Menu

2028ರ ಚುನಾವಣೆ ಹೇಗೆ ಎದುರಿಸಬೇಕು ಅನ್ನೋದು ಗೊತ್ತಿದೆ: ಸಿಎಂ ಡಿಕೆ ಶಿವಕುಮಾರ್‌

2028ರ ಚುನಾವಣೆ ಹೇಗೆ ಎದುರಿಸಬೇಕು ನನಗೆ ಗೊತ್ತಿದೆ. ನಾನು ಫುಟ್ಬಾಲ್ ಆಡುವವನಲ್ಲ, ಚೆಸ್ ಆಡುವವನು. ಜನರ ಸೇವೆ ಮಾಡುವಾಗ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ನಾವು ವಿರೋಧ ಪಕ್ಷಕ್ಕೆ ಹೋಗಬಹುದು, ವಿರೋಧ ಪಕ್ಷದವರು ಇಲ್ಲಿಗೆ ಬರಬಹುದು. ಜನರು ನಮ್ಮೆಲ್ಲರನ್ನು ಆಯ್ಕೆ ಮಾಡಿರುವುದು ರಾಜ್ಯದ ಹಿತ ಕಾಪಾಡಲು. ಸಭಾಧ್ಯಕ್ಷರ, ಸ್ಥಾನದಲ್ಲಿ ಕುಳಿತಿರುವ ಟಿ ಬಿ ಜಯಚಂದ್ರ ಹಿರಿಯರು. ಆ ಸ್ಥಾನದ ಮಹಿಮೆ ದೊಡ್ಡದು. ಅದನ್ನು ಅಲಂಕರಿಸಿದ ಕೃಷ್ಣ ಅವರು ಸಿಎಂ ಆದರು, ಅಲ್ಲಿ ಕುಳಿತಿದ್ದ ಜಗದೀಶ್ ಶೆಟ್ಟರ್  ಸಿಎಂ ಆದರು. ಖಾದರ್  ಅಲ್ಲಿ ಕೂತು ಈಗ ಡಬಲ್ ಇಲಾಖೆ ಧಮಾಕದೊಂದಿಗೆ ಇಲ್ಲಿ ಕೂತಿದ್ದಾರೆ. ಎಲ್ಲರೂ ಭರವಸೆಯಿಂದ ಇರೋಣ ಎಂದು ಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ನಾವು ಇಷ್ಟೂ ಜನ ಯಾರ ಮೇಲೂ ದ್ವೇಷ ಮಾಡದೇ, ರಾಜ್ಯದ ಹಿತಕ್ಕಾಗಿ ಕೆಲಸ ಮಾಡುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ಒಂದಾಗಿ ಕೆಲಸ ಮಾಡಬೇಕು. ಕೇಂದ್ರ ಸರ್ಕಾರದ ಸಚಿವರನ್ನು ನಾವು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲು ಬಯಸುತ್ತೇವೆ. ನೀರಾವರಿ ವಿಚಾರದಲ್ಲಿ ಪ್ರಹ್ಲಾದ್ ಜೋಷಿ ಅವರು ನಮಗೆ ಕೊಟ್ಟ ಸಹಕಾರವನ್ನು ಅಭಿನಂದಿಸುತ್ತೇವೆ.  ಕುಮಾರಸ್ವಾಮಿ  ಕೇಂದ್ರ ಸರ್ಕಾರದಲ್ಲಿ ಅತಿ ದೊಡ್ಡ ಖಾತೆ ಹೊಂದಿದ್ದಾರೆ. ಅವರು ರಾಜ್ಯದ ಜನರಿಗೆ 25 ಸಾವಿರ ಉದ್ಯೋಗ ಕಲ್ಪಿಸಬಹುದು.  ಎಲ್ಲಿ ಜಾಗ ಕೇಳುತ್ತಾರೋ ಅಲ್ಲಿ ಕೊಡೋಣ. ಎಷ್ಟೇ ಆದರೂ ನಮ್ಮ ನಾಡಿನ ಜನರಿಗೆ ಉದ್ಯೋಗ ಕಲ್ಪಿಸುವುದು ಮುಖ್ಯ. ಅವರು ನನ್ನ ಬಗ್ಗೆ ಎಷ್ಟೇ ಬೇಸರ ಹೊಂದಿದ್ದರೂ ಅವರ ಜೊತೆಗೆ ಕೆಲಸ ಮಾಡಲು ನಾನು ಸಿದ್ಧ ಎಂದರು.

