಗಾಲು ಹಾಕಿರುವ ಆಂಧ್ರಪ್ರದೇಶ ಈಗ ಖ್ಯಾತೆ ತೆಗೆದಿದೆ ! ಕೃಷ್ಣಾ ನ್ಯಾಯಾಧಿಕರಣ ಮತ್ತು ಸುಪ್ರೀಂಕೋರ್ಟ್ ಅಣೆಕಟ್ಟು ಎತ್ತರಕ್ಕೆ ಅನುಮತಿಸಿ ತೀರ್ಪು ನೀಡಿದ್ದರೂ ನೆರೆ ರಾಜ್ಯದಿಂದ ಪುನಃ ಅಪಸ್ವರ ಎದ್ದಿದೆ. ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಈಗ ಹೊಸದಾಗಿ ಆಲಮಟ್ಟಿ ವಿಚಾರದಲ್ಲಿ ಭಿನ್ನರಾಗ ತೆಗೆದಿದ್ದಾರೆ.
೧೯೯೬ ರಿಂದ ೨೦೦೪ ರವರೆಗೆ ಅವಿಭಜಿತ ಆಂಧ್ರದ ಕೃಷ್ಣಾ ಕಣಿವೆಯಲ್ಲಿ ಕದ್ದು ಮುಚ್ಚಿ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಚಂದ್ರಬಾಬು, ಹೆಚ್ಚುವರಿ ನೀರನ್ನು ಸಾಕಷ್ಟು ಬಳಸಿ ಕೊಂಡಿರುವುದು ನಗ್ನಸತ್ಯ. ಕೃಷ್ಣಾ ನದಿಯ ಹೆಚ್ಚುವರಿ ನೀರು ಬಳಕೆ ವಿಚಾರದಲ್ಲಿ ನ್ಯಾಯಮಂಡಳಿ ಮತ್ತು ಸುಪ್ರೀಂಕೋರ್ಟ್ ಕರ್ನಾಟಕದ ಪರವಾಗಿ ಅತಿ ಸ್ಪಷ್ಟವಾದ ತೀರ್ಪು ನೀಡಿದ್ದರೂ ಇದನ್ನು ಮತ್ತೆ ವಿವಾದದ ತೆಕ್ಕೆಗೆ ಎಳೆಯಲು ಬಾಬು ಯತ್ನಿಸುತ್ತಿರುವುದು ಸ್ಪಷ್ಟ. ಅಣೆಕಟ್ಟುವಿನ ಎತ್ತರದ ವಿಚಾರದಲ್ಲಿ ದೇಶದ ಸರ್ವೋನ್ನತ ನ್ಯಾಯಪೀಠವು ನೀಡಿರುವ ತೀರ್ಪಿಗೆ ಭಂಗ ತರುವ ರೀತಿಯಲ್ಲಿ ಚಂದ್ರಬಾಬು ಈಗ ಮಾತನಾಡುವುದು ದುರದೃಷ್ಟಕರ.
೧೯೭೩ರಿಂದಲೂ ಆಂಧ್ರವು ಕೃಷ್ಣಾ ನದಿ ನೀರಿನ ವಿಚಾರದಲ್ಲಿ ಒಂದಲ್ಲ ಒಂದು ವಿಧದಲ್ಲಿ ಕರ್ನಾಟಕದ ವಿರುದ್ಧ ತಗಾದೆ ತೆಗೆದು ಕೇಂದ್ರದ ಮೇಲೆ ಒತ್ತಡ ಹೇರಿರುವುದು ಸತ್ಯಕ್ಕೆ ದೂರವಾದ ಸಂಗತಿಯೇನಲ್ಲ.ಆಲಮಟ್ಟಿ ಅಣೆಕಟ್ಟು ಎತ್ತರಿಸುವ ಕರ್ನಾಟಕದ ಅಧಿಕಾರವನ್ನು ನ್ಯಾಯಮಂಡಳಿಯಾಗಲಿ, ಸುಪ್ರೀಂಕೋರ್ಟ್ ಆಗಲಿ ತಿರಸ್ಕರಿಸಿಲ್ಲ ಎಂಬುದು ಗಮನಾರ್ಹ. ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಕಣಿವೆಯ ಕೆಳದಂಡೆ ಪ್ರದೇಶದ ರೈತರಿಗೆ ತೊಂದರೆಯಾಗದಂತೆ ಇಲ್ಲಿನ ಸರ್ಕಾರಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಕೋರ್ಟುಗಳು ಸೂಚಿಸಿದ್ದರೂ, ಕರ್ನಾಟಕದ ನೀರಾವರಿ ಹಿತಾಸಕ್ತಿಗೆ ವಿರುದ್ಧವಾಗಿ ಆಂಧ್ರ ಸರ್ಕಾರ ಮತ್ತೆ ವಿವಾದಗಳನ್ನು ಹುಟ್ಟು ಹಾಕುತ್ತಿರುವುದು ಸರಿಯಲ್ಲ.
