ರಾಯಚೂರು ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಸಹಿತ ಮಳೆ ಸಾರ್ವಜನಿಕರನ್ನು ಕಂಗೆಡಿಸಿದೆ. ಮಳೆಯ ಅಬ್ಬರದ ನಡುವೆ ಸಿಡಿಲಿನ ಹೊಡೆತಕ್ಕೆ ಲಿಂಗಸೂಗೂರು ತಾಲೂಕಿನಲ್ಲಿ ರೈತ ಮಹಿಳೆ ಬಲಿಯಾಗಿದ್ದಾರೆ.
ಲಿಂಗಸೂಗೂರು ತಾಲೂಕಿನ ಯರಜಂತಿ ಬಳಿಯ ಬಸವನ ಬಗಡಿ ದೊಡ್ಡಿಯಲ್ಲಿ ಈ ದುರಂತ ಸಂಭವಿಸಿದೆ. ಮಳೆ ಬರುತ್ತಿದ್ದ ಕಾರಣ ಜಮೀನಿನಲ್ಲಿದ್ದ ಮೇವಿನ ಬಣವೆ ನೆನೆಯಬಾರದೆಂದು ಅದಕ್ಕೆ ತಾಡಪಾಲು ಹೊದಿಸಲು 40 ವರ್ಷದ ದುರುಗಮ್ಮ ತೆರಳಿದ್ದರು. ಆಗ ಬಡಿದ ಸಿಡಿಲಿಗೆ ಸ್ಥಳದಲ್ಲೇ ಅಸು ನೀಗಿದ್ದಾರೆ.
ಮಾನ್ವಿ ತಾಲೂಕಿನ ಹಿರೇದಿನ್ನಿ ಗ್ರಾಮದಲ್ಲಿ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಹೊತ್ತಿ ಉರಿದಿದೆ. ಮಳೆಯ ಅವಾಂತರ ಮುಂದುವರಿದಿದ್ದು, ರೈತರು ಮತ್ತು ಸಾರ್ವಜನಿಕರು ಗುಡುಗು-ಸಿಡಿಲಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ. ಬಳ್ಳಾರಿಯಲ್ಲಿ ಬಿರುಗಾಳಿ ಮಳೆಗೆ ಮರಗಳು ಮುರಿದಿದ್ದು, ಹಲವು ವಾಹನಗಳು ಜಖಂ ಆಗಿವೆ. ರಾಣೆಬೆನ್ನೂರಿನಲ್ಲಿ ಸುರಿದ ಮಳೆಗೆ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಗಿತ್ತು.
ಕಳೆದ ಎರಡು ಮೂರು ದಿನಗಳಲ್ಲಿ ಹಾವೇರಿ, ಗದಗ, ಮಂಡ್ಯ, ಮೈಸೂರು, ಶಿವಮೊಗ್ಗ ಸೇರಿ ಕೆಲವೆಡೆ ಜೋರು ಮಳೆ ಆಗಿದೆ. ಸೋಮವಾರ ಸುರಿದ ಮಳೆಗೆ ಹಾಸನ ಜಿಲ್ಲೆಯಲ್ಲಿ ಮರದ ಕೆಳಗೆ ನಿಂತಿದ್ದ ವೃದ್ಧೆ ನೀಲಮ್ಮ ಸಿಡಿಲು ಬಡಿದು ಅಸು ನೀಗಿದ್ದಾರೆ. ಅರಕಲಗೂಡಿನನಲ್ಲಿ ಬಿರುಗಾಳಿಗೆ ಕಾಲೇಜು ಹಾಗೂ ಅಂಗಡಿಗಳ ಶೀಟ್ ಗಳು ಹಾರಿ ಹೋಗಿವೆ. ಚಿಕ್ಕಮಗಳೂರಲ್ಲಿಯೂ ಮಳೆ ಬಿರುಸಾಗಿ ಸುರಿದಿತ್ತು.
ಏಪ್ರಿಲ್ 25ರವರೆಗೆ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಈ ಅವಧಿಯಲ್ಲಿ ಕರಾವಳಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.