ವಿಧಾನಸಭೆಯಲ್ಲಿ ಸಚಿವ ಸಂಪುಟ ಸಹೋದ್ಯೋಗಿಗಳನ್ನು ಸದನಕ್ಕೆ ಪರಿಚಯಿಸಿ ಶಿವಕುಮಾರ್  ಮಾತನಾಡಿದರು. ಅಧಿಕಾರದಲ್ಲಿ ನಾನು ಹೆಚ್ಚು ಸ್ನೇಹಿತರನ್ನು ಗಳಿಸಲು ಬಯಸುತ್ತೇನೆ. ಎಲ್ಲರಿಗೂ ನೆರವು ನೀಡಲು ಬಯಸುತ್ತೇನೆ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವೆ. ನನ್ನ ಈ ಸ್ಥಾನ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನುಕೂಲವಾಗುವಂತಾಗಬೇಕು. ಸಿದ್ದರಾಮಯ್ಯ ಅವರು 8 ವರ್ಷ ಕೊಟ್ಟ ಭಾಗ್ಯಗಳನ್ನು  ಮುಂದುವರಿಸಿ ಕೊಂಡು ಹೋಗುತ್ತೇನೆ ಎಂದು ಹೇಳಿದರು.

ಪ್ರತಿಯೊಬ್ಬ ವ್ಯಕ್ತಿಗೂ ಹೊಸ ಆಲೋಚನೆಗಳಿರುತ್ತವೆ. ಹೊಸ ಆಲೋಚನೆ, ಭರವಸೆ, ನಂಬಿಕೆ ಮೂಲಕ ಜನರ ವಿಶ್ವಾಸ ಗಳಿಸುವುದು ನಮ್ಮ ಕರ್ತವ್ಯ. ನಮ್ಮ ಶಾಸಕರು, ವಿರೋಧ ಪಕ್ಷದ ಶಾಸಕರು, ನಾಯಕರು, ನಮ್ಮ ಸಚಿವ ಸಂಪುಟದ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ರಾಜ್ಯದ ಜನರ ಅಭಿವೃದ್ಧಿಗೆ ಟೀಮ್ ಕರ್ನಾಟಕವಾಗಿ ಕೆಲಸ ಮಾಡಬೇಕು.  ಈಗ ನನಗೆ ಸಿಕ್ಕಿರುವ ಅವಕಾಶದಲ್ಲಿ 224 ಶಾಸಕರೂ ನನ್ನ ದೃಷ್ಟಿಯಲ್ಲಿ ಒಂದೇ. ನಾನು ಈ ಸ್ಥಾನದಲ್ಲಿ ಕೂತು ಎಲ್ಲರನ್ನು ಒಟ್ಟಿಗೆ ಕರೆದೊಯ್ಯಬೇಕು ಎಂಬುದು ನನ್ನ ಆಸೆ ಎಂದು ಸಿಎಂ  ತಿಳಿಸಿದರು. ಈವರೆಗೆ ಆಗಿ ಹೋದ ರಾಜ್ಯದ ಎಲ್ಲ ಮುಖ್ಯಮಂತ್ರಿಗಳನ್ನು ಸ್ಮರಿಸಿದರು.