ಒಂದೆಡೆ ರಾಜ್ಯದ ಕೃಷ್ಣಾ ಕಣಿವೆಯಲ್ಲಿ ಸಕಾಲದಲ್ಲಿ ಪೂರ್ಣಗೊಳ್ಳದ ಸಿವಿಲ್ ಕಾಮಗಾರಿ. ಇದರ ಪರಿಣಾಮವಾಗಿ ರಾಜ್ಯದ ನೀರಿನ ಪಾಲನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಆಗದಿರುವುದು ! ಅಣೆಕಟ್ಟೆಯನ್ನು ಸಂಪರ್ಕಿಸಲು ಅಗತ್ಯವಾದ ನೀರಾವರಿ ಕಾಲುವೆ ಮತ್ತು ಉಪಕಾಲುವೆಗಳ ನಿರ್ಮಾಣದಲ್ಲಿ ರಾಜ್ಯ ಸರ್ಕಾರ ಎಡವಿರುವುದು ನಿಜ. ಆದರೆ ಇದನ್ನೇ ತನ್ನ ಸ್ವಲಾಭಕ್ಕೆ ಬಳಸಿ ಕೊಂಡಿದ್ದನ್ನು ಮತ್ತು ತೆಲುಗುಗಂಗಾ ಯೋಜನೆಯಡಿ ತಲೆಯೆತ್ತಿದ ಅಕ್ರಮ ಕಾಮಗಾರಿಗಳನ್ನು ಕೆಡವಲು ಸುಪ್ರೀಂಕೋರ್ಟ್ ದಶಕದ ಹಿಂದೆಯೆ ಸೂಚನೆ ನೀಡಿದ್ದರೂ ಅದಿನ್ನೂ ಕಾರ್ಯಗತಗೊಂಡಿಲ್ಲ.
ಅಕ್ರಮ ಕಾಮಗಾರಿಗಳ ವಿರುದ್ದ ಕರ್ನಾಟಕವು ಆಂಧ್ರದ ವಿರುದ್ದ ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಇನ್ನೂ ವಿಲೇವಾರಿಯಾಗಿಲ್ಲ. ಅದೇನೆ ಇರಲಿ. ಆಂಧ್ರವೀಗ ಆಲೋಚಿಸಬೇಕಿ ರುವುದು ಆಲಮಟ್ಟಿ ಎತ್ತರದ ವಿರುದ್ದವಲ್ಲ. ಲಕ್ಷಾಂತರ ಆಂಧ್ರದ ಕುಟುಂಬಗಳಿಂದು ರಾಜಧಾನಿ ಬೆಂಗಳೂರು ಮತ್ತು ಗಡಿ ಜಿಲ್ಲೆಗಳಲ್ಲಿ ತಮ್ಮ ಜೀವನೋಪಾಯಕ್ಕೆ ಆಸರೆ ಪಡೆದಿವೆ. ಅಲ್ಲದೆ ತೆಲುಗಿನ ಸಾವಿರಾರು ಮಂದಿ ಉದ್ಯಮಿಗಳು ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಮತ್ತು ವಿವಿಧ ಕೈಗಾರಿಕೆಗಳ ವಲಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆಲಮಟ್ಟಿ ಎತ್ತರಕ್ಕೆ ಅಡ್ಡಿ ಹೇಳುವ ಮುನ್ನ ಚಂದ್ರಬಾಬು ಮೇಲಿನ ಸಂಗತಿಗಳನ್ನೂ ಗಮನಿಸುವುದು ಲೇಸು.