ಬೆಂಗಳೂರು ಬೆಳವಣಿಗೆ ಕಾಣುತ್ತಿರುವಂತೆ ರಾಜ್ಯದ ಎರಡು ಹಾಗೂ ಮೂರನೇ ಹಂತದ ನಗರಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ.  ಉಪನಗರ ಅಭಿವೃದ್ಧಿ ಮಾಡಬೇಕು. ನಾವು ಹೊಸ ಯೋಜನೆ, ರಿಂಗ್ ರಸ್ತೆ ಮಾಡುತ್ತಿದ್ದೇವೆ. ದೇವೇಗೌಡರು ನೈಸ್ ರಸ್ತೆಗೆ ಸಹಿ ಹಾಕಿದರು.  ಆ ರಸ್ತೆನೇ ಇಲ್ಲವಾಗಿದ್ದರೆ ಬೆಂಗಳೂರು ಪರಿಸ್ಥಿತಿ ಏನಾಗುತ್ತಿತ್ತು. ಆ ಯೋಜನೆಯಲ್ಲಿ ಅನ್ಯಾಯ ಆಗಿದ್ದರೆ ಅದನ್ನು ಸರಿ ಮಾಡೋಣ. ಕುಮಾರಸ್ವಾಮಿ ಒಳ್ಳೆಯ ಉದ್ದೇಶ ಇಟ್ಟುಕೊಂಡು ಸಹಿ ಹಾಕಿದ್ದಾರೆ. ಯಡಿಯೂರಪ್ಪ  ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿ, ಅನ್ನದಾತರಿಗೆ ಕೊಡುಗೆ ನೀಡಿದ್ದಾರೆ ಎಂದರು.

ಸಭಾಧ್ಯಕ್ಷರ ಪೀಠ ವೈಯಕ್ತಿಕ ಸ್ಥಾನವಲ್ಲ. ನಮ್ಮ ಪಕ್ಷದ ನಾಯಕರು ಈ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಸೂಚಿಸಿದ್ದಾರೆ ಹೊರತು ಅವರನ್ನೇ ಸಭಾಧ್ಯಕ್ಷರನ್ನಾಗಿ ಘೋಷಣೆ ಮಾಡಿಲ್ಲ. ಇದಕ್ಕೆ ವಿರೋಧ ಪಕ್ಷದ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ. ಸ್ಪೀಕರ್ ಆದವರು ಪಕ್ಷಾತೀತತರು. ಎಲ್ಲರ ಮಾತಿಗೂ ಕಿವಿಗೊಡಬೇಕು. ಹೀಗಾಗಿ ವಿರೋಧ ಪಕ್ಷದವರು ವಿರೋಧ ಮಾಡುವುದನ್ನು ಬಿಟ್ಟು ಸಭಾಧ್ಯಕ್ಷರ ಆಯ್ಕೆಯಲ್ಲಿ ಭಾಗವಹಿಸಬೇಕಿತ್ತು. ವಿರೋಧ ಮಾಡುವುದು ಅವರ ಘನತೆಗೆ ತಕ್ಕದಲ್ಲ ಎಂದು ಅಭಿಪ್ರಾಯಪಟ್ಟರು.

ಮುಂದಿನ 25 ವರ್ಷಗಳಲ್ಲಿ ರಾಜ್ಯವನ್ನು ಹಸಿರು ರಾಜ್ಯವನ್ನಾಗಿ ಮಾಡಿ, ನೀರಿನ ಪೋಲು ತಡೆಗಟ್ಟಿ ಕೃಷಿಗೆ ಬಳಸಬೇಕು. ಪ್ರತಿಯೊಬ್ಬ ರೈತರ ಬದುಕಿಗೆ ಆಸರೆಯಾಗಬೇಕು. ಸರ್ಕಾರ ಗ್ರಾಮೀಣ ಭಾಗದ ಜನರು, ಮಕ್ಕಳು ಶಿಕ್ಷಣಕ್ಕಾಗಿ ನಗರಕ್ಕೆ ವಲಸೆ ಬರುವುದನ್ನು ತಪ್ಪಿಸಲು ಸಿಎಸ್ಆರ್ ನಿಧಿಯನ್ನು ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ ಮೀಸಲಿಡಲು ತೀರ್ಮಾನಿಸಿದ್ದೇವೆ.  ರಾಜ್ಯವನ್ನು ಡ್ರಗ್ಸ್ ಮುಕ್ತಗೊಳಿಸಲು ಕ್ರಮ ವಹಿಸಿದ್ದೇವೆ.  ಇ ಖಾತೆ, ಬಿ ಟು ಎ ಖಾತಾ ಎಲ್ಲವನ್ನು ನೀಡುತ್ತಿದ್ದೇವೆ. ನಮ್ಮ ಸರ್ಕಾರ ಇರುವುದೇ ಜನರಿಗಾಗಿ. ಸರ್ಕಾರಿ ನೌಕರರು ಗ್ಯಾರಂಟಿ ಯೋಜನೆ ತ್ಯಜಿಸಲು ಮುಂದಾಗಿದ್ದು, ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ವಿರೋಧ ಪಕ್ಷದ ನಾಯಕರನ್ನು ಬಿಟ್ಟು ಕೆಲಸ ಮಾಡಲು ಆಗುವುದಿಲ್ಲ. ಅಧಿಕಾರ ದುರುಪಯೋಗ ಮಾಡಿ ಯಾರಿಗೂ ತೊಂದರೆ ನೀಡಲು ನಾನು ಬಯಸುವುದಿಲ್ಲ. ಅಧಿಕಾರದ ವಿಚಾರವಾಗಿ ಅಶೋಕ್  ಇದೇ ಸದನದಲ್ಲಿ ಮಾತನಾಡಿದಾಗ, ನಾನು ಒಂದು ಮಾತು ಹೇಳಿದ್ದೆ. ಧೈರ್ಯಶಾಲಿ ಒಬ್ಬ ವ್ಯಕ್ತಿಯಿಂದ ಬಹುಮತ ಸಾಧ್ಯವಾಗುತ್ತದೆ. ಸಿದ್ದರಾಮಯ್ಯ  ಸೇರಿದಂತೆ ನಾವು 136 ಜನ ಒಂದೇ ಎಂದು ಹೇಳಿದ್ದೆ. ನಾನು ಅದನ್ನು ಸಾಬೀತುಪಡಿಸಿದ್ದೇನೆ. ನಾವು ಒಟ್ಟಾಗಿ ಹೋರಾಟ ಮಾಡುತ್ತೇವೆ. ಅಂತಿಮ ಫಲಿತಾಂಶವನ್ನು ಜನ ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.

ಸಭಾಧ್ಯಕ್ಷರಾಗಿ ಆಯ್ಕೆಯಾದ ಜಿ ಎಸ್ ಪಾಟೀಲ್ ಅವರಿಗೆ ಅಭಿನಂದನೆ

ವಿಧಾನಸಭೆ ಸಭಾಧ್ಯಕ್ಷರಾಗಿ ಜಿ ಎಸ್ ಪಾಟೀಲ್ ಅವರ ಆಯ್ಕೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಅಭಿನಂದನೆ ಸಲ್ಲಿಸಿ ನಿಮಗೆ ಭಗವಂತ ಒಳ್ಳೆಯದು ಮಾಡಲಿ. ನೀವು ಆ ಸ್ಥಾನದಲ್ಲಿ ಕುಳಿತು ನ್ಯಾಯವನ್ನು ನೀಡಿ. ನೀವು  ನಮ್ಮದು ಮಾತ್ರವಲ್ಲ, ವಿರೋಧ ಪಕ್ಷದವರ ಧ್ವನಿ ಆಲಿಸಿ. ನೀವು ಎತ್ತರದ ಸ್ಥಾನದಲ್ಲಿದ್ದು ಇನ್ನಷ್ಟು ಎತ್ತರಕ್ಕೆ ಬೆಳೆಯಿರಿ ಎಂದು 224 ಶಾಸಕರ ಪರವಾಗಿ ಶುಭ ಹಾರೈಸುತ್ತೇನೆ ಎಂದರು.

ಮೊದಲಿಗೆ ಟಿ ಬಿ ಜಯಚಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು 1978ರಿಂದ ಶಾಸಕರಾಗಿದ್ದು, ಹಂಗಾಮಿ ಸಭಾಧ್ಯಕ್ಷರಾಗಿ ನಿಮ್ಮ ಆಯ್ಕೆಗೆ ನೆರವಾಗಿದ್ದಾರೆ.  ಖಾದರ್ ಅವರು ಮೂರು ವರ್ಷಗಳ ಅವಧಿಯಲ್ಲಿ ವಿಧಾನಸಭೆಗೆ ಹೊಸ ರೂಪ ನೀಡಲು ಪ್ರಯತ್ನಿಸಿದ್ದಾರೆ. ಮಧ್ಯರಾತ್ರಿವರೆಗೂ ಸದನ ನಡೆಸಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರಿಗೆ ನಮ್ಮೆಲ್ಲರ ಪರವಾಗಿ ಅಭಿನಂದಿಸುವೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *